Advertisement

ಪಿಯುಸಿ ಫಲಿತಾಂಶ: ಮತ್ತೆ ಅಗ್ರಪಟ್ಟದಲ್ಲಿ ದಕ್ಷಿಣ ಕನ್ನಡ

11:24 PM Jun 18, 2022 | Team Udayavani |

ಮಂಗಳೂರು: ಪಿಯುಸಿಯಲ್ಲಿ ಸತತವಾಗಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಗಳಿಸುತ್ತಲೇ ಬಂದಿರುವ ದಕ್ಷಿಣ ಕನ್ನಡ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಶೇ. 88.02 ಫಲಿತಾಂಶ ಲಭಿಸಿದ್ದು, ಜಿಲ್ಲೆಯ ಐವರು ವಿದ್ಯಾರ್ಥಿಗಳು ರಾಜ್ಯದ ಅಗ್ರಸ್ಥಾನದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

Advertisement

2020ರಲ್ಲಿ ಶೇ. 90.71 ಫಲಿತಾಂಶ ಇದ್ದದ್ದು ಈ ಸಲ ಶೇ. 88.02ಕ್ಕೆ ಬಂದಿದ್ದರೂ ನಂ. 1 ಸ್ಥಾನಕ್ಕೆ ಕುತ್ತು ಉಂಟಾಗಿಲ್ಲ. 2020ರಲ್ಲೂ ದ.ಕ. ಜಿಲ್ಲೆ ಪ್ರಥಮ ಸ್ಥಾನಿಯಾಗಿತ್ತು.

ಕಾಮರ್ಸ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್‌ ಪಿಯು ಕಾಲೇಜಿನ ಸಮರ್ಥ್ ವಿಶ್ವನಾಥ್‌ ಜೋಶಿ, ಮಂಗಳೂರು ಸಂತ ಅಲೋಶಿಯಸ್‌ ಪಿಯು ಕಾಲೇಜಿನ ಅನಿಶಾ ಮಲ್ಯ, ಕೆನರಾ ಪಿಯು ಕಾಲೇಜಿನ ಆಚಲ್‌ ಪ್ರವೀಣ್‌ ಉಳ್ಳಾಲ್‌ ಮೂವರೂ 595 ಅಂಕ ಗಳಿಸಿ ರಾಜ್ಯದಲ್ಲಿ 2ನೇ ಸ್ಥಾನವನ್ನು ಹಂಚಿಕೊಂಡರು. ವಿಜ್ಞಾನ ವಿಭಾಗದಲ್ಲಿ ಸಂತ ಅಲೋಶಿಯಸ್‌ ಪಿಯು ಕಾಲೇಜಿನ ಇಲ್‌ಹಾಮ್‌ ಮತ್ತು ಆಳ್ವಾಸ್‌ನ ಶ್ರೀಕೃಷ್ಣ ಪೆಜತ್ತಾಯ ಇಬ್ಬರೂ 597 ಅಂಕ ಗಳಿಸಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡರು. ಕಲಾ ವಿಭಾಗದಲ್ಲಿ ಟಾಪರ್‌ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ವಿದ್ಯಾರ್ಥಿಗಳು ಗುರುತಿಸಿಕೊಂಡಿಲ್ಲ.

ಕಲಾವಿಭಾಗದಲ್ಲಿ ಸುದಿತಿ ಟಾಪರ್‌
ಕಲಾವಿಭಾಗದಲ್ಲಿ ಜಿಲ್ಲೆಯ ಮಾಹಿತಿ ನೋಡಿದರೆ ಅಲೋಶಿಯಸ್‌ ಪಿಯು ಕಾಲೇಜಿನ ಸುದಿತಿ ಎಚ್‌.ಎನ್‌. ಅವರು 588 ಅಂಕ ಗಳಿಸಿ ಅಗ್ರಸ್ಥಾನಿಯಾಗಿದ್ದಾರೆ. ಸುಳ್ಯದ ಶಾರದಾ ಮಹಿಳಾ ಪಿಯು ಕಾಲೇಜಿನ ಲಿಪಿಶ್ರೀ 586 ಅಂಕದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಒಟ್ಟು 31,300 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 26,432 ಮಂದಿ ಪಾಸಾಗಿದ್ದಾರೆ (ಶೇ. 84.45 ಫಲಿತಾಂಶ). ಇದರಲ್ಲಿ ಫ್ರೆಶರ್ಗಳನ್ನು ಪರಿಗಣಿಸಿದರೆ, 29,086 ಮಂದಿ ಪರೀಕ್ಷೆ ಬರೆದಿದ್ದು, ಅವರಲ್ಲಿ 25,602 ಮಂದಿ ತೇರ್ಗಡೆಯಾಗಿದ್ದಾರೆ (ಶೇ.88.02).

