Advertisement

ಕಲಂ 370 ರದ್ದು- ನಮ್ಮ ಓದುಗರು ಏನು ಹೇಳುತ್ತಾರೆ

03:41 PM Aug 29, 2019 | keerthan |

ಮಣಿಪಾಲ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ, 35ಎ ವಿಧಿಯನ್ನು ರದ್ದು ಮಾಡಿದ ಕೇಂದ್ರ ಸರಕಾರದ ಐತಿಹಾಸಿಕ ನಿರ್ಣಯಕ್ಕೆ ಅಭೂತಪೂರ್ವ ಜನ ಬೆಂಬಲ ದೊರೆತಿದೆ. “ಉದಯವಾಣಿ”  ಫೇಸ್‌ ಬುಕ್‌ ಖಾತೆಯಲ್ಲಿ ಈ ಬಗ್ಗೆ ಜನರಿಂದ ಅಭಿಪ್ರಾಯ ಕೇಳಿ ಪೋಸ್ಟ್‌ ಹಾಕಿದ್ದು , ನಮ್ಮ ಓದುಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ.

Advertisement

ನಾನು 11 ವರ್ಷ ಕಾಶ್ಮೀರದಲ್ಲಿ ಕರ್ತವ್ಯ ಮಾಡಿದ್ದೆ. ಅದರ ಅನುಭವದಲ್ಲಿ ಈ ನಿರ್ಣಯ ಸ್ವಾಗತಾರ್ಹ. ಇದರಿಂದಾಗಿ ಕಾಶ್ಮೀರಿ ಯುವಕರಿಗೆ ಉದ್ಯೋಗ ಸೃಷ್ಠಿಯಾಗಬಹುದು. ಶಾಂತಿಯುತ ವಾತಾವರಣಕ್ಕಾಗಿ ಕಾಶ್ಮೀರದ ಮತ್ತು ದೇಶದ ಜನತೆ ಸರಕಾರದ ಜೊತೆ ನಿಲ್ಲಬೇಕಿದೆ.

*ರಾಜೇಶ್‌ ಎಸ್‌ ಗೌಡ ತೀರ್ಥಹಳ್ಳಿ 

ನಾನು ಅತ್ಯಂತ ದ್ವೇಷಿಸುವ ಬಿಜೆಪಿ ಪಕ್ಷವನ್ನು ಈ ವಿಚಾರದಲ್ಲಿ ಇಷ್ಟಪಡುತ್ತೇನೆ. ಭಾರತದ ಅಖಂಡತೆಗೆ ಯಾರೇ ಶ್ರಮಿಸಿದರೂ ಈ ದೇಶ ಅವರಿಗೆ ಋಣಿಯಾಗಿರುತ್ತದೆ.

*ಕೊಟ್ರೇಶ್‌ ಕೃಷ್ಣಪ್ರಿಯ 

Advertisement

ಜಮ್ಮು ಮತ್ತು ಕಾಶ್ಮೀರದ ಹೆಸರನ್ನು ಬದಲಾಯಿಸಿ ಪುರಾತನ ಹೆಸರನ್ನು ಇಡಬೇಕು.  ಪಂಡಿತರನ್ನು ಕಾಶ್ಮೀರಕ್ಕೆ ಕರೆತಂದು ಅವರ ಆಸ್ತಿಯನ್ನು ವಾಪಸ್ಸು ಕೊಡಿಸಿ. ನೆಮ್ಮದಿಯ ಜೀವನಕ್ಕೆ ಅವಕಾಶ ಕಲ್ಪಿಸಿಕೊಡಿ.

*ವಿಶ್ವೇಶ್ವರಯ್ಯ ಹೊಯ್ಸಳ

ಭಾರತದಲ್ಲೀಗ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಕಾನೂನು. ಇದುವರೆಗೆ ಜಮ್ಮು ಕಾಶ್ಮೀರದಲ್ಲಿ ಮಾಹಿತಿ ಹಕ್ಕು ಕಾಯಿದೆಯೂ ಅನ್ವಯವಾಗುತ್ತಿರಲಿಲ್ಲ. ಅಂದರೆ ಅಲ್ಲಿನ ವ್ಯವಸ್ಥೆ ಪ್ರಶ್ನಾತೀತವಾಗಿತ್ತು. ಈಗ ವಿಶೇಷ ಸ್ಥಾನ ತೆಗೆದುಹಾಕಿರುವ ಕಾರಣ ಭಾರತದ ಎಲ್ಲ ರಾಜ್ಯಗಳು ಸರ್ವ ಸಮಾನರು ಎಂಬಂತಾಗಿದೆ.

