Advertisement

ಇನ್ನೂ 224 ಪಬ್ಲಿಕ್‌ ಶಾಲೆ : ಹೋಬಳಿಗೊಂದು ಕೆಪಿಎಸ್‌ ಸ್ಥಾಪನೆ ಮಾನದಂಡ

09:53 AM Mar 03, 2020 | sudhir |

ಬೆಂಗಳೂರು: ಸರಕಾರಿ ಶಾಲಾ ವ್ಯವಸ್ಥೆಯನ್ನು ಸದೃಢಗೊಳಿಸಲು ಈಗಾಗಲೇ ಆರಂಭಿಸಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳ ಜತೆಗೆ 2020-21ನೇ ಸಾಲಿನಲ್ಲಿ ಮತ್ತೆ 224 ಶಾಲೆಗಳು ಸೇರ್ಪಡೆಯಾಗಲಿವೆ. ಈ ಎಲ್ಲ ಶಾಲೆಗಳಲ್ಲೂ ಇಂಗ್ಲಿಷ್‌ ಭಾಷೆಗೆ ಆದ್ಯತೆ ಇರಲಿದೆ.

Advertisement

ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಶಿಕ್ಷಣವನ್ನು ಒಂದೇ ಸೂರಿನಡಿ ಸರಕಾರಿ ವ್ಯವಸ್ಥೆಯಡಿ ನೀಡುವ ಉದ್ದೇಶದಿಂದ 2018-19ರಲ್ಲಿ 176 ಕರ್ನಾಟಕ ಪಬ್ಲಿಕ್‌ ಶಾಲೆ ಗಳನ್ನು ತೆರೆಯಲಾಗಿತ್ತು. 2019-20ರಲ್ಲಿ ಹೊಸ ದಾಗಿ 100 ಶಾಲೆಗಳನ್ನು ಪ್ರಾರಂಭಿಸಲಾಗಿತ್ತು. ಸದ್ಯ 276 ಕರ್ನಾಟಕ ಪಬ್ಲಿಕ್‌ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. 2020-21ನೇ ಸಾಲಿನಲ್ಲಿ ಹೊಸದಾಗಿ 224 ಶಾಲೆಗಳನ್ನು ತೆರೆಯಲು ಎಲ್ಲ ಜಿಲ್ಲೆಗಳಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.

ಜಿಲ್ಲಾ ಉಪ ನಿರ್ದೇಶಕರು ಸಲ್ಲಿಸುವ ಪ್ರಸ್ತಾ ವನೆ ಯಂತೆ 224 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆ ಗಳು ಮುಂದಿನ ಶೈಕ್ಷಣಿಕ ವರ್ಷದಿಂದ (2020-21) ಕಾರ್ಯ ರೂಪಕ್ಕೆ ಬರಲಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ “ಉದಯವಾಣಿ’ಗೆ ಖಚಿತಪಡಿಸಿದ್ದಾರೆ.

ಈ ವರ್ಷ ಕರ್ನಾಟಕ ಪಬ್ಲಿಕ್‌ ಶಾಲೆಯ ಪೂರ್ವ ಪ್ರಾಥಮಿಕ ಮತ್ತು ಒಂದನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ. 2020-21ನೇ ಸಾಲಿನಲ್ಲಿ 224 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಸರಕಾರ ಉದ್ದೇಶಿಸಿದೆ. ಪ್ರತಿ ಹೋಬಳಿಗೆ ಒಂದರಂತೆ ಕರ್ನಾಟಕ ಪಬ್ಲಿಕ್‌ ಶಾಲೆ ಇರುವಂತೆ ನೋಡಿಕೊಂಡು ತಮ್ಮ ಜಿಲ್ಲೆಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗೆ ಪರಿವರ್ತಿಸಬಹುದಾದ ಶಾಲೆಗಳ ಪಟ್ಟಿಯನ್ನು ಸಲ್ಲಿಸಲು ರಾಜ್ಯ ಸಮಗ್ರ ಶಿಕ್ಷಣ ನಿರ್ದೇಶಕರು ಎಲ್ಲ ಜಿಲ್ಲೆಗಳ ಉಪನಿರ್ದೇಶಕರಿಗೆ ಪ್ರಸ್ತಾವನೆ ಪತ್ರವನ್ನು ಕಳುಹಿಸಿದ್ದು, ಆ ಪತ್ರ “ಉದಯವಾಣಿ’ಗೆ ಲಭ್ಯವಾಗಿದೆ.

ಹೋಬಳಿಗೊಂದು ಮಾನದಂಡ
ಜಿಲ್ಲಾ ವ್ಯಾಪ್ತಿಯಲ್ಲಿನ ಶೇ.50ರಷ್ಟು ಹೋಬಳಿ ಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳು ಹಂಚಿಕೆ ಯಾಗಿರುವಂತೆ ಜಿಲ್ಲಾ ಉಪನಿರ್ದೇಶಕರು ಕ್ರಮ ಕೈಗೊಳ್ಳಬೇಕು. ಒಂದೇ ಆವರಣದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಪ್ರಥಮ ಆದ್ಯತೆ ನೀಡಬೇಕು. ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸದೆ ಇದ್ದರೂ ಅದೇ ಗ್ರಾಮ, ಪಟ್ಟಣ ಅಥವಾ ನಗರ ಸಮೀಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ (500 ಮೀಟರ್‌ ಅಂತರ) ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪಿಯು ಕಾಲೇಜುಗಳನ್ನು ಪರಿಗಣಿಸಬಹುದು.

