Advertisement

ಬಿರುಕು ಬಿಟ್ಟ ಪುಳಿಕುಕ್ಕು ಸೇತುವೆ: ಆತಂಕದಲ್ಲಿ ಸಂಚಾರ

02:10 AM Jul 11, 2018 | Team Udayavani |

ಕಡಬ: ಕಡಬ-ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಗೆ 60 ವರ್ಷಗಳ ಹಿಂದೆ ನಿರ್ಮಿಸಲಾದ ಸೇತುವೆಯಲ್ಲಿ ಇದೀಗ ಸಣ್ಣ ಮಟ್ಟಿನ ಬಿರುಕು ಕಂಡಿದ್ದು, ಕಡಬ ತಹಶೀಲ್ದಾರ್‌, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಸಹಿತ ಹಲವರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು.

Advertisement

ಸೇತುವೆಯಲ್ಲಿ ಹಲವಾರು ದಿನಗಳಿಂದ ಬಿರುಕು ಇದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಅವರು ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಅವರಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಸಂಜೆ ಕಡಬ ತಹಶೀಲ್ದಾರ್‌, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಗ್ರಾಮಕರಣಿಕ ಶೇಷಾದ್ರಿ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಳ್ಯ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್‌. ರೈ, ಬಿಜೆಪಿ ಮುಖಂಡರಾದ ಪ್ರಕಾಶ್‌ ಎನ್‌.ಕೆ., ಅಶೋಕ್‌ ಕುಮಾರ್‌ ಪಿ., ಸ್ಥಳೀಯರಾದ ಕುಂಞಣ್ಣ ಗೌಡ, ಮೋಹನ ಗೌಡ  ಉಪಸ್ಥಿತರಿದ್ದರು.

ದುರಸ್ತಿಗೆ ಆಗ್ರಹ
ಸುಮಾರು 60 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಪುಳಿಕುಕ್ಕು ಸೇತುವೆ ಯಲ್ಲಿ ಸಣ್ಣಮಟ್ಟಿನ ಬಿರುಕು ಕಂಡಿದ್ದು, ಕೂಡಲೇ ದುರಸ್ತಿ ಮಾಡಬೇಕು. ಈ ಸೇತುವೆಯಲ್ಲಿ ಸಂಪರ್ಕ ಕಡಿತವಾದರೆ ದಿನನಿತ್ಯ ಸಾವಿರಾರು ಜನರಿಗೆ ತೊಂದರೆ ಯಾಗಲಿದೆ. ಸುಳ್ಯ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೊಡ್ಡ ಅಪಾಯವಿಲ್ಲ
ಸುಳ್ಯ ಲೋಕೋಪಯೋಗಿ ಎಂಜಿನಿಯರ್‌ ಸಾಯಿ ಸಂದೇಶ್‌ ಪ್ರತಿಕ್ರಿಯೆ ನೀಡಿ, ಈಗಾಗಲೇ ಬಿರುಕು ಬಿಟ್ಟಿರುವ ಸೇತುವೆಯನ್ನು ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ. ಮಳೆ ಸ್ವಲ್ಪ ಬಿಡುವು ನೀಡಿದ ಕೂಡಲೇ ಬಿರುಕು ಬಿಟ್ಟಲ್ಲಿ ಕಾಂಕ್ರೀಟ್‌ ಅಳವಡಿಸಲಾಗುವುದು. ಸಣ್ಣ ಪ್ರಮಾಣದ ಬಿರುಕು ಇದೆ. ಯಾರೂ ಭಯಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಸಂಚರಿಸಲು ಭಯ
ಕಡಬ ಖಾಸಗಿ ಶಾಲೆಯ ವಾಹನದ ಚಾಲಕ ಹರೀಶ್‌ ನಾೖಕ್‌, ನಿತ್ಯ ಬಸ್‌ ಚಲಾಯಿಸುವಾಗ ಈ ಸೇತುವೆಯ ಬಿರುಕು ಅನುಭವಕ್ಕೆ ಬರುತ್ತಿದೆ. ಮಕ್ಕಳನ್ನು ಕರೆದೊಯ್ಯುವಾಗ ಭಯವಾಗುತ್ತದೆ. ಕೂಡಲೇ ಇದನ್ನು ದುರಸ್ತಿಪಡಿಸಿ, ಸೇತುವೆಯ ಭದ್ರತೆಯನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next