Advertisement

ಕಲಾ ವಿಭಾಗದಲ್ಲಿ 3,558 ವಿದ್ಯಾರ್ಥಿಗಳು (ಪ್ರಶರ್‌) ಪರೀಕ್ಷೆ ಬರೆದಿದ್ದು, 2,825 ಮಂದಿ ಉತ್ತೀರ್ಣರಾಗಿದ್ದಾರೆ. ಶೇ. 79.4 ಫ‌ಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 13,676 ವಿದ್ಯಾರ್ಥಿಗಳಲ್ಲಿ 11ಕ908 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 87.07 ಫ‌ಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 11ಕ852 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10ಕ869 ಮಂದಿ ಉತ್ತೀರ್ಣರಾಗಿ ಶೇ. 91.71 ಫ‌ಲಿತಾಂಶ ದಾಖಲಾಗಿದೆ.

ದ.ಕ.ಕ್ಕೆ ನಿರಂತರ ಪ್ರಥಮ/ದ್ವಿತೀಯ
2013ರಲ್ಲಿ ಶೇ. 91.76 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2014, 2015, 2016ರಲ್ಲಿ ಕ್ರಮವಾಗಿ ಶೇ. 86.4, ಶೇ. 93.09, ಶೇ. 90.48 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, 2017ರಲ್ಲಿ ಶೇ. 89.92 ಫಲಿತಾಂಶದೊಂದಿಗೆ ದ್ವಿತೀಯ, 2018ರಲ್ಲಿ ಶೇ. 91.49 ಫಲಿತಾಂಶದೊಂದಿಗೆ ಪ್ರಥಮ ಹಾಗೂ 2019ರಲ್ಲಿ ಶೇ. 90.91 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಲಭಿಸಿತ್ತು. 2020ರಲ್ಲಿ ಶೇ. 90.71 ಫಲಿತಾಂಶ ದೊರಕಿತ್ತು. ಕಳೆದ ವರ್ಷ ಕೊರೊನ ಕಾರಣ ಪರೀಕ್ಷೆ ಇಲ್ಲದೆ ಫ‌ಲಿತಾಂಶ ಘೋಷಿಸಲಾಗಿತ್ತು. 2021ರಲ್ಲಿ ಜಿಲ್ಲೆಯಲ್ಲಿ 445 ಮಂದಿ ವಿದ್ಯಾರ್ಥಿಗಳು 600ರಲ್ಲಿ 600 ಅಂಕ ದಾಖಲಿಸಿದ್ದರು.

ಉಡುಪಿ 2ನೇ ಸ್ಥಾನದಲ್ಲಿದ್ದರೂ ಫ‌ಲಿತಾಂಶದಲ್ಲಿ ಕುಸಿತ
ಉಡುಪಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫ‌ಲಿತಾಂಶದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದರೂ, ಫ‌ಲಿತಾಂಶದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.

ಜಿಲ್ಲೆಯ 14,592 ರೆಗ್ಯೂಲರ್‌ ವಿದ್ಯಾರ್ಥಿಗಳು ಸಹಿತವಾಗಿ 15,267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರೆಗ್ಯೂಲರ್‌ ವಿದ್ಯಾರ್ಥಿಗಳಲ್ಲಿ 12,604 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 86.38ರಷ್ಟು ಫ‌ಲಿತಾಂಶ ದಾಖಲಾಗಿದೆ. 326 ಖಾಸಗಿ ಅಭ್ಯರ್ಥಿಗಳಲ್ಲಿ 117 ಹಾಗೂ 349 ಪುನರಾವರ್ತಿತ ಅಭ್ಯರ್ಥಿಗಳಲ್ಲಿ 86 ಮಂದಿ ಪಾಸಾಗಿದ್ದಾರೆ.

