Advertisement

ದ್ವಿತೀಯ ಪಿಯು ಮೌಲ್ಯಮಾಪಕರಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ

06:09 PM May 31, 2022 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಮತ್ತು ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯದಲ್ಲಿ ಹಾಜರಾಗುವ ಸಿಬ್ಬಂದಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.

Advertisement

ಈ ಸಂಭಾವನೆಯು ಮುಂದಿನ ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಸಂಭಾವನೆ ಪರಿಷ್ಕರಣೆಗೆ ಷರತ್ತುಗಳನ್ನು ಸಹ ವಿಧಿಸಿದೆ. ಯುಜಿಸಿ ವೇತನ ಪಡೆಯುವ ಉಪನ್ಯಾಸಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದರೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ಮಾತ್ರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳನ್ವಯ ನೀಡಬೇಕು. ಇವರಿಗೆ ಬೇರೆ ಯಾವುದೇ ಸಂಭಾವನೆ ನೀಡುವಂತಿಲ್ಲ.

ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಉಪನ್ಯಾಸಕರು ಎಸಗುವ ತಪ್ಪುಗಳಿಗೆ ವಿಧಿಸುವ ದಂಡವನ್ನು ಸೂಕ್ತವಾದ ನಿಯಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಇದಕ್ಕೆ ತಗಲುವ ವೆಚ್ಚವನ್ನು ಯೋಜನೇತರ ಅಡಿಯಲ್ಲಿ ಪ್ರಸ್ತುತ ವರ್ಷದಲ್ಲಿ ಇಲಾಖೆಗೆ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ಭರಿಸಬೇಕು.

ಮೊದಲು 3 ಗಂಟೆಯ ಅವಧಿಯ ಕನ್ನಡ ಆವೃತ್ತಿಯಲ್ಲದ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತಿಯೊಬ್ಬರಿಗೆ 2082 ರೂ.ನಿಗದಿ ಪಡಿಸಿತ್ತು. ಇದು 2,498 ರೂ.ಗಳಿಗೆ ಹೆಚ್ಚಳವಾಗಿದೆ. ವಾಹನ ಚಾಲಕರಿಗೆ 696 ರೂ. ನೀಡಲಾಗುತ್ತಿತ್ತು. ಇದರ ಪ್ರಮಾಣ 1253 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ:ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರ ಸ್ವೀಕಾರ

Advertisement

ಈ ರೀತಿ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿರುವ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ಶೇ.20 ಹೆಚ್ಚಳ ಮಾಡಲಾಗುತ್ತದೆ ಎಂದು ಪಿಯು ಇಲಾಖೆ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್‌.ಎಸ್‌. ಆದೇಶ ಹೊರಡಿಸಿದ್ದಾರೆ. ಸಂಭಾವನೆ ಹೆಚ್ಚಳ ಮಾಡಿರುವುದಕ್ಕೆ ಪಿಯು ಉಪನ್ಯಾಸಕರ ಸಂಘ ಅಧ್ಯಕ್ಷ ಎ.ಎಚ್‌. ನಿಂಗೇಗೌಡ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next