*ಲಕ್ಷ್ಮೀಕಾಂತ್ರಾಜ್ ಎಂ ಜಿ 

ಕೇಂದ್ರ ಸರಕಾರದ ನಿರ್ಣಯಕ್ಕೆ ವಿರೋಧ , ನೋಟು ಅಪನಗದೀಕರಣ ಮಾಡಿದ ಸಮಯದಲ್ಲಿ ಕೂಡಾ ಮೊದಲಿಗೆ ಉತ್ತಮ ಎಂದೇ ಹೇಳಲಾಗಿತ್ತು. ಆದರೆ ಕೊನೆಗಾಗಿದ್ದು ಅದರ ವೈಫಲ್ಯ. ಈ ವಿಚಾರದಲ್ಲೂ ಅದೇ ಮರುಕಳಿಸುತ್ತದೆ.

*ಸುನೀಲ್ ಶೆಟ್ಟಿ

ಜಮ್ಮು-ಕಾಶ್ಮೀರದ ಸ್ಥಳೀಯ ಜನರ ಸಹಕಾರದೊಂದಿಗೆ ಆರ್ಟಿಕಲ್ 370, 35 A ರದ್ದಾದರೆ ಕಾಶ್ಮೀರ ಸಮಸ್ಯೆ ಹಿಂಸಾತ್ಮಕ ರೂಪ ಪಡೆಯದೆ ಖಂಡಿತ ಪರಿಹಾರವಾಗುತ್ತದೆ .

*ರಾಜಶೇಖರ್‌ ಮೈಲಸಂದ್ರ 

ಪಕ್ಷಾತೀತವಾಗಿ ನಾವು ಇದನ್ನು ಗೌರವಿಸುತ್ತೇವೆ. ಒಳ್ಳೆಯ ಹೆಜ್ಜೆ, ಕಾನೂನು ಅತಿರೇಕಕ್ಕೆ ಹೋಗಿ ಮಾನವ ಹಕ್ಕು ಉಲ್ಲಂಘನೆಯಾಗದಿರಲಿ. ನಮ್ಮದು ಅಖಂಡ ಭಾರತ. ಆದರೆ ನಮ್ಮನ್ನಾಳಿದ ಹಳೆಯ ನಾಯಕರನ್ನು ದೂರುವುದು ಬೇಡ. ಎಲ್ಲ ನಾಯಕರ ಕೊಡುಗೆ ಈ ದೇಶಕ್ಕೆ ಇದೆ. ಆದರೆ ನಿರ್ಧಾರದ ಸಮಯ ಸನ್ನಿವೇಶ ಬೇರೆ ಇತ್ತು ಅಷ್ಟೆ .

*ರೇಣುಕಾ ಪ್ರಸಾದ್‌ 

ಭಯೋತ್ಪಾದನೆ ಕೃತ್ಯಗಳನ್ನು ಮಾಡುವವರದ್ದು ಧಾರ್ಮಿಕ ಮನೋಭಾವ ಅಲ್ಲ.ಅದೊಂದು ವಿಕೃತ ಮನೋಭಾವ. 370ನೇ ವಿಧಿಯನ್ನು ರದ್ದುಪಡಿಸಿದ ಕಾರಣ ಜಮ್ಮು-ಕಾಶ್ಮೀರದಲ್ಲಿ ಈ  ಘಟನೆಗಳು ಕೊನೆಗೊಳ್ಳುವುದಾದರೆ ಈ ವಿಧಿ ಸ್ವಾಗತಾರ್ಹ. ಆದರೆ ಇದರಲ್ಲಿ ರಾಜಕೀಯ ದ್ವೇಷ ಖಂಡಿತ ಇರಬಾರದು. ದೇಶದ ಜನರ ಬದುಕಿನೊಂದಿಗೆ ಚೆಲ್ಲಾಟ ಸಲ್ಲದು.

