Advertisement

ಡಿಎಲ್‌, ಆರ್‌ಸಿ ಪಡೆಯಲು ಹರಸಾಹಸ

08:32 PM Sep 24, 2021 | Team Udayavani |

ಉಡುಪಿ: ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನೆ ಕೊರತೆಯಿಂದಾಗಿ ಬ್ಯಾಂಕಿಂಗ್‌ ಹಾಗೂ ಅಟೋಮೊಬೈಲ್‌ ಕ್ಷೇತ್ರದಲ್ಲಿಯೂ ಕಾರ್ಡ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.  ಅದರಲ್ಲೂ  ರಾಜ್ಯದ ಆರ್‌ಟಿಒ ಕಚೇರಿಗಳಲ್ಲಿ ಡಿಎಲ್‌ ಹಾಗೂ ಆರ್‌ಸಿ ಸ್ಮಾರ್ಟ್‌ ಕಾರ್ಡ್‌ ಗಳನ್ನು ಪಡೆಯಲು ಸಾರ್ವಜನಿಕರು ದಿನನಿತ್ಯ ಪರದಾಡುತ್ತಿದ್ದಾರೆ.

Advertisement

ಆರ್‌ಟಿಒ ಸ್ಮಾರ್ಟ್‌ಕಾರ್ಡ್‌ ಸರಬರಾಜು ಗುತ್ತಿಗೆ ಯನ್ನು ರೋಸ್‌ಮಾರ್ಟ್‌ ಕಂಪೆನಿಗೆ ವಹಿಸಿಕೊಡಲಾಗಿದೆ. ಆದರೆ ಬೇಡಿಕೆ ಇರುವಷ್ಟು ಲಭ್ಯ ಇಲ್ಲದ ಕಾರಣ ಪೂರೈಕೆಯೂ ಕುಂಠಿತಗೊಂಡಿದೆ.

ಉತ್ಪಾದನ ಘಟಕ ಸ್ಥಗಿತ:

ಭಾರತಕ್ಕೆ ವಿದೇಶದಿಂದ ಸ್ಮಾರ್ಟ್‌ ಕಾರ್ಡ್‌ಗಳು ಪೂರೈಕೆಯಾಗುತ್ತಿದ್ದು, ಕೊರೊನಾ ಅಲೆಯಿಂದಾಗಿ ಹಲವಾರು ಸೆಮಿಕಂಡಕ್ಟರ್‌ ಉತ್ಪಾದನ ಘಟಕಗಳು ಸ್ಥಗಿತಗೊಂಡಿರುವ ಕಾರಣ ವಿಶ್ವಾದ್ಯಂತ ಹಲವು ಸೆಮಿಕಂಡಕ್ಟರ್‌ ಉತ್ಪಾದನ ಘಟಕಗಳಿಗೆ ಬೀಗ ಬಿದ್ದಿದೆ. ಮಾರುಕಟ್ಟೆ ವ್ಯವಸ್ಥೆ ಪುನರಾರಂಭಗೊಂಡರೂ ಬೇಡಿಕೆಗೆ ತಕ್ಕಂತೆ ಕಾರ್ಡ್‌ ತಯಾರಾಗುತ್ತಿಲ್ಲ ಎನ್ನಲಾಗಿದೆ.

ಅಧಿಕಾರಿಗಳಿಗೆ ಸಂಕಷ್ಟ:

Advertisement

ಕಾರ್ಡ್‌ಗಳ ಅಸಮರ್ಪಕ ಪೂರೈಕೆಯಿಂದಾಗಿ ಇಲಾಖೆಯ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದಿಷ್ಟ ದಿನದೊಳಗೆ ಗ್ರಾಹಕರಿಗೆ ವಿತರಿಸಬೇಕೆಂಬ ನಿಯಮವಿರುವ ಕಾರಣ ಗ್ರಾಹಕರು ಅಧಿಕಾರಿಗಳ ವಿರುದ್ಧ ಪ್ರಶ್ನೆ ಮಾಡುವ ಘಟನೆ ನಡೆಯುತ್ತಿದೆ. ಈ ಬಗ್ಗೆ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಗೆ ಹಲವಾರು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುವುದು ಅಧಿಕಾರಿಗಳ ಅಳಲು.

ವಾಹನ ಉತ್ಪಾದನೆಗೂ ಹೊಡೆತ:

ಸೆಮಿಕಂಡಕ್ಟರ್‌ ಜಾಗತಿಕ ಉತ್ಪಾದನೆ ಕೊರತೆ ಯಿಂದಾಗಿ ಕೆಲವೊಂದು ಬಿಡಿಭಾಗಗಳ ಪೂರೈಕೆಯೂ ಕಡಿಮೆ ಯಾಗಿದೆ. ಅಟೋಮೊಬೈಲ್‌, ಬ್ಯಾಂಕಿಂಗ್‌ ಕ್ಷೇತ್ರಕ್ಕೂ ಇದರ ಪರಿಣಾಮ ತಟ್ಟುತ್ತಿದೆ. ಭಾರತ ದೇಶದಲ್ಲಿ ಸೆಮಿಕಂಡಕ್ಟರ್‌ಗಳ ಉತ್ಪಾದನ ಘಟಕಗಳು ನಿರ್ಮಾಣ ಗೊಂಡರೆ ಇಂತಹ ಸಮಸ್ಯೆ ಉದ್ಭವಿಸುವುದು ತಪ್ಪಲಿದೆ.

ಜಿಲ್ಲೆಗೂ ಸ್ಮಾರ್ಟ್‌ ಕಾರ್ಡ್‌ ಬೇಡಿಕೆ :

ಉಡುಪಿ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ ಯಲ್ಲಿ ತಿಂಗಳಿಗೆ 7ರಿಂದ 8 ಸಾವಿರ ದಷ್ಟು ಸ್ಮಾರ್ಟ್‌ ಕಾರ್ಡ್‌ಗಳ ಆವಶ್ಯಕತೆಯಿದೆ.15ರಿಂದ 30 ದಿನದೊಳಗೆ ಪರವಾನಿಗೆದಾರರಿಗೆ ನೀಡಬೇಕಾ ಗುತ್ತದೆ. ಆದರೆ ಈಗ ಈ ಪ್ರಕ್ರಿಯೆ ವಿಳಂಬ ವಾಗುತ್ತಿರುವುದರಿಂದ ತೊಂದರೆ ಉಂಟಾಗುತ್ತಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಸ್ಮಾರ್ಟ್‌ ಕಾರ್ಡ್‌ಗೆ ಬೇಡಿಕೆ ಇಟ್ಟಷ್ಟು ಪೂರೈಕೆ ಯಾಗುತ್ತಿಲ್ಲ. ಆಗಸ್ಟ್‌ನಿಂದಲೇ ಈ ಸಮಸ್ಯೆ ಇತ್ತು. ಈಗ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹಿಂದಿನಂತೆ ಸಮರ್ಪಕವಾಗಿ ಪೂರೈಕೆಯಾದರೆ ತ್ವರಿತ ಸೇವೆ ನೀಡಲು ಸಹಕಾರಿಯಾಗಲಿದೆ. ಜೆ.ಪಿ.ಗಂಗಾಧರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ

 

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next