ಕೊರಟಗೆರೆ: ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನ ಮನೆಯ ಬಾಗಿಲು ಒಡೆದು ತಾಯಿಯ ಎದುರೇ ಅಪಹರಣ ಮಾಡಿಕೊಂಡು ಪರಾರಿ ಯಾಗಿರುವ ಘಟನೆಯೊಂದು ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಕೋಳಾಲ ಹೋಬಳಿಯ ಪುರದಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ದಿ. ಮಂಜುನಾಥ್ ಎಂಬುವರ ಮಗಳು ಪಿಯುಸಿ ವಿದ್ಯಾರ್ಥಿನಿ ಅಪಹರಣಕ್ಕೊಳಗಾದ ವಿದ್ಯಾರ್ಥಿನಿಯಾಗಿದ್ದಾಳೆ.
ಮಧ್ಯರಾತ್ರಿಯಲ್ಲಿ ದಿ. ಮಂಜುನಾಥ್ ಅವರ ಪತ್ನಿ ಸುಮಾ(40) ವರ್ಷ ಹಾಗೂ ಮಗಳು ವಿದ್ಯಾರ್ಥಿನಿ ಮನೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಬೆಳಗಿನ ಜಾವ 3 ಗಂಟೆಯಲ್ಲಿ ಯಾರೋ ಇಬ್ಬರೂ ವ್ಯಕ್ತಿಗಳು ಬಾಗಿಲು ಒಡೆದು ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದಿದ್ದ ತಾಯಿಯ ಎದುರಲ್ಲೇ ಮಗಳನ್ನು ದ್ವಿಚಕ್ರವಾಹನದಲ್ಲಿ ಅಪಹರಿಸಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.
ರಂಜಿತಾಳ ತಾಯಿ ಸುಮಾ ನೀಡಿದ ದೂರಿನ ಮೇಲೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ದೂರಿನ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಶಿರ ಶಟ್ಟಿಹಳ್ಳಿ ತಾಲೂಕಿನ ಶಿರಶೆಟ್ಟಿಹಳ್ಳಿ ಗ್ರಾಮದ ಹನುಮಂತರಾಯಪ್ಪ ಎಂಬವರ ಮಗ ಮಂಜುನಾಥ್ ಹಾಗೂ ಮತ್ತೊಬ್ಬ ಸ್ನೇಹಿತನೊಂದಿಗೆ ದ್ವಿಚಕ್ರವಾಹನದಲ್ಲಿ ಬಂದು ಹುಡುಗಿಯನ್ನು ಅಪಹರಣದ ನಾಟಕವಾಡಿ ದ್ವಿಚಕ್ರವಾಹನದಲ್ಲಿ ತಾಯಿಯ ಎದುರೇ ಕೂರಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಈ ಪ್ರಕರಣ ಮೇಲ್ನೋಟಕ್ಕೆ ಅಪಹರಣ ಎಂದು ತಿಳಿದು ಬಂದರಾದರೂ ಅಪಹರಣಕ್ಕೊಳಗಾದ ರಂಜಿತಾ ಹಾಗೂ ಆರೋಪಿ ಮಂಜುನಾಥ್ ನ ತನಿಖೆಯ ನಂತರ ಸತ್ಯಾಸತ್ಯತೆಗಳು ಹೊರಬರಲಿದೆ ಎನ್ನಲಾಗಿದೆ.