ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ಕನ್ನಡದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಹಾಗಾಗಿ, ಈ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಜ್ಞಾನ ವಿಷಯದ ಕನಿಷ್ಠ ಹತ್ತು ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸುವ ಉದ್ದೇಶ ಹೊಂದಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದ್ದಾರೆ.
ನಯನ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಎಂ. ವೆಂಕಟಸ್ವಾಮಿಯವರ “ಕೋಲಾರದ ಚಿನ್ನದ ಗಣಿಗಳು’ ಕೃತಿಯ ಇಂಗ್ಲಿಷ್ ಅನುವಾದ ಮತ್ತು “ನಮ್ಮ ಭೂಮಿಯ ಹಾಡು ಪಾಡು’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಹಾಜರಾಗುವ ಕನ್ನಡಿಗರ ಸಂಖ್ಯೆ ಹೆಚ್ಚಾಗಿರಬಹುದು. ಆದರೆ, ಕನ್ನಡ ಮಾಧ್ಯಮದವರು ನಿರೀಕ್ಷಿತ ಪ್ರಮಾಣದಲ್ಲಿ ತೇರ್ಗಡೆಯಾಗಿತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕನ್ನಡದಲ್ಲಿ ಮಾಹಿತಿ ಇಲ್ಲದಿರುವುದು. ಆದ್ದರಿಂದ ವಿಜ್ಞಾನ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕ ಹೊರತರು ಪರಿಷತ್ತು ಉದ್ದೇಶಿಸಿದೆ. ಲೇಖಕರು ಪುಸ್ತಕಗಳನ್ನು ಬರೆದುಕೊಟ್ಟರೆ ಪ್ರಕಟಿಸಲು ಸಿದ್ಧ ಎಂದು ಬಳಿಗಾರ್ ತಿಳಿಸಿದರು.
ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಗೌರವ ಕಾರ್ಯದರ್ಶಿ ಆರ್.ಎಚ್. ಸಹುಕಾರ್ ಮಾತನಾಡಿ, ದೇಶದಲ್ಲಿ ವಾರ್ಷಿಕ 50 ಟನ್ ಚಿನ್ನ ಉತ್ಪಾದಿಸುವ ಸಾಮರ್ಥಯ ಇದ್ದರೂ, ತಪ್ಪು ನೀತಿಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಸದ್ಯ ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕ 3 ಟನ್ ಚಿನ್ನ ಮಾತ್ರ ಉತ್ಪಾದನೆಯಾಗುತ್ತಿದೆ. ರಾಜಸ್ಥಾನ, ಛತ್ತೀಸಗಢ, ಜಾರ್ಖಂಡ್ ಮತ್ತು ಆಂಧ್ರಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳು ಇದ್ದರೂ, ಗಣಿಗಾರಿಕೆಗೆ ಅವಕಾಶ ಕೊಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಮರ್ಶಕ ಪ್ರೊ. ಸಿ.ಎನ್. ರಾಮಚಂದ್ರನ್ ಮಾತನಾಡಿ, ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಆಯಾಮಗಳಲ್ಲಿ ಗಣಿಗಾರಿಕೆ ಮತ್ತು ಗಣಿ ಕಾರ್ಮಿಕರ ಬವಣೆಗಳನ್ನು ಪುಸ್ತಕದಲ್ಲಿ ಮಾರ್ಮಿಕವಾಗಿ ವಿವರಿಸಲಾಗಿದೆ. ಕನ್ನಡ ಸಾಹಿತ್ಯಕ್ಕೂ ಭೂಗರ್ಭ ವಿಜ್ಞಾನಕ್ಕೂ ಗಾಢ ನಂಟಿದೆ. ಟಿ.ಪಿ.ಕೈಲಾಸಂ ಭೂವಿಜ್ಞಾನಿ. ಕವಿ ನಿಸಾರ್ ಅಹಮದ್ ಸಹ ಭೂಗರ್ಭ ಶಾಸ್ತ್ರಜ್ಞರು ಎಂದು ಹೇಳಿದರು. ಲೇಖಕ ಡಾ. ಎಂ. ವೆಂಕಟಸ್ವಾಮಿ, ಕೃತಿಯ ಅನುವಾದಕ ಡಾ. ಎಚ್.ಎಸ್.ಎಂ ಪ್ರಕಾಶ್ ಮತ್ತಿತರರು ಇದ್ದರು.