Advertisement

ಗಡಿಯಲ್ಲಿ ಅಭಿನಂದನ್‌ಗಾಗಿ ಜನೋತ್ಸಾಹ

12:30 AM Mar 02, 2019 | Team Udayavani |

ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಸಂಭ್ರಮದ ವಾತಾವರಣ ಏರ್ಪಟ್ಟಿತ್ತು. ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಭಾರತಕ್ಕೆ ಹಸ್ತಾಂತರವಾಗುವ ಐತಿಹಾಸಿಕ ಘಟನೆ ಯನ್ನು ಕಣ್ತುಂಬಿಕೊಳ್ಳಲು ಮುಂಜಾನೆಯಿಂದಲೇ ಅಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

Advertisement

ಎಳೆಯರಿಂದ ಹಿಡಿದು ಯುವಕರು, ವಯಸ್ಸಾದ ಮುದುಕರು ಗಡಿಭಾಗದಲ್ಲಿ ನೆತ್ತಿ ಸುಡುತ್ತಿದ್ದ ಬಿರು ಬಿಸಿಲನ್ನೂ ಲೆಕ್ಕಿಸದೆ ಆಗಮಿಸಿದ್ದರು. ಕೆಲವರು, ಕೈಯ್ಯಲ್ಲಿ ತ್ರಿವರ್ಣ ಧ್ವಜಗಳನ್ನು ಹಾರಾಡಿಸುತ್ತಾ ಅಭಿನಂದನ್‌ ಬರುವಿಕೆಗಾಗಿ ಕಾಯುತ್ತಿದ್ದರೆ, ಮತ್ತೂ ಕೆಲವರು ಡೋಲುಗಳನ್ನು ಬಾರಿಸುತ್ತಾ, ದೇಶಭಕ್ತಿಯ ಹಾಡುಗಳನ್ನು ಹಾಡುತ್ತಿದ್ದರು.  ಹಲವಾರು ಮಂದಿ “ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗುತ್ತಿ ದ್ದರು. ಕೆಲವರು ಅಭಿನಂದನ್‌ ಪರವಾಗಿಯೂ ಘೋಷಣೆಗಳನ್ನು ಕೂಗುತ್ತಾ, ವೀರ ಯೋಧನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ಅನೇಕರ ಕೈಯ್ಯಲ್ಲಿ  ಹೂವಿನ ಹಾರಗಳಿದ್ದವು. ಅವಕಾಶ ಸಿಕ್ಕರೆ, ಅಭಿನಂದನ್‌ ಕೊರಳಿಗೆ ಹಾರ ಹಾಕುವ ಇಚ್ಛೆ ಅವರದ್ದಾಗಿತ್ತು. ಹೀಗೇ, ಹಾರವೊಂದನ್ನು ಹಿಡಿದುಕೊಂಡು ನಿಂತಿದ್ದ ಸಿಖ್‌ ಸಮುದಾಯದ ಯುವಕನೊಬ್ಬನನ್ನು ಮಾತಾಡಿಸಿದಾಗ ಆತ, “”ಅಭಿನಂದನ್‌ ಜೀ ಅವರನ್ನು ಸ್ವಾಗತಿಸುವ ಅವಕಾಶ ನನಗೆ ಸಿಕ್ಕರೆ, ಈ ಹಾರವನ್ನು ಅವರ ಕೊರಳಿಗೆ ಹಾಕಿ ಸ್ವಾಗತಿಸಬೇಕು ಎಂದು ಈ ಹಾರ ತಂದಿದ್ದೇನೆ” ಎಂದು ಪುಳಕಿತನಾಗಿ ಹೇಳಿದ. ಈ ಎಲ್ಲವೂ ಒಟ್ಟಾರೆಯಾಗಿ ಗಡಿ ಪ್ರದೇಶದಲ್ಲಿ ಜಾತ್ರೆಯ ವಾತಾವರಣ ಸೃಷ್ಟಿಸಿದ್ದವು.

