ಕುಣಿಗಲ್ : ಅಪಘಾತದಲ್ಲಿ ಗಾಯಗೊಂಡ ಯುವಕನಿಗೆ ಸೂಕ್ತ ಚಿಕಿತ್ಸೆ ಕೊಡದ ಕಾರಣ ಗಾಯಾಳು ಮೃತಪಟ್ಟಿದ್ದಾನೆ, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ನಾಗರೀಕರು ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ಭಾನುವಾರ ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಬಾಗ ನೂರಾರು ಸಂಖ್ಯೆಯಲ್ಲಿ ಸೇರಿದ ನಾಗರೀಕರು ಅಪಘಾತದಲ್ಲಿ ಗಾಯಗೊಂಡ ಪಟ್ಟಣದ ಕೆಆರ್ ಎಸ್ ಅಗ್ರಹಾರದ ಜಬಿಉಲ್ಲಾನಿಗೆ ವೈದ್ಯರು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡದ ಕಾರಣ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿದರು.
ಇದನ್ನೂ ಓದಿ: ಜಗ್ಗೇಶ್ ನಟನೆಯ ಬಹುನಿರೀಕ್ಷಿತ ಚಿತ್ರ ‘ತೋತಾಪುರಿ’ ಸೆ.30ಕ್ಕೆ ಬಿಡುಗಡೆ
ಶನಿವಾರ ರಾತ್ರಿ ತಾಲೂಕಿನ ಹುಲಿಯೂರುದುರ್ಗ ಹೋಬಳಿ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆಯ ಬಿಸೇಗೌಡನದೊಡ್ಡಿ ಗ್ರಾಮದ ಬಳಿ ಸಂಭವಿಸಿದ ಲಾರಿ -ಬೈಕ್ ನಡುವೆ ಢಿಕ್ಕಿಯಿಂದಾಗಿ ಬೈಕ್ ಸವಾರ ಜಬಿಉಲ್ಲಾ ತೀವ್ರವಾಗಿ ಗಾಯಗೊಂಡು, ಇಲ್ಲಿನ ಸರ್ಕಾರಿ ಆಸ್ಪತ್ರೆ ಗೆ ಗಾಯಾಳನ್ನು ತಂದಾಗ ವೈದ್ಯರು ಸೂಕ್ತ ಚಿಕಿತ್ಸೆ ನೀಡದೇ, ಕಾಟಾಚಾರಕ್ಕೆ ಬ್ಯಾಡೇಜ್ ಸುತ್ತಿ ಇಂಜೆಕ್ಷನ್ ಕೊಟ್ಟು ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿ ಕೈ ತೊಳೆದುಕೊಂಡರು. ಆದರೆ ಅಂಬ್ಯುಲೆನ್ಸ್ ನರ್ಸ್, ವೆಂಟಿಲೇಟರ್ ಇರದ ಕಾರಣ ಗಾಯಾಳು ಮೃತಪಟ್ಟಿದ್ದಾನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ,ಕರ್ತವ್ಯ ಲೋಪ ಎಸಗಿರುವ ವೈದ್ಯರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕುಣಿಗಲ್ ಹಾಗೂ ಅಮೃತೂರು ವೃತ್ತ ನಿರೀಕ್ಷಕರಾದ ಗುರುಪ್ರಸಾದ್, ಅರುಣ್ ಸಾಲಂಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದರು. ಪ್ರತಿಭಟನೆಯಲ್ಲಿ ಗಿರೀಶ್, ವೆಂಕಟೇಶ್, ಮತ್ತಿತರರು ಇದ್ದರು.