Advertisement

ಕೋವಿಡ್ ರೋಗಿ ಶವ ಹೊಂಡಕ್ಕೆಸೆದ ಆರೋಗ್ಯ ಸಿಬ್ಬಂದಿಗಳು!ತೀವ್ರ ಆಕ್ರೋಶ, ತನಿಖೆಗೆ ಆದೇಶ

04:36 PM Jun 07, 2020 | Nagendra Trasi |

ಚೆನ್ನೈ:ಕೋವಿಡ್ 19 ವೈರಸ್ ಗೆ ಒಳಗಾದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದಿಲ್ಲ, ಕೋವಿಡ್ ರೋಗಿಗಳು ಇದ್ದ ವಾರ್ಡ್ ನಲ್ಲೇ ಶವಗಳನ್ನು ಇರಿಸಿರುವ ಘಟನೆ ಹೀಗೆ ಹಲವು ಪ್ರಕರಣ ವರದಿಯಾಗಿತ್ತು. ಆದರೆ ಇದೀಗ ಕೋವಿಡ್ 19 ಸೋಂಕಿತ ರೋಗಿಯ ಶವವನ್ನು ಸರ್ಕಾರಿ ಆರೋಗ್ಯ ಸಿಬ್ಬಂದಿಗಳು ಹೊಂಡದೊಳಗೆ ಎಸೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.

Advertisement

ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದ ಪ್ರಕಾರ, ಪಿಪಿಇ ಧರಿಸಿರುವ ನಾಲ್ವರು ವ್ಯಕ್ತಿಗಳು ಆ್ಯಂಬುಲೆನ್ಸ್ ನಿಂದ ಶವವನ್ನು ಹೊರತೆಗೆದು ಅದನ್ನು ಏಕಾಏಕಿ ಹೊಂಡದೊಳಕ್ಕೆ ಎಸೆದಿದ್ದರು. 30ಸೆಕೆಂಡುಗಳ ಬಳಿಕ ಆ್ಯಂಬುಲೆನ್ಸ್ ನೊಳಕ್ಕೆ ಕುಳಿತಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಬಳಿ “ಶವವನ್ನು ಎಸೆಯುತ್ತೇವೆ” ಎಂದು ಕೇಳಿದ್ದಕ್ಕೆ ಹೆಬ್ಬೆರಳನ್ನು ಎತ್ತಿ ಅನುಮತಿ ನೀಡುತ್ತಿರುವುದು ವಿಡಿಯೋದಲ್ಲಿದೆ ಎಂದು ವರದಿ ತಿಳಿಸಿದೆ.

ಕೋವಿಡ್ 19 ರೋಗಿಯ ಶವದ ಬಗ್ಗೆ ಆರೋಗ್ಯ ಸಿಬ್ಬಂದಿಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಿಟ್ಟಿದ್ದರು. ವಿಡಿಯೋದಲ್ಲಿರುವಂತೆ ಶವವನ್ನು ಬಿಳಿ ಬಟ್ಟೆಯಲ್ಲಿ ಸುತ್ತಲಾಗಿತ್ತು. ಅಷ್ಟೇ ಅಲ್ಲ ದೇಹಕ್ಕೆ ಸುತ್ತಿದ್ದ ಬಟ್ಟೆ ಕೂಡಾ ತೆರೆದಿತ್ತು. ಇದರಿಂದ ಸಿಬ್ಬಂದಿಗಳೂ ದೊಡ್ಡ ಅಪಾಯವನ್ನು ತಂದುಕೊಂಡಿದ್ದಾರೆ. ಒಂದು ವೇಳೆ ಶವ ಕೊಳೆಯದಂತೆ ಲೇಪನ ದ್ರವ್ಯ ಹಚ್ಚಿದ್ದಾರೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ ಎಂದು ವರದಿ ವಿವರಿಸಿದೆ.

ಈತ ಚೆನ್ನೈ ನಿವಾಸಿಯಾಗಿದ್ದು, ಆಸ್ಪತ್ರೆಗೆ ಭೇಟಿ ಕೊಟ್ಟಿದ್ದು, ಪರೀಕ್ಷೆ ನಡೆಸಿದಾಗ ಕೋವಿಡ್ 19 ಪಾಸಿಟಿವ್ ಎಂದು ಬಂದಿತ್ತು. ನಂತರ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಇದೀಗ ಶವವನ್ನು ಅಮಾನವೀಯ ರೀತಿಯಲ್ಲಿ ಎಸೆದಿರುವ ಕ್ರಮದ ಬಗ್ಗೆ ಪುದುಚೇರಿಯಲ್ಲಿ ತೀವ್ರ ಆಕ್ರೋಶವ್ಯಕ್ತವಾಗಿದ್ದು, ಪುದುಚೇರಿ ಕಲೆಕ್ಟರ್ (ಜಿಲ್ಲಾಧಿಕಾರಿ) ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next