Advertisement
ಜಾರ್ಖಂಡ್ ಎದುರಿನ ರಣಜಿ ಪಂದ್ಯದ 3ನೇ ದಿನ ಬ್ಯಾಟಿಂಗ್ ಮುಂದುವರಿಸಿದ ಪೂಜಾರ ಅಜೇಯ 243 ರನ್ ಬಾರಿಸಿದರು. 356 ಎಸೆತಗಳನ್ನು ಎದುರಿಸಿ ನಿಂತ ಅವರು ಬರೋಬ್ಬರಿ 30 ಬೌಂಡರಿ ಸಿಡಿಸಿದರು.
ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರ ಬಾರಿಸಿದ 61ನೇ ಶತಕ, 17ನೇ ದ್ವಿಶತಕ. ಇದರೊಂದಿಗೆ ಅವರು ಅತ್ಯಧಿಕ ಶತಕ ಬಾರಿಸಿದ ಭಾರತದ ಸಾಧಕರ ಯಾದಿಯಲ್ಲಿ ತೃತೀಯ ಸ್ಥಾನಿಯಾದರು. ಸಚಿನ್ ತೆಂಡುಲ್ಕರ್ (81), ರಾಹುಲ್ ದ್ರಾವಿಡ್ (68) ಮೊದಲೆರಡು ಸ್ಥಾನದಲ್ಲಿದ್ದಾರೆ. ವಿಜಯ್ ಹಜಾರೆ 4ನೇ ಸ್ಥಾನಕ್ಕೆ ಇಳಿದರು (60).
ಪೂಜಾರ ಪ್ರಥಮ ದರ್ಜೆ ದ್ವಿಶತಕ ಸಾಧಕರ ಯಾದಿಯಲ್ಲಿ ಹರ್ಬರ್ಟ್ ಸಟ್‌ಕ್ಲಿಫ್ ಮತ್ತು ಮಾರ್ಕ್ ರಾಮ್‌ಪ್ರಕಾಶ್ ಅವರೊಂದಿಗೆ ಜಂಟಿ 4ನೇ ಸ್ಥಾನಿಯಾಗಿದ್ದಾರೆ. ಸರ್ ಡೊನಾಲ್ಡ್ ಬ್ರಾಡ್‌ಮನ್ ಅಗ್ರಸ್ಥಾನ ಅಲಂಕರಿಸಿದ್ದಾರೆ (37). ವ್ಯಾಲಿ ಹ್ಯಾಮಂಡ್ (36), ಪ್ಯಾಟ್ಸೆ ಹಂಡ್ರೆನ್ (22) ಅನಂತರದ ಸ್ಥಾನದಲ್ಲಿದ್ದಾರೆ. ಪ್ರಥಮ ದರ್ಜೆ ಸಾಧನೆ
ಈ ಇನ್ನಿಂಗ್ಸ್‌ನಲ್ಲಿ 161 ರನ್ ಗಳಿಸಿದ ವೇಳೆ ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19,730 ರನ್ ಮಾಡಿದ್ದ ವಿವಿಎಸ್ ಲಕ್ಷ್ಮಣ್ ಅವರನ್ನು ಪೂಜಾರ ಹಿಂದಿಕ್ಕಿದರು. ಈ ಯಾದಿಯಲ್ಲಿ ಅವರಿಗೀಗ 4ನೇ ಸ್ಥಾನ. ಮೊದಲ ಮೂವರೆಂದರೆ ಸುನೀಲ್ ಗಾವಸ್ಕರ್ (25,834), ಸಚಿನ್ ತೆಂಡುಲ್ಕರ್ (25,396) ಮತ್ತು ರಾಹುಲ್ ದ್ರಾವಿಡ್ (23,794).
2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಳಪೆ ಆಟವಾಡಿದ ಕಾರಣ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿತ್ತು.