Advertisement

PU: ಕನ್ನಡ ಮಾಧ್ಯಮದ ಕಡಿಮೆ ಫ‌ಲಿತಾಂಶ ಚಿಂತನಾರ್ಹ

11:58 PM Apr 10, 2024 | Team Udayavani |

ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪದವಿಪೂರ್ವ ಕಾಲೇಜಿನ(ಪಿಯುಸಿ) ವಾರ್ಷಿಕ ಪರೀಕ್ಷೆ-1ರಲ್ಲಿ ಪರೀಕ್ಷೆ ಬರೆದಿದ್ದ 6,81,079 ವಿದ್ಯಾರ್ಥಿಗಳ ಪೈಕಿ 5,52,690 ಮಂದಿ ಉತ್ತೀರ್ಣರಾಗಿದ್ದಾರೆ. ದಾಖಲೆಯ ಶೇ.81.15 ಫ‌ಲಿತಾಂಶ ದೊರೆತಿದೆ. ನಿರೀಕ್ಷೆಯಂತೆ ವಿದ್ಯಾರ್ಥಿನಿಯರ ಮೇಲುಗೈ ಮುಂದುವರಿದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆ ಅಗ್ರ ಸ್ಥಾನ ಪಡೆದಿದ್ದರೆ, ಗದಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ವಿಶೇಷ ಎಂದರೆ, ಕೋವಿಡ್‌ ಅವಧಿಯ ಸಾಮೂಹಿಕ ಉತ್ತೀರ್ಣದ ಫ‌ಲಿತಾಂಶ ಹೊರತುಪಡಿಸಿದರೆ, ಕಳೆದ ವರ್ಷದ ಶೇ.74.67 ಫ‌ಲಿತಾಂಶದ ದಾಖಲೆ ನುಚ್ಚುನಾರಾಗಿದೆ. ಕಳೆದ ಬಾರಿಗಿಂತ ಈ ವರ್ಷ ಶೇ.6.48ರಷ್ಟು ಫ‌ಲಿತಾಂಶ ಏರಿಕೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ! ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಇಲಾಖೆಯ ಅವಿರತ ಪ್ರಯತ್ನಕ್ಕೆ ಸಂದ ಫ‌ಲವಿದು.

ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಅತ್ಯಂತ ಮಹತ್ವದ ಘಟ್ಟ. ಮುಂದಿನ ಉನ್ನತ ವ್ಯಾಸಂಗಕ್ಕೆ ಇದೇ ಅಡಿಪಾಯ. ಮಕ್ಕಳು ಇಲ್ಲಿ ತೋರುವ ಅತ್ಯುತ್ತಮ ಪ್ರದರ್ಶನವು ಅವರ ಮುಂಬರುವ ಅಧ್ಯಯನದ ದಿಕ್ಸೂಚಿಯಾಗಿರುತ್ತದೆ. ಆ ಕಾರಣಕ್ಕಾಗಿಯೇ ದ್ವಿತೀಯ ಪರೀಕ್ಷೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚು ಮಹತ್ವ ನೀಡುತ್ತಾರೆ. ಅತ್ಯುತ್ತಮ ಫ‌ಲಿತಾಂಶ ಪಡೆದು ವಿದ್ಯಾರ್ಥಿಗಳು ತಮ್ಮ ಗುರಿಗಳತ್ತ ದಾಪುಗಾಲು ಹಾಕುತ್ತಾರೆ.

ಇನ್ನೂ ಇದೇ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದವರು ಅಥವಾ ಅನುತ್ತೀ ರ್ಣರಾದವರು ಬದುಕೇ ಮುಗಿದು ಹೋಯಿತು ಎಂದು ಭಾವಿಸಿಕೊಳ್ಳಬೇಕಿಲ್ಲ. ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಇಚ್ಛಿಸುವ ಮತ್ತು ಅನುತ್ತೀರ್ಣವಾದವರು ಉಳಿದ ಎರಡು ಪರೀಕ್ಷೆಗಳ ಅವಕಾಶವನ್ನು ಬಳಸಿಕೊಳ್ಳಬಹುದು. ಅಲ್ಲೂ ವಿಫ‌ಲವಾದರೆ ಬದುಕಿಗೆ ಹಲವು ಮಾರ್ಗಗಳಿವೆ; ಶೋಧಿಸಬೇಕಷ್ಟೇ. ಆದರೆ ಎದೆಗುಂದಿ ಅತಿರೇಕದ ಕ್ರಮಗಳಿಗೆ ಮುಂದಾಗಬಾರದು. ಅಂಥ ವಿದ್ಯಾರ್ಥಿ ಗಳನ್ನು ಗುರುತಿಸಿ, ಪೋಷಕರು ಮತ್ತು ಶಿಕ್ಷಕರು ಧೈರ್ಯ ತುಂಬುವ ಕೆಲಸ ಮಾಡಬೇಕು.

ಸರಕಾರಿ ಕಾಲೇಜು ಸೇರಿ ಒಟ್ಟು 469 ಕಾಲೇಜುಗಳು ಶೇ.100 ಫ‌ಲಿತಾಂಶ ಸಾಧಿಸಿದರೆ, 35 ಕಾಲೇಜುಗಳ ಶೂನ್ಯ ಸಾಧನೆ ಮಾಡಿವೆ. ಈ ಕಾಲೇಜುಗಳ ಶೂನ್ಯ ಸಾಧನೆಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಬೇಕಾದ ಅಗತ್ಯವಿದೆ. ಇನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಹೋಲಿಸಿದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರ ಫ‌ಲಿತಾಂಶ ಕುಗ್ಗಿದೆ. ಇದು ಹೆಚ್ಚು ಆತಂಕಕ್ಕೆ ಕಾರಣವಾಗುವ ಸಂಗತಿ. ಕರ್ನಾಟಕದಲ್ಲೇ ಕನ್ನಡ ಮಾಧ್ಯಮ ಫ‌ಲಿತಾಂಶವು ಕುಗ್ಗುತ್ತಿರುವುದು ಶುಭ ಸೂಚನೆಯಲ್ಲ. ಈ ಕಳಪೆ ಸಾಧನೆಗೆ ಹಲವಾರು ಕಾರಣಗಳ ಇರಬಹುದು. ಆದರೆ ಅಂತಿಮವಾಗಿ ಫ‌ಲಿತಾಂಶವೇ ಮುಖ್ಯವಾಗುತ್ತದೆ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕು. ಯಾಕೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಹಿಂದೆ ಉಳಿಯುತ್ತಿದ್ದಾರೆ? ಅವರು ಎದುರಿಸುತ್ತಿರುವ ಸಮಸ್ಯೆಗಳೇನು? ಮೂಲಭೂತ ಸೌಕರ್ಯ ಕೊರತೆ ಸೇರಿ ಇತ್ಯಾದಿ ವಿಷ ಯಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಾದ ಅಗತ್ಯವಿದೆ. ಇದು ಕೇವಲ ತೋರಿಕೆಯಾಗಬಾರದು. ಗಂಭೀರವಾಗಿ ವ್ಯವಸ್ಥೆಯನ್ನು ರೂಪಿಸಿ, ಮುಂಬರುವ ವರ್ಷದ ಹೊತ್ತಿಗೆ ಧನಾತ್ಮಕ ಫ‌ಲಿತಾಂಶವನ್ನು ಪಡೆಯುವ ಗುರಿ ಹಾಕಿಕೊಳ್ಳುವುದು ಸರಕಾರದ ಪ್ರಥಮ ಆದ್ಯತೆಯಾಗಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next