ಜಿಲ್ಲೆಯ ಫ‌ಲಿತಾಂಶಕ್ಕೆ ಕೇವಲ ರೆಗ್ಯೂಲರ್‌ ವಿದ್ಯಾರ್ಥಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. 2021-22ನೇ ಸಾಲಿನಲ್ಲಿ ಉಡುಪಿ ಜಿಲ್ಲೆ ಶೇ. 86.38ರಷ್ಟು ಫ‌ಲಿತಾಂಶ ದಾಖಲಿಸಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ ಜಿಲ್ಲೆಯ ಹಿಂದಿನ ವರ್ಷಗಳ ಫ‌ಲಿತಾಂಶಕ್ಕೆ ಹೋಲಿಸಿದರೆ ಇದು ತೀರ ಕಡಿಮೆ.

2017-18ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಶೇ. 90.67ರಷ್ಟು ಫ‌ಲಿತಾಂಶ ದಾಖಲಿಸಿಕೊಂಡು ರಾಜ್ಯಕ್ಕೆ 2ನೇ ಸ್ಥಾನದಲ್ಲಿದ್ದರು. 2018-19ರಲ್ಲಿ ಶೇ. 92.20ರಷ್ಟು ಫ‌ಲಿತಾಂಶ ಪಡೆದು ಮೊದಲ ಸ್ಥಾನಕ್ಕೆ ಏರಿತ್ತು. 2019-20ರಲ್ಲಿ ಶೇ. 90.71ರಷ್ಟು ಫ‌ಲಿತಾಂಶ ದಾಖಲಿಸಿ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದ್ದರು. 2020-21ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಪಾಸ್‌ ಮಾಡಿದ್ದು ಎಲ್ಲ ಜಿಲ್ಲೆಗಳು ಶೇ.100ರಷ್ಟು ಫ‌ಲಿತಾಂಶ ಪಡೆದಿದ್ದರಿಂದ ಜಿಲ್ಲಾವಾರು ರ್‍ಯಾಂಕ್‌ ನೀಡಿರಲಿಲ್ಲ. 2017-18ರಿಂದ ಈಚೇಗೆ ಅತ್ಯಂತ ಕಡಿಮೆ ಫ‌ಲಿತಾಂಶ ದಾಖಲಾಗಿರುವುದು ಇದೇ ಆಗಿದೆ.

