Advertisement
ಪುಳಿಂಚ ರಾಮಯ್ಯ ಶೆಟ್ಟರು ತೀರಾ ಸಂಪ್ರದಾಯಬದ್ಧ ವೇಷಧಾರಿ ಯಾಗಿಯೇ ರಂಗಕ್ಕೆ ಬಂದವರು. 1959 ರಿಂದ ಧರ್ಮಸ್ಥಳ ಮೇಳದಲ್ಲಿ ಪುಂಡು ವೇಷ ಹಾಕಿ ರಂಗಸ್ಥಳ ಹುಡಿ ಹಾರಿಸಿದ ಅವರು ಮೂಲ್ಕಿ ಮೇಳದಲ್ಲಿ (1973) ರಾಜವೇಷ ತೊಟ್ಟು ರಾರಾಜಿಸಿದರು. ಬಳಿಕ ಕೂಡ್ಲು ಮೇಳದಲ್ಲಿ (1977) ಒಂದನೇ ಬಣ್ಣದ ವೇಷ ಧರಿಸಿ ಯಕ್ಷರಾತ್ರಿಗಳನ್ನು ನಡುಗಿಸಿದ ಪುಳಿಂಚ, ಇರುಳು ಬೆಳಗಾಗು ವುದರಲ್ಲಿ ತನ್ನ ಪೌರಾಣಿಕ ಆವರಣವನ್ನು ಕಳಚಿ ತುಳು ಯಕ್ಷ ಹಾಸ್ಯಭೂಮಿಕೆಗಳಲ್ಲಿ ಪ್ರೇಕ್ಷಕರನ್ನು ಮರುಳುಗೊಳಿಸಿದರೆಂದರೆ ಅವರ ನಟನ ಸಾಮರ್ಥ್ಯಕ್ಕೆ ಬೇರೆ ನಿದರ್ಶನ ಬೇಕಿಲ್ಲ.
Related Articles
ಶೆಟ್ಟರ ಹುಟ್ಟೂರು ವಿಟ್ಲ ಸಮೀಪದ ಕೇಪು ಗ್ರಾಮದ ಮೈರ. 1939ರಲ್ಲಿ ದಿ| ಬಂಟಪ್ಪ ಶೆಟ್ಟಿ ಮತ್ತು ಉಂಞ್ಞಕ್ಕೆ ದಂಪತಿಗೆ ಜನಿಸಿದ ಅವರು ಪುಣಚ (ತುಳುವಿನಲ್ಲಿ ಪುಳಿಂಚ)ದಲ್ಲಿ ನೆಲೆಸಿ ಪುಳಿಂಚರೇ ಆದರು. ಆರನೇ ತರಗತಿ ಪೂರೈಸಿ ತನ್ನ 14ನೇ ವಯಸ್ಸಿನಲ್ಲಿ (1953) ಶ್ರೀ ಧರ್ಮಸ್ಥಳ ಮೇಳ ಸೇರಿ ಕಟ್ಟುವೇಷ. ಕೋಡಂಗಿಯಾಗಿ ರಂಗ ಪ್ರವೇಶ ಮಾಡಿ ಪುಂಡು ವೇಷಧಾರಿಯಾಗಿ ಭಡ್ತಿ ಪಡೆ ದರು. ಬಳಿಕ ಕೂಡ್ಲು, ಇರಾ, ಕರ್ನಾಟಕ, ಕುದ್ರೋಳಿ, ಇರುವೈಲು ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 47 ವರ್ಷಗಳ ಸುದೀರ್ಘ ತಿರುಗಾಟ ನಡೆಸಿ 2000ರಲ್ಲಿ ನಿವೃತ್ತಿ ಹೊಂದಿದರು.
Advertisement
ಸಂಚಾರಿ ಮೇಳವನ್ನು ಕಟ್ಟಿ (1963) ಮೈಸೂರು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಯಕ್ಷಗಾನದ ಕೀರ್ತಿ ಪತಾಕೆ ಹಾರಿಸಿದ್ದರು. ಹಲವು ಪ್ರಸಂಗ ಗಳನ್ನು ರಚಿಸಿದ್ದಾರಲ್ಲದೆ “ಕನ್ನಡಿಗರ ಕರ್ಮ ಕಥೆ’ ಎಂಬ ಕಾದಂಬರಿ ಯನ್ನೂ ಬರೆದಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಹಾಸ್ಯ ಪ್ರಸಂಗಗಳನ್ನು ಹೊಸೆದು ಅವುಗಳನ್ನು ಕ್ಯಾಸೆಟ್ ರೂಪ ದಲ್ಲಿ ಜನಪ್ರಿಯಗೊಳಿಸಿದ್ದಾರೆ.
ತಮ್ಮ ಇಳಿವಯಸ್ಸಿನಲ್ಲಿ ಕಲ್ಲಡ್ಕ ಸಮೀಪದ ಬಾಳ್ತಿಲದ ಚೆಂಡೆ ನಿವಾಸದಲ್ಲಿ ವಾಸವಾಗಿದ್ದರು. 2002ರ ಜುಲೈ 22ರಂದು ಅವರು ವಿಧಿವಶರಾದರು.
ಪುಳಿಂಚ ಸೇವಾ ಪ್ರತಿಷ್ಠಾನರಾಮಯ್ಯ ಶೆಟ್ಟರ ಪುತ್ರ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ ಅವರ ನೇತೃತ್ವದಲ್ಲಿ ಸ್ಥಾಪನೆಯಾದ “ಪುಳಿಂಚ ಸೇವಾ ಪ್ರತಿಷ್ಠಾನ’ದ ವತಿಯಿಂದ 2013ರಲ್ಲಿ ಪ್ರಾರಂಭ ವಾದ ಪುಳಿಂಚ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಪ್ರತೀ ಮೂರು ವರ್ಷಗಳಿಗೊಮ್ಮೆ ಪುಳಿಂಚರ ಕಾಯಕ ಕ್ಷೇತ್ರವಾಗಿದ್ದ ಬಾಳ್ತಿಲ ಗ್ರಾಮದ ಚೆಂಡೆ ಪುಳಿಂಚ ಫಾರ್ಮ್ ಹೌಸ್‌ನಲ್ಲಿ ನಡೆಯುತ್ತದೆ. -ಭಾಸ್ಕರ ರೈ ಕುಕ್ಕುವಳ್ಳಿ