Advertisement

ಕಾರ್ಮಿಕರಾಗಿ ಹಗಲು ವಿದ್ಯುತ್ ತಂತಿ ಎಳೆದವರು ರಾತ್ರಿ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದರು

04:48 PM Jan 14, 2024 | Team Udayavani |

ಕುಷ್ಟಗಿ: ಹಗಲು ವೇಳೆ ಕಾರ್ಮಿಕರಾಗಿ ಇಲ್ಲಿನ ಹೊಸ ಲೇಔಟ್ ನಲ್ಲಿ ವಿದ್ಯುತ್ ಕಂಬಗಳಿಗೆ ವಿದ್ಯುತ್ ತಂತಿ ಅಳವಡಿಸಿದವರೇ ರಾತ್ರಿ ವೇಳೆ ಕಳ್ಳರಾಗಿ ಬಂದು ವಿದ್ಯುತ್ ಕಂಬಗಳಲ್ಲಿ ಹಾಕಿದ್ದ ತಂತಿಗಳನ್ನು ಕಳ್ಳತನ ಮಾಡಿದ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

Advertisement

ಪಟ್ಟಣದ ಹೊರವಲಯದಲ್ಲಿರುವ ಮಾಜಿ ಸಚಿವ ಶಿವನಗೌಡ ಪಾಟೀಲ್ ಅವರಿಗೆ ಸೇರಿದ ಕೆವಿಸಿ ಲೇಔಟ್ ನಲ್ಲಿ ವಿದ್ಯುತ್ ಕಂಬಗಳಿಗೆ ವಿದ್ಯುತ್ ತಂತಿ ಅಳವಡಿಸಿ ಕೆಲವೇ ದಿನಗಳಲ್ಲಿ ತಂತಿ ಮಾಯವಾಗಿದ್ದವು. ಈ ಹಿನ್ನೆಲೆಯಲ್ಲಿ ಲೇಔಟ್ ಮಾಲೀಕರು ಕಳೆದ ಜ.10ರ ಮದ್ಯಾಹ್ನದಿಂದ ಜ.11ರ ಬೆಳಗ್ಗೆ 8 ರ ಅವಧಿಯಲ್ಲಿ 18 ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಕಳವಾಗಿರುವ ಬಗ್ಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಕುಷ್ಟಗಿ ಪೊಲೀಸರು, ಈ ಲೇಔಟ್ ಗೆ ವಿದ್ಯುತ್ ಕಂಬ ಹಾಗೂ ತಂತಿ ಎಳೆಯಲು ಬಂದ ಕಾರ್ಮಿಕರಾದ ಚಿಕ್ಕನಂದಿಹಾಳ ಗ್ರಾಮದ ಮುತ್ತಣ್ಣ ಅಡಿವೆಪ್ಪ ಬುಕನಟ್ಟಿ, ಅಮರೇಶ ನಿಂಗಪ್ಪ ಕಾತ್ರಳ, ಯಲ್ಲಪ್ಪ ನಾಗಪ್ಪ ದಂಬಡಿ, ಶರಣಪ್ಪ ಹನಮಪ್ಪ ಸೂಳಿಕೇರಿ ಮಂಜುನಾಥ ಹನುಮಗೌಡ ಪೊಲೀಸ್ ಪಾಟೀಲ ಸೇರಿಕೊಂಡು ಕಳುವು ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದ್ದು , ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದನ್ನು ಖಚಿತ ಪಡಿಸಿಕೊಂಡೇ ಕಳ್ಳತನ ಮಾಡಿದ್ದರು. ವಿದ್ಯುತ್ ತಂತಿಯ ಮೌಲ್ಯ 1,400 ಕೆಜಿಯ ಒಟ್ಟು 2.80 ಲಕ್ಷ ರೂ. ಹಾಗೂ ಈ ಕಾರ್ಯಾಚರಣೆ ಯಲ್ಲಿ 2ಲಕ್ಷ ರೂ. ಮೌಲ್ಯದ ವಾಹನ ಸೇರಿದಂತೆ ಒಟ್ಟು 4.80 ಲಕ್ಷ ರೂ, ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ಯಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದು ರಂಗಸ್ವಾಮಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಹಾಗೂ ಪೊಲೀಸರಾದ ಎಂ.ಬಿ. ಇನಾಯತ್, ಅಮರೇಶ ಹುಬ್ಬಳ್ಳಿ, ಪ್ರಶಾಂತ ಪಟ್ಟಣಶೇಟ್ಟಿ, ನೀಲಕಂಠಸ್ವಾಮಿ, ಶರ್ಪುದ್ದೀನ್ ಸಿಡಿಆರ್ ವಿಭಾಗದ ಪ್ರಸಾದ್, ಕೋಟೇಶ ಭಾಗವಹಿಸಿ ಕಾರ್ಯಚರಣೆ ಯಶಸ್ವಿಗೊಳಿಸಿದ್ದಾರೆ. ಕುಷ್ಟಗಿ ಪೊಲೀಸರ ಯಶಸ್ವಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಯಶೋಧ ವಂಟಿಗೋಡಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಅಭಿನಂಧಿಸಿ ಪ್ರೋತ್ಸಾಹ ಬಹುಮಾನ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next