Advertisement

ಪಿಯು ಕಾಲೇಜುಗಳು ಇಲ್ಲದಿದ್ದಲ್ಲಿ ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಜತೆಗೆ ಇರುವ ಶಾಲೆ ಗಳನ್ನು ಪರಿಗಣಿಸಬಹುದು. 2020-21ನೇ ಸಾಲಿ ನಲ್ಲಿ ಆರಂಭಿಸುವ ಶಾಲೆ ಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಆದ್ಯತೆ ನೀಡಬೇಕು. ಪ್ರತಿ ವಿಧಾನಸಭೆ ಕ್ಷೇತ್ರ ದಲ್ಲೂ ಕರ್ನಾಟಕ ಪಬ್ಲಿಕ್‌ ಶಾಲೆ ಇರುವಂತೆ ಆಯ್ಕೆ ಮಾಡಬೇಕು ಮತ್ತು ಆಯ್ಕೆ ಸಂದರ್ಭದಲ್ಲಿ ಸ್ಥಳೀಯ ಶಾಸಕರೊಂದಿಗೆ ಸಮಾಲೋಚಿಸಬೇಕು. ಜನಪ್ರತಿನಿಧಿಗಳು ಸಲ್ಲಿಸಿರುವ ಬೇಡಿಕೆಗಳನ್ನು ಪರಿಗಣಿಸಿ, ಇಲಾಖೆಯ ಮಾರ್ಗಸೂಚಿಯಂತೆ ಶಾಲೆಗಳ ಆಯ್ಕೆ ನಡೆಸಬೇಕು ಎಂದು ಉಪನಿರ್ದೇಶಕರಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಉಡುಪಿ ಜಿಲ್ಲೆಗೆ ಇಲ್ಲ
ಉಡುಪಿ ಜಿಲ್ಲೆಯಲ್ಲಿ 8 ಹೋಬಳಿಗಳಿದ್ದು, 8 ಕರ್ನಾಟಕ ಪಬ್ಲಿಕ್‌ ಶಾಲೆಗಳಿವೆ. ಎಲ್ಲ ಹೋಬಳಿಗಳಲ್ಲೂ ಕರ್ನಾಟಕ ಪಬ್ಲಿಕ್‌ ಶಾಲೆ ಇರುವುದರಿಂದ 2020- 21ನೇ ಸಾಲಿನಲ್ಲಿ ಉಡುಪಿಯಲ್ಲಿ ಹೊಸ ಶಾಲೆ ತೆರೆ ಯುವು ದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಾನದಂಡಗಳೇನು?
– ಶೇ. 50ರಷ್ಟು ಹೋಬಳಿಗಳಲ್ಲಿ ಶಾಲೆ ಹಂಚಿಕೆ ಯಾಗುವ ಬಗ್ಗೆ ಉಪ ನಿರ್ದೇಶಕರ ಕ್ರಮ.
– ಒಂದೇ ಆವರಣದಲ್ಲಿರುವ ಶಾಲೆಗಳಿಗೆ ಆದ್ಯತೆ.
– ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಇರಬೇಕು.
– ಜನಪ್ರತಿನಿಧಿಗಳ ಬೇಡಿಕೆ, ಇಲಾಖೆಯ ಸೂಚನೆಯಂತೆ ಆಯ್ಕೆ.
– ಸ್ಥಳೀಯ ಶಾಸಕರ ಜತೆಗೆ ಸಮಾಲೋಚನೆ ಅಗತ್ಯ.

ಎಲ್ಲೆಲ್ಲಿ ಶಾಲೆಗಳು?
17 ಬೆಂಗಳೂರು ಉತ್ತರ
16 ಬೆಂಗಳೂರು ದಕ್ಷಿಣ
07 ಬೆಂಗಳೂರು ಗ್ರಾಮಾಂತರ
15 ಶಿವಮೊಗ್ಗ
12 ಮೈಸೂರು
10 ಹಾಸನ, ಬೀದರ್‌, ಚಿಕ್ಕಮಗಳೂರು ಮತ್ತು ಬಳ್ಳಾರಿ
09 ಮಂಡ್ಯ, ಕಲಬುರಗಿ
08 ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ
07 ರಾಯಚೂರು
06 ಕೊಡಗು, ಯಾದಗಿರಿ
04 ಚಾಮರಾಜನಗರ, ಚಿತ್ರದುರ್ಗ, ಧಾರವಾಡ, ಹಾವೇರಿ, ಬೆಳಗಾವಿ, ಶಿರಸಿ ಮತ್ತು ವಿಜಯಪುರದಲ್ಲಿ ತಲಾ 5, ಬಾಗಲಕೋಟೆ, ದಕ್ಷಿಣ ಕನ್ನಡ, ದಾವಣಗೆರೆ, ರಾಮನಗರ ಹಾಗೂ ಮಧುಗಿರಿ.
02 ಉತ್ತರ ಕನ್ನಡ, ಕೊಪ್ಪಳ
01 ಗದಗ, ಚಿಕ್ಕೋಡಿ
34 ರಾಜ್ಯದಲ್ಲಿರುವ ಶೈಕ್ಷಣಿಕ ಜಿಲ್ಲೆಗಳು
953 ಹೋಬಳಿಗಳು

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next