ಬೆಂಗಳೂರು: ಕಳೆದ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಈ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಪದವಿ ಪೂರ್ವಶಿಕ್ಷಣ ಇಲಾಖೆ ಮುಂದಾಗಿದೆ.
2019ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಸಹಿತವಾಗಿ ಮೂಲ ವಿಜ್ಞಾನದ ವರೆಗಿನ 36 ವಿಷಯಗಳ ಉತ್ಕೃಷ್ಟ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವ ಮಾದರಿ ಅನುಸರಿಸಿದರೆ ಉತ್ತಮ ಎಂಬುದನ್ನು ಅತ್ಯಂತ ಸುಲಭವಾಗಿ ವಿದ್ಯಾರ್ಥಿಗಳ ಮುಂದೆ ಪದವಿ ಪೂರ್ವ ಶಿಕ್ಷಣ ಇಲಾಖೆ ತೆರೆದಿಟ್ಟಿದೆ.
//pue.kar.nic.in/ ವೆಬ್ ಸೈಟ್ ತೆರೆದ ಬಳಿಕ ಸ್ವಲ್ಪ ಕೆಳಗೆ ಸೊðàಲ್ ಮಾಡುತ್ತಿದ್ದಂತೆ “2019ರ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆ’ ಎಂಬ ಇನ್ನೊಂದು ಲಿಂಕ್ ಆಂಗ್ಲ ಭಾಷೆಯಲ್ಲಿ
(//pue.kar.nic.in/PUE/support_html/recogn/HM_2nd_19march.htm#youranchor) ಸಿಗಲಿದೆ. ಆ ಲಿಂಕ್ ತೆರೆದರೆ 36 ವಿಷಯಗಳ ಉತ್ಕೃಷ್ಟ ಉತ್ತರ ಪತ್ರಿಕೆಗಳ ಪ್ರತಿಗಳು ವಿದ್ಯಾರ್ಥಿಗಳು ಸಹಿತವಾಗಿ ಅವರ ಪಾಲಕ,ಪೋಷಕರಿಗೆ ಲಭ್ಯವಾಗುತ್ತವೆ.
ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಕನ್ನಡ, ಇಂಗ್ಲಿಷ್, ಸಂಸ್ಕೃತ, ಇತಿಹಾಸ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯ ಅಧ್ಯಯನ, ರಾಜಕೀಯ ಶಾಸ್ತ್ರ, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಶಿಕ್ಷಣ, ಅರ್ಥಶಾಸ್ತ್ರ, ಮೂಲ ವಿಜ್ಞಾನ, ಐಚ್ಛಿಕ ಕನ್ನಡ ಸಹಿತವಾಗಿ ಎರಡನೇ ಆಯ್ಕೆಯಾಗಿ ಇರುವ ವಿವಿಧ ವಿಷಯಗಳ ಉತ್ಕೃಷ್ಟ ಉತ್ತರ ಪ್ರತಿಗಳನ್ನು ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ, ಅತೀ ಸುಲಭದಲ್ಲಿ ಈ ಎಲ್ಲ ವಿಷಯಗಳ ಉತ್ತರ ಪತ್ರಿಕೆ ಅಥವಾ ತಮಗೆ ಬೇಕಾದ ಉತ್ತರ ಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಲ್ಲವೆ, ತಮಗೆ ಬೇಕಿರುವ ಡ್ರೈವ್‌ಗಳಲ್ಲಿ ಅದನ್ನು ಉಳಿಸಿಕೊಳ್ಳಲು ಅವಕಾಶ ಇದೆ.
ಇದರಿಂದ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಉಪಯೋಗಗಳಿವೆ. ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯೊಂದು ಹೇಗಿರಬೇಕು ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಇನ್ನೊಂದು ಇರಲು ಸಾಧ್ಯವಿಲ್ಲ. ಪರೀಕ್ಷೆಯನ್ನು ಶುದ್ಧವಾಗಿ ಬರೆಯಬೇಕು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕೇ ಅಥವಾ ಬೇಡವೇ?, ಒಂದು ಅಂಕದ ಪ್ರಶ್ನೆಗೆ ಎಷ್ಟು ಬರೆಯಬೇಕು, ನಾಲ್ಕೈದು ಅಂಕದ ಪ್ರಶ್ನೆಗೆ ಎಷ್ಟು ಬರೆಯಬೇಕು ಎಂಬಿತ್ಯಾದಿ ಅಂಶಗಳನ್ನು ತರಗತಿಯಲ್ಲಿ ಎಷ್ಟೇ ಮನದಟ್ಟು ಮಾಡಿದರೂ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವುದಿಲ್ಲ.
ಗೊಂದಲಗಳಿಗೆ ಪರಿಹಾರ
ವಾರ್ಷಿಕ ಪರೀಕ್ಷೆ ಎಂದಮೇಲೆ ಅನೇಕ ರೀತಿಯ ಗೊಂದಲ ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತದೆ. ಕಳೆದ ಸಾಲಿನ ಉತ್ಕೃಷ್ಟ ಉತ್ತರ ಪ್ರತಿಯನ್ನು ವಿದ್ಯಾರ್ಥಿಗಳೇ ನೋಡಿದರೆ, ಪರೀಕ್ಷೆ ಹೇಗೆ ಬರೆಯಬೇಕು ಎಂಬ ಆತ್ಮವಿಶ್ವಾಸ ತನ್ನಿಂದ ತಾನಾಗಿಯೇ ವಿದ್ಯಾರ್ಥಿಗಳಿಗೆ ಬರುತ್ತದೆ. ಈ ಉದ್ದೇಶದಿಂದಲೇ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದ್ದೇವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿ’ಗೆ ಮಾಹಿತಿ ನೀಡಿದರು.
– ರಾಜು ಖಾರ್ವಿ ಕೊಡೇರಿ