Advertisement

ಪಿಯುಸಿ ಅಗ್ರ ಹತ್ತರಲ್ಲಿ ಆಟೋ ಚಾಲಕನ ಪುತ್ರಿ

12:27 AM Apr 16, 2019 | Team Udayavani |

ಬೆಂಗಳೂರು: ಸರಕು ಸಾಗಣೆ ಆಟೋ ಚಾಲಕನ ಪುತ್ರಿ ಒಬ್ಬರು, ಬಡತನದ ನಡುವೆಯೂ ಈ ಬಾರಿ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಟಾಪ್‌ 10ರಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ಪೀಣ್ಯ ನಿವಾಸಿಯಾಗಿರುವ ಗೋವಿಂದಯ್ಯ ಅವರು ನಿತ್ಯ ಸರಕು ಸಾಗಣೆ ಆಟೋ ಚಾಲನೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಇವರು ತಾನು ಹೆಚ್ಚು ಓದಿಲ್ಲ, ಮಗಳಾದರೂ ಓದಿ ಉನ್ನತ ಕೆಲಸ ಮಾಡಲಿ ಎಂದು ತಮ್ಮ ಮಗಳಾದ ಪಲ್ಲವಿಯನ್ನು ಸಾಲ ಮಾಡಿ ಖಾಸಗಿ ಕಾಲೇಜಿಗೆ ಸೇರಿಸಿದ್ದರು.

ನಿತ್ಯ ಅಪ್ಪನ ಕಷ್ಟವನ್ನು ಕಣ್ಣೆದುರು ಕಾಣುತ್ತಾ ಶ್ರಮಪಟ್ಟ ಓದಿದ ಪಲ್ಲವಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 591 ಅಂಕಗಳಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.

ತಮ್ಮ ಮಗಳ ಸಾಧನೆ ಕುರಿತು ಮಾತನಾಡಿ ಗೋವಿಂದಯ್ಯ, ನಾವು ಹೆಚ್ಚು ಓದದೇ ಈ ರೀತಿ ಆಟೋ ಓಡಿಸುವ ಕೆಲಸ ಮಾಡುತ್ತೀದ್ದೇವೆ. ಒಂದು ದಿನ 500 ರೂ. ಸಂಪಾದನೆಯಾದರೇ ಮತ್ತೂಂದು ದಿನ ಖಾಲಿ ಕೈಯಲ್ಲಿ ಮನೆ ಸೇರಿದ್ದೇನೆ.

ಆದರೆ, ಇಂತಹ ಪರಿಸ್ಥಿತಿ ನನ್ನ ಮಕ್ಕಳಿಗೆ ಬರಬಾರದು, ನನ್ನ ಮಗಳು ಹೆಚ್ಚು ಓದಿ ಅಧಿಕಾರಿಯಾಗಬೇಕು ಕೈತುಂಬ ಸಂಬಳ ಪಡೆಯಬೇಕು ಎಂದು ಅವಳನ್ನು ಓದಿಸುತ್ತಿದ್ದೇನೆ. ದುಡಿಮೆಯಿಂದ ಮೊಲನೆ ವರ್ಷ ಕಾಲೇಜು ಶುಲ್ಕ ಕಟ್ಟಲಾಗಲಿಲ್ಲ.

Advertisement

ಹೀಗಾಗಿ, ಸಾಲ ಮಾಡಿದ್ದೆ. ಆನಂತರ ಆಕೆ ಎಸ್‌ಎಸ್‌ಎಲ್‌ಸಿಯಲ್ಲಿಯೂ ಉತ್ತಮ ಅಂಕ ತೆಗೆದಿದ್ದರಿಂದ “ದೇವರಾಜ ಅರಸು’ ವಿದ್ಯಾರ್ಥಿ ವೇತನ ಬಂದು ಸಹಾಯವಾಯಿತು. ಆಕೆ ಮುಂದೆ ಇಂಜಿನಿಯರಿಂಗ್‌ ಓದಬೇಕು ಎನ್ನುತ್ತಿದ್ದು, ಮತ್ತೆ ಸಾಲ ಮಾಡಿಯಾದರೂ ಓದಿಸುತ್ತೇನೆ ಎಂದರು.

ವಿದ್ಯಾರ್ಥಿ ಪಲ್ಲವಿ ಮಾತನಾಡಿ, ಅಂದಿನ ಪಾಠ ಅಂದೇ ಓದಿ ಮುಗಿಸುತ್ತಿದ್ದೆ. ಜತೆಗೆ ಕಾಲೇಜು ಮುಗಿದ ಮೇಲೆ ನಿತ್ಯ 4 ತಾಸು ಹೆಚ್ಚು ಓದುತ್ತಿದ್ದೆ. ಹೀಗಾಗಿ, ಪರೀಕ್ಷೆ ಸಮಯದಲ್ಲಿ ಒತ್ತಡವಾಗಲಿಲ್ಲ. ಅಂದು ಕೊಂಡಷ್ಟೇ ಅಂಕ ಬಂದಿದ್ದು, ಸಂತೋಷವಾಯಿತು.

ಎಂಜಿನಿಯರಿಂಗ್‌ ಓದುತ್ತಾ ಜತೆಗೆ ಐಎಎಸ್‌ ಪರೀಕ್ಷೆಗೂ ಸಿದ್ಧತೆ ಮಾಡಿಕೊಳ್ಳುತ್ತೇನೆ. ನನಗೆ ಪ್ರೋತ್ಸಾಹಿಸಿದ ಎಎಸ್‌ಸಿ ಕಾಲೇಜಿನ ಎಲ್ಲಾ ಬೋಧಕರಿಗೆ ಧನ್ಯವಾದಗಳು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next