Advertisement

ಕಾನ-ಬಾಳ ರಸ್ತೆ ಅವ್ಯವಸ್ಥೆ ವಿರೋಧಿಸಿ ಪ್ರತಿಭಟನೆ

03:30 AM Dec 21, 2018 | Karthik A |

ಸುರತ್ಕಲ್‌: ಇಲ್ಲಿಯ ಕಾನ ಬಾಳ ರಸ್ತೆ ದುರವಸ್ಥೆ ಖಂಡಿಸಿ, ಚತುಷ್ಪಥ ರಸ್ತೆ ಕಾಮಗಾರಿ ಟೆಂಡರು ರದ್ದುಪಡಿಸಿ ದುರಸ್ಥಿ ಕೆಲಸಕ್ಕೆ ಕೋಟ್ಯಾಂತರ ಹಣವನ್ನು ಪೋಲು ಮಾಡುತ್ತಿರುವ ಸರಕಾರದ ನೀತಿಯನ್ನು ವಿರೋಧಿ ಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಬಿಎಎಸ್‌ಎಎಫ್‌ ಬಳಿಯಿಂದ ಕಾನ ಜಂಕ್ಷನ್‌ವರೆಗೆ ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದ‌ರ್ಭ ಹೋರಾಟ ಸಮಿತಿ ಸಂಚಾಲಕ ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮಿ¤ಯಾಜ್‌ ಮಾತನಾಡಿ, ಈ ರಸ್ತೆಯ ಅಭಿವೃದ್ಧಿಗಾಗಿ ಒತ್ತಾಯಿಸಿ ಎರಡು ವರ್ಷಗಳಲ್ಲಿ ದಾಖಲೆಯ ಹೋರಾಟಗಳು ನಡೆದಿವೆ. ಜನರ ನಿರಂತರ ಪ್ರತಿಫಲವಾಗಿ 58 ಕೋಟಿ ರೂ.ಗಳ ಚತುಷ್ಪಥ ರಸ್ತೆಗಾಗಿ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್‌ ಪ್ರಕ್ರಿಯೆ ಮುಗಿಸಿ ಶಿಲಾನ್ಯಾಸ ಕಾರ್ಯಕ್ರಮವನ್ನು ಕಳೆದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ನಡೆಸಿತ್ತು.

Advertisement

ಶಾಶ್ವತ ಕಾಮಗಾರಿ ನಡೆಸಿ
ಇದೀಗ 1.20 ಕೋಟಿ ರೂಪಾಯಿಗಳನ್ನು ದುರಸ್ಥಿ ಕೆಲಸಕ್ಕೆ ನಗರಪಾಲಿಕೆ ಮುಂದಾಗಿ ಜನರ ತೆರಿಗೆಯ ಹಣವನ್ನು ವ್ಯರ್ಥ ಮಾಡುತ್ತಿದೆ. ಇಲ್ಲಿನ ಬೃಹತ್‌ ಕೈಗಾರಿಕೆಗಳಿ ಬರುವ ಬೃಹತ್‌ ಲಾರಿಗಳಿಂದಾಗಿ ದುರಸ್ತಿ ಮಾಡಿದ ರಸ್ತೆಗಳೂ ಉಳಿಯಲಾರವು. ಹಾಗಾಗಿ ದುರಸ್ಥಿ ಕೆಲಸ ಮಾಡಲು ಪಾಲಿಕೆ ಮುಂದಾದರೆ ತಡೆಯುವಂತಹ ತೀವ್ರತರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ ಶಾಶ್ವತ ರಸ್ತೆ ಕಾಮಗಾರಿಯನ್ನು ತತ್‌ಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿಯ ಸಹ ಸಂಚಾಲಕ ಮಾಜಿ ಸೈನಿಕ ನವೀನ್‌ ಪೂಜಾರಿ, ಶ್ರೀನಾಥ್‌ ಕುಲಾಲ್‌ ಮಾತನಾಡಿದರು. ಪ್ರತಿಭಟನೆಯಲ್ಲಿ ಜೋಕಟ್ಟೆ ಗ್ರಾ.ಪಂ. ಸದಸ್ಯ ಅಹೂಬಕ್ಕರ್‌ ಬಾವ, ಸ್ಥಳೀಯ ಮುಖಂಡರಾದ ಕರುಣಾಕರ ಶೆಟ್ಟಿ, ಹಮೀದ್‌ ಕಟ್ಲ, ಫ್ರಾನ್ಸಿಸ್‌ ಕಾನ, ರೆಮ್ಮಿ ಡಿ’ಸೋಜಾ, ಜೋಯ್‌ ಡಿ’ಸೋಜಾ ಕಾನ, ಅಜ್ಮಲ್‌ ಕಾನ, ಬಿ.ಕೆ. ಮಕ್ಸೂದ್‌, ಐ. ಮೊಹಮ್ಮದ್‌, ಮುಸ್ತಫಾ ಅಂಗರಗುಂಡಿ, ಹಂಝ ಮೈಂದಗುರಿ, ರಹೀಮ್‌ ಕಾನ, ಮೆಹಬೂಬ್‌ ಖಾನ್‌, ಗಿರೀಶ್‌ ಜನಕಾಕಾಲನಿ,ಬಾಬು ಮೈಂದಗುರಿ, ಇಬ್ರಾಹಿಂ ಎಂ.ಎಚ್‌., ಅಜರ್‌ ಕಾನ, ಫಾರುಕ್‌ ಜನತಾಕಾಲನಿ ಮತ್ತಿತರರು ಉಪಸ್ಥಿತರಿದ್ದರು.