ಫ‌ಲಿತಾಂಶ ಕಡಿಮೆಯಾಗಲು ಕಾರಣವೇನು?
2021-22ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುವಾಗಲೇ ವಿಳಂಬವಾಗಿತ್ತು. ಜತೆಗೆ ಕೊರೊನಾ ಕಾರಣದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಆನ್‌ಲೈನ್‌ ಹಾಗೂ ಆಫ್ಲೈನ್‌ ಎರಡೂ ಅವಕಾಶ ನೀಡಿರುವುದರಿಂದ ಅನೇಕ ವಿದ್ಯಾರ್ಥಿಗಳು ತರಗತಿ ಬೋಧನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ, ವಾರ್ಷಿಕ ಪರೀಕ್ಷೆಗೂ ಹಾಜರಾತಿ ಕಡ್ಡಾಯ ಮಾಡದೇ ಇರುವುದರಿಂದ ಎಲ್ಲರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಇದರಿಂದ ಪರೀಕ್ಷೆಗೆ ಏನೂ ಸಿದ್ಧತೆ ಮಾಡಿಕೊಳ್ಳದ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರ ಜತೆಗೆ ಪಠ್ಯ ಕಡಿತದ ಗೊಂದಲವೂ ಆರಂಭದಲ್ಲಿದ್ದರಿಂದ ಫ‌ಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಪಡೆಯಲು ಸಾಧ್ಯವಾಗಿಲ್ಲ ಎಂದು ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ವಿಷಯವಾರು ಫ‌ಲಿತಾಂಶ: ವಿಜ್ಞಾನ ವಿಭಾಗದಲ್ಲಿ ಶೇ. 89.96, ವಾಣಿಜ್ಯ ವಿಭಾಗದಲ್ಲಿ ಶೇ.86.63 ಹಾಗೂ ಕಲಾ ವಿಭಾಗದಲ್ಲಿ ಶೇ. 71.74ರಷ್ಟು ಫ‌ಲಿತಾಂಶ ದಾಖಲಾಗಿದೆ. ಹಾಗೆಯೇ ಇಂಗ್ಲಿಷ್‌ ಮಾಧ್ಯಮದ 12,421 ವಿದ್ಯಾರ್ಥಿಗಳಲ್ಲಿ 10,872 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.87.53ರಷ್ಟು ಫ‌ಲಿತಾಂಶ ಪಡೆದಿದ್ದಾರೆ. ಕನ್ನಡ ಮಾಧ್ಯಮದ 2,846 ವಿದ್ಯಾರ್ಥಿಗಳಲ್ಲಿ 1,945 ವಿದ್ಯಾರ್ಥಿಗಳು ಪಾಸಾಗಿದ್ದು ಶೇ. 68.34ರಷ್ಟು ಫ‌ಲಿತಾಂಶ ಬಂದಿದೆ. ಒಟ್ಟಾರೆ ಜಿಲ್ಲೆಯ ಫ‌ಲಿತಾಂಶದಲ್ಲಿ ಹುಡುಗಿಯರೇ ಮುಂದಿದ್ದಾರೆ.

ಶೇ. 90ರಷ್ಟು ಮೀರಿದ ಗುರಿ ಇತ್ತು
2021-22ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲಾ ಫ‌ಲಿತಾಂಶ ಶೇ. 90ಕ್ಕೂ ಅಧಿಕವಾಗಿಸುವ ನಿಟ್ಟಿನಲ್ಲಿ ಆರಂಭದಿಂದಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಕಾಲೇಜು ಹಂತದಲ್ಲಿಯೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಗೆ ಬೇಕಾದ ಪರಿಕರಗಳನ್ನು ಒದಗಿಸಲಾಗಿತ್ತು. ಜಿಲ್ಲಾಡಳಿತ ವಿವಿಧ ಇಲಾಖೆಯ ಸಹಕಾರದೊಂದಿಗೆ ಫೋನ್‌ಇನ್‌ ಸಹಿತ ಹಲವು ಕಾರ್ಯಕ್ರಮ ಹಮ್ಮಿಕೊಂಡಿತ್ತಾದರೂ ನಿರೀಕ್ಷಿತ ಪ್ರಮಾಣದಲ್ಲಿ ಫ‌ಲಿತಾಂಶ ಪಡೆಯಲು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಶೇ. 90ಕ್ಕೂ ಅಧಿಕ ಫ‌ಲಿತಾಂಶದ ನಿರೀಕ್ಷೆ ಹೊಂದಿದ್ದೇವು. ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದ್ದರೂ ಒಟ್ಟಾರೆ ಫ‌ಲಿತಾಂಶದಲ್ಲಿ ಕಡಿಮೆಯಾಗಿದೆ. ಕೊರೊನಾ, ಕಡ್ಡಾಯ ಹಾಜರಾತಿ ವಿನಾಯತಿ ಈ ರೀತಿಯ ಕಾರಣದಿಂದ ಫ‌ಲಿತಾಂಶದಲ್ಲಿ ಸ್ವಲ್ಪ ಕಡಿಮೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಇದರ ಸಂಪೂರ್ಣ ವಿಶ್ಲೇಷಣೆಯನ್ನು ಮಾಡಲಾಗುವುದು.
-ಮಾರುತಿ, ಡಿಡಿಪಿಯು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next