*ಅಬ್ದುಲ್‌ ಅಜೀಜ್‌ ಪುಣಚ 

ನಾವು ನರೇಂದ್ರ ಮೋದಿಯವರಿಗೆ ಮತ ಹಾಕಿದ್ದಕ್ಕೆ ಇಂದು ಸಾರ್ಥಕವಾಯಿತು. ಭಯೋತ್ಪಾದನೆ ಮತ್ತು 370 ವಿಧಿ ಬೇರೆ ಬೇರೆ ವಿಷಯಗಳು. ಹಿಂದೆ ನೆಹರು 370ನೇ ವಿಧಿಯಲ್ಲಿ ಮಾಡಿದ್ದ ತಪ್ಪನ್ನು ಈಗ ಕೇಂದ್ರ ಸರಕಾರ ಸರಿಪಡಿಸಿದೆಯಷ್ಟೇ.

*ಜಗದೀಶ್‌ ನಾಯಕ್‌ 

ಕಾಶ್ಮೀರಕ್ಕಾಗಿ ಬಲಿದಾನ ಮಾಡಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ದೊರೆತಂತಾಯಿತು. 370ವಿಧಿಯನ್ನು ವಿರೋಧಿಸಿದ ಅಂಬೇಡ್ಕರ್ ಆಸೆಯೂ ಈಡೇರಿಸಿದಂತಾಯಿತು. ಭಾರತದ ಸ್ವಿಟ್ಜರ್ಲೆಂಡ್‌‌ ಕಾಶ್ಮೀರ ಅಭಿವೃದ್ಧಿಗೆ ಇದು ಪೂರಕ. ಸ್ವಾಮಿ ಅರವಿಂದರ ಅಖಂಡ ಭಾರತದ ಸಂಕಲ್ಪ ಆದಷ್ಟು ಶೀಘ್ರ ಈಡೇರಲಿ.

*ಉದಯರಾಜ್‌ ಮೂಲ್ಕಿ   

ಎಷ್ಟೇ ರಾಜಕೀಯ ವಿರೋಧವಿದ್ದರೂ ಇಂಥಹ ಐತಿಹಾಸಿಕ ಕ್ಷಣಗಳಿಗೆ ಸರಕಾರದ ಜೊತೆ ನಿಲ್ಲುವುದೇ ನಿಜವಾದ ಪ್ರಜಾಪ್ರಭುತ್ವ. ಪೂರ್ಣ ಬಹುಮತದ ಸರಕಾರವನ್ನು ನೀಡಿದ ಪರಿಣಾಮ ಇಂಥಹ ದಿಟ್ಟ ನಿರ್ಧಾರಕ್ಕೆ ಸಾಧ್ಯವಾಯಿತು.

*ಸಂದೀಪ್‌ ವನಿಯಾನ್‌

ದೇಶ ಸುಭದ್ರವಾಗಿರಬೇಕು ಅಂದರೆ ದೃಢ ನಿರ್ಧಾರ ತೆಗದುಕೊಳ್ಳಬೇಕಾಗುತ್ತದೆ. ದೇಶದಲ್ಲಿ ಬದಲಾವಣೆ ಸಮಯ ಬರುತ್ತಿದೆ .

*ವಿಶ್ವನಾಥ್‌ ವಿಶ್ವ

ಕೇವಲ 3 ಜಿಲ್ಲೆಯಲ್ಲಿ ನಡೆಯುತ್ತಿದ್ದ ಪಾಕ್ ಪ್ರೇರಿತ ಕೃತ್ಯಗಳಿಗೆ ಇಡೀ ಜಮ್ಮು ಕಾಶ್ಮೀರದ ಜನರನ್ನು ಭಾರತದ ಅಖಂಡತೆಯ ವಿರೋಧಿಯಾಗಿ ಕಾಣಲಾಗುತ್ತಿತ್ತು. ಈಗ ಇದರಿಂದ ಮುಕ್ತಿ ಪಡೆಯಬಹುದು.

*ದಿನೇಶ್‌ ಮುರುವ 

ಯಾವುದೇ ಧರ್ಮ, ಪಕ್ಷಕ್ಕೇ ಸೇರಿರಲಿ ದೇಶದ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಎಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿ. ಬೇಕಾದರೆ ಸೂಕ್ತ ಸಲಹೆಗಳನ್ನು ಕೊಡಿ .

*ಲಕ್ಷ್ಮೀರಂಗನಾಥ ತನುಲಕ್ಷ್ಮೀರಂಗನಾಥ 

Advertisement

Udayavani is now on Telegram. Click here to join our channel and stay updated with the latest news.

Next