Advertisement

ನಗದು ವ್ಯವಹಾರದತ್ತ ಮತ್ತೆ ಹೆಚ್ಚಿದ ಜನರ ಒಲವು

01:09 AM Jun 07, 2021 | |

ಕೇಂದ್ರ ಸರಕಾರ ದೇಶದಲ್ಲಿ ಡಿಜಿಟಲ್‌ ವ್ಯವಹಾರವನ್ನು ವೃದ್ಧಿಸುವ ಮೂಲಕ ನಗದು ಚಲಾವಣೆಗೆ ಕಡಿವಾಣ ಹಾಕಲು ನಿರಂತರವಾಗಿ ಶ್ರಮಿಸುತ್ತಿದೆಯಾದರೂ ಜನರು ಮಾತ್ರ ಇನ್ನೂ ನಗದು ವ್ಯವಹಾರದ ಮೇಲೆಯೇ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈ ಹಿಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲ್‌ ವ್ಯವಹಾರದ ಪ್ರಮಾಣ ಗಮನಾರ್ಹ ಏರಿಕೆಯನ್ನು ಕಂಡಿದೆಯಾದರೂ ಒಟ್ಟಾರೆಯಾಗಿ ಈಗಲೂ ನಗದು ವ್ಯವಹಾರವೇ ಮುಂಚೂಣಿಯಲ್ಲಿದೆ. ಕೊರೊನಾದಿಂದಾಗಿ ಸತತ ಎರಡು ವರ್ಷಗಳಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌, ಕಠಿನ ನಿರ್ಬಂಧ ಮತ್ತಿತರ ಕ್ರಮಗಳನ್ನು ಜಾರಿಗೆ ತಂದಿರುವುದರಿಂದ ಜನರು ಮುಂಜಾಗ್ರತೆ ಕ್ರಮವಾಗಿ ತಮ್ಮ ಕೈಯಲ್ಲಿ ಒಂದಿಷ್ಟು ನಗದನ್ನು ಇರಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಇದೇ ವೇಳೆ ಖರ್ಚಿನ ಮೇಲೆ ಹಿಡಿತ ಸಾಧಿಸುವ ಮೂಲಕ ಭವಿಷ್ಯದ ದೃಷ್ಟಿಯಿಂದ ಮಿತವ್ಯಯಿಗಳಾಗುತ್ತಿದ್ದಾರೆ.

Advertisement

ಡಿಜಿಟಲ್‌ ವ್ಯವಹಾರದಲ್ಲಿ ಇಳಿಕೆ
2020-21ನೇ ಸಾಲಿನ ಕೊನೆಯ ತ್ತೈಮಾಸಿಕದ ಅಂತ್ಯಕ್ಕೆ ಡಿಜಿಟಲ್‌ ಪಾವತಿ ಪ್ರಮಾಣ ಹೆಚ್ಚಳ ಕಂಡಿತ್ತು. ನ್ಯಾಶನಲ್‌ ಪೇಮೆಂಟ್ಸ್‌ ಕಾರ್ಪೊರೇಶನ್‌ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ ಮಾರ್ಚ್‌ಗೆ ಹೋಲಿಸಿದಲ್ಲಿ ಎಪ್ರಿಲ್‌ ತಿಂಗಳಿನಲ್ಲಿ ಡಿಜಿಟಲ್‌ ಪಾವತಿಯ ಗಾತ್ರ ಮತ್ತು ಮೌಲ್ಯಗಳೆರಡರಲ್ಲೂ ಇಳಿಕೆ ದಾಖಲಾ ಗಿದೆ. ಮಾರ್ಚ್‌ನಲ್ಲಿ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಪೇಸ್‌ (ಯುಪಿಐ)ಮೂಲಕ ಗರಿಷ್ಠ 5.04ಲಕ್ಷ ಕೋ.ರೂ.ಗಳಷ್ಟು ವ್ಯವಹಾರ ನಡೆದಿದ್ದರೆ ಎಪ್ರಿಲ್‌ನಲ್ಲಿ ಇದು 4.93 ಲಕ್ಷ ಕೋ. ರೂ.ಗಳಿಗೆ ಇಳಿಕೆಯಾಗಿದೆ. ಒಟ್ಟಾರೆ ಯುಪಿಐ ವಹಿವಾಟಿನ ಪ್ರಮಾ ಣವೂ ಇಳಿಕೆ ಕಂಡಿದ್ದು ಮಾರ್ಚ್‌ನಲ್ಲಿ 273 ಕೋಟಿ ಇದ್ದ ವಹಿವಾಟು ಎಪ್ರಿಲ್‌ನಲ್ಲಿ 264 ಕೋಟಿಗೆ ಇಳಿದಿದೆ. ಅಂತೆಯೇ ಐಎಂಪಿಎಸ್‌ ಮಾರ್ಚ್‌ನಲ್ಲಿ 3.27ಲಕ್ಷ ಕೋ. ರೂ. ಮೌಲ್ಯದ 36.31 ಕೋಟಿ ವಹಿವಾಟು ನಡೆಸಿದ್ದರೆ ಎಪ್ರಿಲ್‌ನಲ್ಲಿ 2.29 ಲಕ್ಷ ಕೋಟಿ ರೂ. ಮೌಲ್ಯದ 32.99 ಕೋಟಿ ವಹಿವಾಟು ನಡೆಸಲಷ್ಟೇ ಶಕ್ತವಾಗಿದೆ.

