ಕೊಳ್ಳೇಗಾಲ: ಸರ್ಕಾರಿ ಸೇವೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದಾಗ ಸಾರ್ವಜನಿಕರಿಂದ ಮತ್ತು ಉನ್ನತ ಅಧಿಕಾರಿಗಳಿಂದ ಉತ್ತಮ ಬಾಂಧವ್ಯ ಹೆಚ್ಚಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಜೆ.ಕೃಷ್ಣ ಹೇಳಿದರು.
ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಪಟದಲ್ಲಿ ಪೊಲೀಸ್ ಇಲಾಖೆಯಿಂದ ನಡೆದ ವರ್ಗಾವಣೆಗೊಂಡ ಡಿವೈಎಸ್‌ಪಿ ಪುಟ್ಟಮಾದಯ್ಯ ಅವರಿಗೆ ಬೀಳ್ಕೊಡುಗೆ, ತೆರವಾದ ಸ್ಥಾನಕ್ಕೆ ಅಧಿಕಾರ ಸ್ವೀಕರಿಸಿದ ಡಿವೈಎಸ್‌ಪಿ ನವೀನ್‌ಕುಮಾರ್ ಅವರಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಅಧಿಕಾರಿಗಳಲ್ಲಿ ಉತ್ತಮ ರೀತಿಯ ಬಾಂಧವ್ಯ, ಕಳಕಳಿ ಇದ್ದಾಗ ಮಾತ್ರ ಸಾರ್ವಜನಿಕರ ಮನ್ನಣೆ ಸಿಗಲಿದೆ. ಆದ್ದರಿಂದ ಕಾನೂನು ರೀತಿ ಪ್ರತಿಯೊಬ್ಬರು ಕರ್ತವ್ಯ ನಿರ್ವಹಿಸುವುದರಿಂದ ಸರ್ಕಾರಿ ಸೇವೆ ಸಾರ್ಥಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ತವ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ: ಉಪ ವಿಭಾಗದ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದ ಡಿವೈಎಸ್‌ಪಿ ಪುಟ್ಟಮಾದಯ್ಯ ಮಾತನಾಡಿ, ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ವಿಷ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿ, ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಪರಿಹಾರ ದೊರೆಯುವಂತಾಯಿತು. ಇದು ಇಲಾಖೆಯ ವತಿಯಿಂದ ಮಾಡಿದ ಕರ್ತವ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ಮತ್ತು ಕೆಲಸ ನಿರ್ವಹಿಸುವ ಠಾಣೆಗೆ ಕೀರ್ತಿ ತಂದುಕೊಡುವ ವಿಶ್ವಾಸ ವ್ಯಕ್ತಪಡಿಸಿದರು.
ಸಹಕಾರ ನೀಡಲು ಮನವಿ: ಸ್ವಾಗತವನ್ನು ಸ್ವೀಕಾರ ಮಾಡಿದ ಡಿವೈಎಸ್‌ಪಿ ನವೀನ್‌ಕುಮಾರ್ ಮಾತನಾಡಿ, ವರ್ಗಾವಣೆಗೊಂಡ ಡಿವೈಎಸ್‌ಪಿ ಪುಟ್ಟಮಾದಯ್ಯ ಅವರಿಗೆ ನೀಡಿದ ಸಹಕಾರವನ್ನು ಉಪ ವಿಭಾಗದ ಎಲ್ಲಾ ಠಾಣೆಯ ಅಧಿಕಾರಿಗಳು ನೀಡಬೇಕು ಎಂದು ಮನವಿ ಮಾಡಿದರು.
ಸುಳ್ವಾಡಿ ಗ್ರಾಮಸ್ಥರ ಅಳಲು: ವರ್ಗಾವಣೆಗೊಂಡ ಡಿವೈಎಸ್‌ಪಿ ಪುಟ್ಟಮಾದಯ್ಯ ಅವರ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿದ ಸುಳ್ವಾಡಿ ಗ್ರಾಮಸ್ಥರು ಅವರನ್ನು ಸನ್ಮಾನಿಸಿದ ಬಳಿಕ ಕಿಚ್ಚುಗುತ್ತಿ ವಿಷ ಪ್ರಸಾದ ಸೇವನೆ ಮಾಡಿ, ಹಲವು ಜನರು ಮೃತಪಟ್ಟು ಉಳಿದವರು ಸಾವಿನಿಂದ ಬದುಕಿದ್ದು, ಪ್ರಕರಣವನ್ನು ಡಿವೈಎಸ್‌ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟರೆಂದು ಬಣ್ಣಿಸಿ, ಗ್ರಾಮದಿಂದ ಆಗಮಿಸಿದ್ದ ಗ್ರಾಮಸ್ಥರು ದುಃಖಿತ್ತರಾದರು.
ಕಾರ್ಯಕ್ರಮದಲ್ಲಿ ಅಪರ ಸವಿಲ್ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಕಠಾರಿ, ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಶ್ರೀಕಾಂತ್, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಮೋಹಿತ್ ಸಹದೇವ್, ಎಸ್‌ಐಗಳಾದ ರಾಜೇಂದ್ರ, ಅಶೋಕ್, ವೀರಭದ್ರಪ್ಪ ಮತ್ತು ಉಪ ವಿಭಾಗದ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.