‘ಕಾನ- ಬಾಳ ರಸ್ತೆ ಕಾಮಗಾರಿ ಯೋಜನೆ ಮರುಪರಿಶೀಲನೆಯಲ್ಲಿದೆ’
ಇಲ್ಲಿಯ ಕಾನ-ಬಾಳ ರಸ್ತೆಯನ್ನು 58 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಹಣವೇ ಮೀಸಲಿಲ್ಲ. ಬದಲಾಗಿ ಗುತ್ತಿಗೆದಾರನಿಗೆ ಇತರ ನಿಧಿಯಿಂದ ಹಣವೊದಗಿಸುವ ಭರವಸೆ ನೀಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಈ ಯೋಜನೆಯೇ ಮರುಪರಿಶೀಲನೆಯಲ್ಲಿದೆ ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ಹೇಳಿದ್ದಾರೆ. ಹಿಂದಿನ ಟೆಂಡರ್‌ ಸಂದರ್ಭ ಗುತ್ತಿಗೆದಾರ ಶೇ. 21ರಷ್ಟು ಹೆಚ್ಚುವರಿ ಹಣವನ್ನು ಕೇಳಿದ ಕಾರಣಕ್ಕಾಗಿ ಸರಕಾರ ಮತ್ತು ಗುತ್ತಿಗೆದಾರನ ನಡುವಿನ ಮಾತುಕತೆ ಮುರಿದುಬಿದ್ದಿದೆ. ಹೀಗಾಗಿ ನಾನು ಮರುಟೆಂಡರ್‌ ಪ್ರಕ್ರಿಯೆ ಚುರುಕುಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದೇನೆ. ಇದೀಗ ಮರುಟೆಂಡರ್‌ ಡಿಸೆಂಬರ್‌ ಅಂತ್ಯಕ್ಕೆ ತೆರೆದು ಕಾಮಗಾರಿ ನಡೆಸಲು ಸರಕಾರ ಪ್ರಕ್ರಿಯೆ ನಡೆಸಲಿದೆ.

ಪಾಲಿಕೆ ರಸ್ತೆಯಾಗಿರುವುದರಿಂದ ಈ ಕಾಮಗಾರಿಗೆ ತಡೆ ಬರುವ ಸಾಧ್ಯತೆ ಇಲ್ಲದಿಲ್ಲ. ಹೀಗಾಗಿ ಕಾನಾ ಬಾಳ ರಸ್ತೆಯನ್ನು ತತ್‌ಕ್ಷಣ ಜನಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡುವುದು ನನ್ನ ಗುರಿಯಾಗಿದೆ. ಪಾಲಿಕೆ ಮೂಲಕ ಕಾಮಗಾರಿ ನಡೆಸಲಾಗುತ್ತೆದೆಯೆ ಹೊರತು ಪಾಲಿಕೆ ಅನುದಾನ ಬಳಸಲಾಗುತ್ತಿಲ್ಲ. ಶಾಶ್ವತ ರಸ್ತೆ ಕಾಮಗಾರಿ ನಡೆಸಬೇಕು ಎಂಬುದಕ್ಕೆ ನನ್ನ ಸಹಮತ ಇದೆ ಎಂದರು.

Advertisement

ಇದರ ನಡುವೆ ರಾಜ್ಯದ ಹಣಕಾಸು ಇಲಾಖೆ ಈ ರಸ್ತೆ ಸಹಿತ ವಿವಿಧ ಕಾಮಗಾರಿಗಳ ಯೋಜನೆಯನ್ನು ಪರಿಶೀಲಿಸುತ್ತಿದ್ದು , ಇದು ವಿಳಂಬವಾಗುವ ಸಾಧ್ಯತೆಯನ್ನು ಪರಿಗಣಿಸಿ ಎಂಆರ್‌ಪಿಎಲ್‌ ಸಹಿತ ಸ್ಥಳೀಯ ಕಂಪೆನಿಗಳ ಜತೆ ಮಾತುಕತೆ ನಡೆಸಿ ಅನುದಾನ ಪಡೆದು ತಾತ್ಕಾಲಿಕ ದುರಸ್ತಿಗೆ ನಿರ್ಧರಿಸಲಾಗಿದೆ. ಲೋಕೋಪಯೋಗಿ ಇಲಾಖೆಯೂ ಇದೇ ಸಲಹೆಯನ್ನು ನೀಡಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next