ಹುಣಸೂರು: ಹೆಣ್ಣುಮಕ್ಕಳ ಓದಿಗೆ ವಿರೋಧವಿದ್ದ 18ನೇ ಶತಮಾನದಲ್ಲಿ ಪೇಶಾ ಹಾಗೂ ಇತರೆ ಬಲಿಷ್ಠ ಸಮಾಜದ ವಿರೋಧ ಕಟ್ಟಿಕೊಂಡು ಸಾಕಷ್ಟು ಸಂಕಟ ಅನುಭವಿಸಿ ಹೆಣ್ಣು ಮಕ್ಕಳು ಶಿಕ್ಷಣ ವಂತರಾಗಬೇಕು ಎಂದು ಹೋರಾಟ ನಡೆಸಿದ ದಿಟ್ಟಗಾತಿ ಸಾವಿತ್ರಜ್ಯೋತಿಬಾಪುಲೆ ಎಂದು ರಾಜ್ಯ ಸೋಲಿಗ ಮಹಿಳಾ ಸಂಘದ ಅಧ್ಯಕ್ಷೆ ರತ್ನಮ್ಮ ಬಣ್ಣಿಸಿದರು.
ನಗರದ ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂ.ಎ.ಸಿ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿಯಿಂದ ಸಾವಿತ್ರಿಜ್ಯೋತಿ ಬಾಪುಲೆ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರಿಗಾಗಿ 18ನೇ ಶತಮಾನದಲ್ಲೇ ಶಿಕ್ಷಣ ಕ್ರಾಂತಿ ನಡೆಸಿದ ಸಾವಿತ್ರಿ ಜ್ಯೋತಿಬಾಪುಲೆ ಮಹಿಳೆಯರ ಶಿಕ್ಷಣದ ಮೊದಲ ಗುರು, ಅವರ ಹೋರಾಟವೇ ಇಂದಿನ ಹೆಣ್ಣುಮಕ್ಕಳ ಶೈಕ್ಷಣಿಕ ಕ್ರಾಂತಿ ಎಂದರು.
ನಮ್ಮ ವಿದ್ಯಾರ್ಥಿಗಳು ಅವರ ಹೋರಾಟದ ಬದುಕನ್ನು ಅರಿಯಬೇಕು ಹಾಗೂ ಅಂಬೇಡ್ಕರರ ಆಶಯದಂತೆ ದೇವಸ್ಥಾನದ ಬದಲು ಗ್ರಂಥಾಲಯ ಮುಂದೆ ಸಾಲು ಇದ್ದಾಗಮಾತ್ರ ದೇಶದ ಪ್ರಗತಿ ಸಾಧ್ಯವೆಂದಿದ್ದ ಅವರ ಆಶಯವನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯೆ ಡಾ.ಪುಷ್ಪಾ$ಅಮರ್‌ನಾಥ್ ಮಾತನಾಡಿ, ಜ್ಯೋತಿ ಬಾಪುಲೆಯವರು ದೇಶದ ಮಹಿಳಾ ಪ್ರಥಮ ಶಿಕ್ಷಕಿ, ಅಂತರ್ಜಾತಿ ವಿವಾಹವಾಗಿದ್ದ ಅವರು ಲಿಂಗ ಸಮಾನತೆಗಾಗಿ, ಹೆಣ್ಣು ಬ್ರೂಣ ಹತ್ಯೆ, ಸತಿ ಸಹಗಮನ ಪದ್ಧತಿ, ವರದಕ್ಷಿಣೆ ವಿರುದ್ಧ ಹೋರಾಟ ನಡೆಸಿದ ಇವರು ಕ್ರಾಂತಿಕಾರಕ ಬದಲಾವಣೆ ತಂದ ಸಾಕ್ಷರತೆಯ ಮಹಾನ್ ಸಾಧಕಿಯೆಂದು ಅಭಿಪ್ರಾಯಪಟ್ಟರು.
ಪ್ರಮಾಣ ಪತ್ರ ವಿತರಣೆ: ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳುವ ಹಿನ್ನೆಲೆಯಲ್ಲಿ ಬಿಜೆಎಸ್ ಜೈನ್ ಸಂಸ್ಥೆಯಿಂದ ವಿವಿಧ ಕೌಶಲ್ಯ ತರಬೇತಿ ಪಡೆದ 60 ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಿದ ಶಾಸಕ ಎಚ್.ಪಿ.ಮಂಜುನಾಥ್, ವಿದ್ಯಾರ್ಥಿಗಳು ಸೋಲಿಗ ಮಹಿಳೆ ರತ್ನಮ್ಮರನ್ನು ಮಾದರಿಯಾಗಿಸಿಕೊಳ್ಳಬೇಕು, ಅಸಡ್ಡೆ, ನಿರಾಸಕ್ತಿ ಬಿಟ್ಟು ಓದುವ ಛಲವಿರಬೇಕು, ಹೆಣ್ಣು ಮಕ್ಕಳು ಗುರಿಸಾಧನೆಯ ನಂತರ ಮದುವೆ ಆಲೋಚನೆ ಮಾಡಬೇಕು, ಮದುವೆ ಸಂದರ್ಭದಲ್ಲಿ ಸಂಗಾತಿಯಾಗುವವರ ಬಗ್ಗೆ ಪೂರ್ಣ ತಿಳಿದುಕೊಳ್ಳುವುದು ಒಳಿತೆಂದು ಹೇಳಿದರು.
ಪ್ರಾಚಾರ್ಯ ಜ್ಞಾನಪ್ರಕಾಶ್, ಉಪನ್ಯಾಸಕರಾದ ಐಕ್ಯೂ.ಎ.ಸಿ.ಸಂಚಾಲಕ ಪುಟ್ಟಶೆಟ್ಟಿ, ಮಹಿಳಾ ದೌರ್ಜನ್ಯ ತಡೆ ಸಮಿತಿ ಸಂಚಾಲಕ ನಂಜುಂಡಸ್ವಾಮಿ, ಕ್ಷೇಮಪಾಲನಾ ಸಮಿತಿ ಸಂಚಾಲಕ ಬಿ.ಎಂ.ನಾಗರಾಜ್, ಸಿಡಿಸಿ ಕಾರ್ಯಾಧ್ಯಕ್ಷ ಗೋವಿಂದರಾಜಗುಪ್ತ ಇತರರು ಇದ್ದರು.