ಶೇ. 14.2ರಷ್ಟು ಹೆಚ್ಚಳ
ಈ ವರ್ಷ ಎಪ್ರಿಲ್‌ 9ರಿಂದ ಚಲಾವಣೆಯಲ್ಲಿರುವ ನಗದಿನ ಪ್ರಮಾಣ ಏರಿಕೆಯಾಗುತ್ತಿದ್ದು ಮೇ 14ರ ವರೆಗೆ ಇದು ದಾಖಲೆಯ 29,57,854 ಕೋ. ರೂ. ಗಳಿಗೆ ಏರಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಅಂಕಿ ಅಂಶಗಳು ತಿಳಿಸಿವೆ.
ಮೇ 7ರಿಂದೀಚೆಗೆ ನಗದು ಚಲಾವಣೆಯು ಪ್ರತೀ ವಾರ 17,856 ಕೋ. ರೂ. ಮತ್ತು ಈ ಹಣಕಾಸು ವರ್ಷದಲ್ಲಿ ಈವರೆಗೆ 99,214 ಕೋಟಿ ರೂ. ಜಿಗಿತ ಕಂಡಿದೆ. ಮಾರ್ಚ್‌ 19ರಂದು ಚಲಾವಣೆಯಲ್ಲಿದ್ದ ನಗದು 28,49,641 ಕೋ. ರೂ.ಗಳಾಗಿತ್ತು. ಈ ಹಣಕಾಸು ವರ್ಷದಲ್ಲಿ ಇದುವರೆಗೆ ಚಲಾವಣೆಯಲ್ಲಿರುವ ನಗದಿನ ಪ್ರಮಾಣದಲ್ಲಿ ಶೇ.14.2ರಷ್ಟು ಏರಿಕೆಯಾಗಿದೆ.

ನಗದು ಪ್ರಮಾಣ ಹೆಚ್ಚಲು ಕಾರಣವೇನು?
ಆರ್ಥಿಕ ಅನಿಶ್ಚತತೆಯು ಪರಿಸ್ಥಿತಿ ಎದುರಾದಾಗಲೆಲ್ಲ ಬ್ಯಾಂಕ್‌ಗಳಿಂದ ನಗದು ಹಿಂಪಡೆಯುವಿಕೆ ಹೆಚ್ಚಾಗುವುದು ಸಾಮಾನ್ಯ. ಕೊರೊನಾ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳು ಲಾಕ್‌ಡೌನ್‌, ಕಠಿನ ನಿರ್ಬಂಧಗಳನ್ನು ಹೇರಿದುದರಿಂದಾಗಿ ಜನರು ತಮ್ಮ ಆರೋಗ್ಯದ ದೃಷ್ಟಿಯಿಂದ ಕೈಯಲ್ಲಿ ಒಂದಿಷ್ಟು ಹಣವನ್ನು ಇರಿಸಿಕೊಳ್ಳುವುದು ಸುರಕ್ಷಿತ ಎಂದು ಭಾವಿಸುತ್ತಿರುವುದೇ ನಗದು ಚಲಾವಣೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಅಲ್ಲದೆ ಕಠಿನ ನಿರ್ಬಂಧಗಳಿಂದಾಗಿ ತುರ್ತು ಸಂದರ್ಭದಲ್ಲಿ ಹಣ ವಿಥ್‌ಡ್ರಾ ಮಾಡಲು ಸಾಧ್ಯವಾಗದಿರುವ ಭೀತಿಯ ಕಾರಣದಿಂದಾಗಿಯೂ ಜನರು ಬ್ಯಾಂಕ್‌ಗಳಿಂದ ಹಣ ವಿಥ್‌ಡ್ರಾ ಮಾಡಿ ಮನೆಯಲ್ಲಿ ಇರಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇದೇ ವೇಳೆ ಜನರು ಹಣವನ್ನು ಬೇಕಾಬಿಟ್ಟಿಯಾಗಿ ವ್ಯಯಿಸದೆ ಅದನ್ನು ಜೋಪಾನವಾಗಿ ಇರಿಸಿಕೊಂಡಿದ್ದಾರೆ. ಸಂಭಾವ್ಯ ಆರೋಗ್ಯ ತುರ್ತು ಪರಿಸ್ಥಿಯನ್ನು ಎದುರಿಸುವುದೇ ಸದ್ಯ ಜನರ ಮೊದಲ ಆದ್ಯತೆಯಾಗಿದೆ ಎಂದು ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next