ತೆಹ್ರಾನ್: ವ್ಯಭಿಚಾರದ ನಡೆಸಿದ್ದಾಳೆಂದು ಆರೋಪಿಸಿ ಪತ್ನಿಯ ತಲೆಯನ್ನು ಕತ್ತರಿಸಿ, ತಲೆಯನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಬರುತ್ತಿದ್ದ ಪತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಯಿಂದ ಇರಾನ್ ನಿವಾಸಿಗಳು ಬೆಚ್ಚಿಬಿದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಕ್ತ ಪಾತಕ್ಕೆ ಅವಕಾಶ ಕೊಡಬಾರದು: ಎಚ್.ಡಿ.ಕುಮಾರಸ್ವಾಮಿ ಕಳವಳ
ನೈರುತ್ಯ ನಗರವಾದ ಅಹ್ವಾಜ್ ನ ನಿವಾಸಿ ಮೋನಾ ಹೈದರಿ ಎಂಬಾಕೆಯನ್ನು ಪತಿ ಹಾಗೂ ಸೋದರ ಮಾವ ಜತೆ ಸೇರಿ ಹತ್ಯೆಗೈದಿರುವುದಾಗಿ ಇರಾನ್ ನ ಐಎಸ್ ಎನ್ ಎ ಏಜೆನ್ಸಿ ವರದಿ ಮಾಡಿದೆ.
ಸೋಮವಾರ ಅಡಗುತಾಣದ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಹೇಳಿದೆ. ಘಟನೆಯ ನಂತರ ಇಂತಹ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಇರಾನ್ ನ ಮಹಿಳಾ ವ್ಯವಹಾರಗಳ ಖಾತೆಯ ಉಪಾಧ್ಯಕ್ಷೆ ಎನ್ಸೀಹ್ ಖಾಝಾಲಿ ಅವರು ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬಗ್ಗೆ ಇರಾನ್ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಮತ್ತು ಕಾನೂನು ಬದಲಾವಣೆಗೆ ಒತ್ತಾಯಿಸಿರುವುದಾಗಿ ವರದಿ ಹೇಳಿದೆ.
ಹೈದರಿ ಕೊಲೆ ಪ್ರಕರಣದ ನಂತರ, ಕೌಟುಂಬಿಕ ಹಿಂಸಾಚಾರ ವಿರುದ್ಧ ಮಹಿಳೆಯರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ತರಬೇಕು ಮತ್ತು ವಿವಾಹಕ್ಕೆ ಕಾನೂನುಬದ್ಧವಾದ ವಯೋಮಿತಿ ಜಾರಿಗೆ ತರಬೇಕು ಎಂದು ಇರಾನ್ ನಾಗರಿಕರು ಆಗ್ರಹಿಸಿದ್ದಾರೆ. ಪ್ರಸ್ತುತ ಇರಾನ್ ನಲ್ಲಿ ವಿವಾಹದ ವಯೋಮಿತಿ 13 ವರ್ಷ ಎಂದು ನಿಗದಿಪಡಿಸಲಾಗಿದೆ.
ಇರಾನ್ ನ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಹೈದರಿ ವಿವಾಹವಾಗುವ ಸಂದರ್ಭದಲ್ಲಿ ಆಕೆಯ ವಯಸ್ಸು 12 ವರ್ಷ, ಕೊಲೆಯಾದ ಸಂದರ್ಭದಲ್ಲಿ ಆಕೆಗೆ (17ವರ್ಷ) ಮೂರು ವರ್ಷದ ಮಗನಿರುವುದಾಗಿ ತಿಳಿಸಿದೆ.