ಗುಜರಾತ್: ಮೋರ್ಬಿ ತೂಗು ಸೇತುವೆ ದುರಂತ ಸಂಭವಿಸಿದ ಸಂದರ್ಭದಲ್ಲಿ ನದಿಗೆ ಹಾರಿ ಜನರನ್ನು ರಕ್ಷಿಸಿದ ಘಟನೆಯನ್ನು ನೆನಪಿಸಿಕೊಂಡ ಮೋರ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ತಾನು ಆರ್ ಎಸ್ ಎಸ್ ಕಾರ್ಯಕರ್ತನಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾರ್ಯನಿರ್ವಹಿಸಿದ ದಿನಗಳನ್ನು ಮೆಲುಕು ಹಾಕಿದರು.
ಇದನ್ನೂ ಓದಿ:‘ಆ ಗಂಡು ಸಚಿವರಿಗೆ ಚಿಲುಮೆ ಜತೆಗಿರುವ ನಂಟೇನು?: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಈ ಬಾರಿಯ ಚುನಾವಣೆಯಲ್ಲಿ ಪಾಟಿದಾರ್ ಪ್ರಾಬಲ್ಯದ ಎಲ್ಲಾ ಐದು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಎನ್ ಐ ಜತೆ ಮಾತನಾಡಿದ ಅಮೃತಿಯಾ, ಮೋರ್ಬಿ ಸೇತುವೆ ದುರಂತ ತುಂಬಾ ನೋವಿನ ವಿಚಾರವಾಗಿದೆ. ಈ ಘಟನೆಯ ಪ್ರಕರಣ ಈಗ ಕೋರ್ಟ್ ನಲ್ಲಿದೆ ಎಂದರು.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಮುಳುಗುತಜ್ಞರನ್ನು ಕಳುಹಿಸಲಾಗಿತ್ತು. ನಮ್ಮ ಪ್ರಧಾನಿ ಮತ್ತು ಮುಖ್ಯಮಂತ್ರಿ ಸಮಿತಿಯನ್ನು ರಚಿಸಿದ್ದು, ಪ್ರಕರಣ ಕೋರ್ಟ್ ನಲ್ಲಿದ್ದು, ಶೀಘ್ರದಲ್ಲಿಯೇ ತೀರ್ಪು ಬರುವ ನಿರೀಕ್ಷೆ ಇದೆ ಎಂದು ಅಮೃತಿಯಾ ಹೇಳಿದರು.
ಸೇತುವೆ ದುರಂತದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೋರ್ಬಿಯಲ್ಲಿ ಐದು ಸ್ಥಾನಗಳಿದ್ದು, ನಾವು ಎಲ್ಲಾ ಐದು ಸ್ಥಾನಗಳಲ್ಲಿ ಜಯಗಳಿಸುತ್ತೇವೆ. ಯಾಕೆಂದರೆ ಈ ಘಟನೆಗೆ ಸರ್ಕಾರ ಹೊಣೆಯಲ್ಲ ಎಂಬುದು ಸಾರ್ವಜನಿಕರಿಗೆ ತಿಳಿದಿದೆ ಎಂದು ಸಮಜಾಯಿಷಿ ನೀಡಿದರು.
ನನಗೆ ಪೂರ್ಣ ವಿಶ್ವಾಸವಿದೆ…ನಾವು ಜನರ ಏಳಿಗೆಗಾಗಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿದ್ದೇವೆ. ನಾನು ಕೇವಲ ಒಂದು ಸ್ಥಾನಕ್ಕಾಗಿ ಕಾರ್ಯನಿರ್ವಹಿಸುತ್ತಿಲ್ಲ, ಆದರೆ ಇಡೀ ಜಿಲ್ಲೆಯ ಐದು ಸ್ಥಾನಗಳ ಗೆಲುವಿಗೆ ಪ್ರಯತ್ನಿಸುತ್ತಿರುವುದಾಗಿ ಅಮೃತಿಯಾ ತಿಳಿಸಿದ್ದಾರೆ.