Advertisement

ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟಿಸಿ

02:41 PM Feb 16, 2017 | Team Udayavani |

ಧಾರವಾಡ: ಸರಕಾರದ ಎಲ್ಲ ಇಲಾಖೆಗಳು, ಸಂಸ್ಥೆಗಳು ವೆಬ್‌ಸೈಟ್‌ನಲ್ಲಿ ತಮ್ಮ ಯೋಜನೆಗಳು, ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸುವುದರ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅರ್ಜಿಗಳಿಗೆ ಉತ್ತರ ಒದಗಿಸಬೇಕು ಎಂದು ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಶಂಕರ್‌ ಆರ್‌.ಪಾಟೀಲ ಹೇಳಿದರು. 

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರಿ  ಇಲಾಖೆಗಳು, ಸಂಸ್ಥೆಗಳು ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಿದ್ದರೆ, ಆರ್‌ಟಿಐ ಕಾಯ್ದೆಯಡಿ ಬರುವ ಅರ್ಜಿಗಳಿಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪಡೆಯಲು ತಿಳಿಸಬಹುದು.

ಇದರಿಂದ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಸಹಾಯವಾಗುತ್ತದೆ ಎಂದರು. ಸರಕಾರಿ ಕಾರ್ಯಾಲಯಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಿಸುವಾಗ ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸುವವರನ್ನು ಗುರುತಿಸಿ ಅಧಿಕಾರ ನೀಡಬೇಕು. ವಿಚಾರಣೆ ಸಂದರ್ಭದಲ್ಲಿ ಅವರು ಪ್ರಕರಣದ ಕುರಿತು ಸಮರ್ಪಕವಾಗಿ ವಾದ ಮಂಡಿಸುವ ಸಾಮರ್ಥ್ಯ ಹೊಂದಿರಬೇಕು.

ಇಲ್ಲವಾದರೆ ಇಲಾಖೆ ಮುಖ್ಯಸ್ಥರು ದಂಡ ತೆರುವ, ಅಮಾನತು ಆಗುವ ಸಂದರ್ಭಗಳು ಎದುರಾಗುತ್ತವೆ ಎಂದರು. ಹಣ ಪಾವತಿಸಿದ ಕೂಡಲೇ ಅರ್ಜಿದಾರರ ಮೊದಲ ಕೋರಿಕೆಗೆ ಮಾಹಿತಿ ನೀಡಿ, ನಂತರ ಕಾಲಾವಕಾಶ ಪಡೆದು ಉಳಿದ ಮಾಹಿತಿ ಒದಗಿಸಬಹುದು. ಅರ್ಜಿದಾರರು ಮೂರನೇ ವ್ಯಕ್ತಿಯ ಅರೋಗ್ಯ ವೆಚ್ಚ, ಮತ್ತಿತರ ವೈಯಕ್ತಿಕ ಮಾಹಿತಿ ಕೇಳಿದ್ದರೆ ಸಂಬಂಧಿಸಿದವರ ಅನುಮತಿ ಪಡೆದ ಬಳಿಕವೇ ಉತ್ತರ ಒದಗಿಸಬೇಕು.

ಅವರು ಒಪ್ಪದಿದ್ದರೆ ಮಾಹಿತಿ ನೀಡದಿರಲು ಅವಕಾಶವಿದೆ. ಆಗ ಅರ್ಜಿಯನ್ನು ನಿಯಮ 14ರ ಅಡಿಯಲ್ಲಿ ಸ್ವೀಕರಿಸಲಾಗಿದೆ ಎಂದು ದಾಖಲಿಸಿಕೊಂಡರೆ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಧಿಕಾರಿ ವರ್ಗದವರಿಂದ ಕೇಳಿ ಬಂದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೆಲವೊಂದಿಷ್ಟು ಪ್ರಕರಣಗಳ ಗೊಂದಲಗಳನ್ನು ನಿವಾರಿಸಿದರು. ಜಿಪಂ ಸಿಇಒ ಅಧಿಕಾರಿ ಸ್ನೇಹಲ್‌ ಆರ್‌, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next