Advertisement
ಈ ರಸ್ತೆಯು ಬೆಳ್ತಂಗಡಿ-ಕಾರ್ಕಳ ತಾಲೂಕನ್ನು ಸಂಧಿಸುವ ಜತೆಗೆ ದ.ಕ.- ಉಡುಪಿ ಜಿಲ್ಲೆಗಳನ್ನು ಸಂಧಿಸುವ ರಸ್ತೆಯೂ ಆಗಿದೆ. ಜತೆಗೆ ಉಭಯ ಜಿಲ್ಲೆಗಳ ಪ್ರಮುಖ ಧಾರ್ಮಿಕ ತಾಣಗಳಾದ ಉಡುಪಿ ಶ್ರೀ ಕೃಷ್ಣ ಮಠ, ಧರ್ಮಸ್ಥಳ, ಕೊಲ್ಲೂರು, ಸುಬ್ರಹ್ಮಣ್ಯ, ಸೌತಡ್ಕ ಹೀಗೆ ಪ್ರಮುಖ ಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಜತೆಗೆ ಹಲವು ಪ್ರವಾಸಿ ತಾಣಗಳನ್ನೂ ಸಂಪರ್ಕಿಸುವುದರಿಂದ ಹೆಚ್ಚಿನ ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತವೆ. ರಜಾ ಸಮಯಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಅಪಾಯದ ಸಾಧ್ಯತೆಗಳನ್ನೂ ಅರಿತುಕೊಂಡು ರಸ್ತೆಯ ಅಭಿವೃದ್ಧಿಗೆ ಸಂಬಂಧಪಟ್ಟವರು ಗಮನಹರಿಸಬೇಕಿದೆ.
ಬೆಳ್ತಂಗಡಿ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಇದೇ ಪ್ರಮುಖ ರಸ್ತೆಯಾಗಿದ್ದು, ಅಲ್ಲಿನ ಸಾರ್ವಜನಿಕರು ತಾಲೂಕು ಕೇಂದ್ರವನ್ನು ಸಂಪರ್ಕಿಸುವುದಕ್ಕೆ ಈ ರಸ್ತೆಯ ಮೂಲಕವೇ ಸಾಗಬೇಕಿದೆ. ಜತೆಗೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳುವುದಕ್ಕೆ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಹೀಗಾಗಿ ಪ್ರವಾಸಿಗರಿಗಿಂತಲೂ ನಿತ್ಯ ಸಂಚರಿಸುವ ನಮಗೆ ರಸ್ತೆಯ ಅಭಿವೃದ್ಧಿ ಅನಿವಾರ್ಯ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ಡಾಮರೀ ಕರಣ ನಡೆಸಿದಲ್ಲಿ ಒಂದಷ್ಟು ವರ್ಷಗಳ ಕಾಲ ರಸ್ತೆಯ ನಿರ್ವಹಣೆಯೂ ತಪ್ಪಲಿದೆ ಎಂದು ಸ್ಥಳೀಯರು ಹೇಳುತ್ತಾರೆ.
Related Articles
ಈ ರಸ್ತೆಯು ಸುಬ್ರಹ್ಮಣ್ಯ- ಉಡುಪಿ ರಸ್ತೆಯಾಗಿದ್ದು, ಈಗಾಗಲೇ ಅದರ ಅಭಿವೃದ್ಧಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಧರ್ಮಸ್ಥಳದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದರು. ಸಚಿವರು ಸರಕಾರಕ್ಕೆ ಒತ್ತಡ ಹೇರಿ ಪ್ರಸ್ತಾವನೆಯ ಅನುದಾನವನ್ನು ಮಂಜೂರುಗೊಳಿಸಿದ್ದೇ ಆದಲ್ಲಿ ರಸ್ತೆಯ ಅಭಿವೃದ್ಧಿಯ ಕೂಗಿಗೆ ಮನ್ನಣೆ ದೊರಕಲಿದೆ.
Advertisement
ತೇಪೆ ಕಾರ್ಯ ಪ್ರಗತಿಯಲ್ಲಿಪ್ರಸ್ತುತ ರಸ್ತೆಯ ಹೊಂಡಗಳಿಗೆ ತೇಪೆ ಕಾರ್ಯ ಆರಂಭವಾಗಿದೆ. ನಾರಾವಿ ಸೇತುವೆವರೆಗೆ ರಸ್ತೆ ನಮ್ಮ ಭಾಗಕ್ಕೆ ಬರುತ್ತಿದ್ದು, ಹಾಲಿ ತೇಪೆ ಕಾರ್ಯ ಆರಂಭಗೊಂಡಿದೆ. ಪ್ರಸ್ತುತ ಬದ್ಯಾರು ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದು, ಶೀಘ್ರದಲ್ಲಿ ತೇಪೆ ಕಾರ್ಯ ಪೂರ್ಣಗೊಂಡು, ಸಂಚಾರ ಸುಗಮವಾಗಲಿದೆ.
– ಶಿವಪ್ರಸಾದ್ ಅಜಿಲ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಬೆಳ್ತಂಗಡಿ