ಉಡುಪಿ: ಜಿಲ್ಲೆಯಲ್ಲಿ ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮೊದಲ ದಿನ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆದಿದೆ.
ಕನ್ನಡ ಪರೀಕ್ಷೆಗೆ 8,833 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 8,742 ವಿದ್ಯಾರ್ಥಿಗಳು ಹಾಜರಾಗಿ 91 ಮಂದಿ ಗೈರಾಗಿದ್ದರು. ಅರೇಬಿಕ್ ವಿಷಯಕ್ಕೆ ಯಾವುದೇ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿರಲಿಲ್ಲ. ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಉಡುಪಿಯ ಸರಕಾರಿ ಬಾಲಕಿಯರ ಪ್ರೌಢಶಾಲೆಗೆ (ಪಿಯುಸಿ ವಿಭಾಗ) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಡಿಪಿಯು ಮಾರುತಿ, ತಾಹಶೀಲ್ದಾರ್‌ಗಳು ಹಾಗೂ ವಿಚಕ್ಷಣ ದಳದ ಅಧಿಕಾರಿಗಳು ವಿವಿಧ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮ ದಾಖಲಾಗಿಲ್ಲ.
ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರದಿಂದ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ದಿನ ಸಾಂಗವಾಗಿ ನಡೆದಿದೆ. ಮೊದಲ ದಿನ ನಡೆದ ಭಾಷಾ ಪರೀಕ್ಷೆಯಲ್ಲಿ ಒಟ್ಟು 242 ಮಂದಿ ಗೈರು ಹಾಜರಾಗಿದ್ದಾರೆ.
ಕನ್ನಡ ಭಾಷಾ ಪರೀಕ್ಷೆಯಲ್ಲಿ 19,385 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಈ ಪೈಕಿ 19,169 ಮಂದಿ ಹಾಜರಾಗಿದ್ದಾರೆ. 216 ಮಂದಿ ಗೈರು ಹಾಜರಾಗಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳ ಪೈಕಿ 120 ಮಂದಿಯಲ್ಲಿ 94 ಮಂದಿ ಹಾಜರಾಗಿ 26 ಮಂದಿ ಗೈರು ಹಾಜರಾಗಿದ್ದಾರೆ. ಅರೇಬಿಕ್‌ನಲ್ಲಿ 134 ಮಂದಿ ಹಾಜರಾಗಿದ್ದಾರೆ.
ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭವಾಗಿದೆ. ಒಟ್ಟು 34,340 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅದರಲ್ಲಿ 31,222 ಸಾಮಾನ್ಯ ವಿದ್ಯಾರ್ಥಿಗಳು, 2,016 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಖಾಸಗಿಯಾಗಿ ನೋಂದಾಯಿಸಿಕೊಂಡಿದ್ದಾರೆ. 1,102 ವಿದ್ಯಾರ್ಥಿಗಳು ಪುನರಾವರ್ತಿತರು.