ಹಾಡು ಹಾಡಿದ ಉಪಮೇಯರ್‌: ಅತ್ತ, ದೂರದಲ್ಲಿ ಅಭಿನಂದನ್‌ ಅವರನ್ನು ಸ್ವಾಗತಿಸಲು ಅಮೃತಸರ ನಗರದ ಉಪ ಮೇಯರ್‌ ರಮಣ್‌ ಭಕ್ಷಿ ಆಗಮಿಸಿದ್ದರು. ಜನರ ಉತ್ಸಾಹವನ್ನು ನೋಡಿ ಸ್ಫೂರ್ತಿಗೊಂಡ ಅವರಲ್ಲೂ ಸಂಭ್ರಮ ಮನೆ ಮಾಡಿತ್ತು. ಅವರೂ ಸಹ ದೇಶಭಕ್ತಿ ಹಾಡೊಂದನ್ನು ಹಾಡು ತ್ತಾ ನಿಂತರು. ಉಪ ಮೇಯರ್‌ ಅವರ ಬಾಯಲ್ಲಿ ಹಾಡು ಕೇಳಿದ ಸುತ್ತಲಿನ ವರೂ ಮತ್ತಷ್ಟು ಉದ್ವೇಗ, ಉತ್ಸಾಹಗಳಿಂದ ಹಾಡಿಗೆ ದನಿಗೂಡಿಸಿ ದರು. ಇದೇ ವೇಳೆ, ಕೆಲ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ತಿಳಿಸಿದ ಹಲವಾರು ಮಂದಿ, ಪಾಕಿಸ್ಥಾನವು ಉಗ್ರರಿಗೆ ಹಣ ಸಹಾಯ ಮಾಡುವುದನ್ನು ಹಾಗೂ ಅವರಿಗೆ ಆಶ್ರಯ ಕೊಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ, ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಥಸಂಚಲನ ರದ್ದು: ಅಟ್ಟಾರಿ-ವಾಘಾ ಗಡಿಯಲ್ಲಿ ಬಿಎಸ್‌ಎಫ್ ವತಿಯಿಂದ ನಿತ್ಯವೂ ನಡೆಯುವ ಸೇನಾ ಕವಾಯತನ್ನು ಶುಕ್ರವಾರ ರದ್ದುಗೊಳಿಸಲಾಗಿತ್ತು. ವಾಘಾ ಗಡಿಯಲ್ಲಿ ಅಭಿನಂದನ್‌ ಅವರನ್ನು ಸ್ವಾಗತಿಸಲು ಮುಂಜಾನೆಯಿಂದಲೇ ಹೆಚ್ಚಿನ ಜನರು ಆಗಮಿಸಿದ್ದನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೂ, ಕವಾಯತು ನಡೆಯುವ ಪ್ರದೇಶಕ್ಕೆ ಜನಸಾಮಾನ್ಯರನ್ನು ಬಿಟ್ಟಿರಲಿಲ್ಲ. ಇನ್ನೊಂದೆಡೆ, ಪಾಕಿಸ್ಥಾನ ಮಾತ್ರ ಪಥಸಂಚಲನವನ್ನು ರದ್ದು ಮಾಡಿರಲಿಲ್ಲ. ಎಂದಿನಂತೆ ಯಥಾಪ್ರಕಾರ ಬೀಟಿಂಗ್‌ ದಿ ರಿಟ್ರೀಟ್‌ ಅನ್ನು ಪಾಕ್‌ ಸೇನೆ ನಡೆಸಿತು. ಸಂಜೆ 4 ಗಂಟೆ ವೇಳೆಗೆ ಅಭಿನಂದನ್‌ ಅವರು ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ, ಪಾಕಿಸ್ಥಾನವು ಅದೂ-ಇದೂ ಎಂಬ ಕಾರಣಗಳನ್ನು ಹೇಳುತ್ತಾ, ಪ್ರಕ್ರಿಯೆಗಳ ನೆಪವೊಡ್ಡುತ್ತಾ ಯೋಧನನ್ನು ಬಿಡುಗಡೆ ಮಾಡುವಾಗ ರಾತ್ರಿಯಾಗಿಬಿಟ್ಟಿತು. ಇಷ್ಟೊಂದು ವಿಳಂಬವಾದರೂ, ಬೆಳಗ್ಗಿನಿಂದಲೇ ಅಲ್ಲಿ ನೆರೆದಿದ್ದ ಜನಸಮೂಹ ಮಾತ್ರ ಅಭಿನಂದನ್‌ ತಾಯ್ನಾಡಿನ ಮಣ್ಣನ್ನು ಸ್ಪರ್ಶಿಸುವವರೆಗೂ ಕದಲದೇ ಕಾಯುತ್ತಿದ್ದದ್ದು ವಿಶೇಷವಾಗಿತ್ತು.

Advertisement

ಹುಟ್ಟೂರು ಚೆನ್ನೈನಲ್ಲಿ ಹರ್ಷದ ವಾತಾವರಣ
ದೇಶಭಕ್ತಿಯ ಹಾಡುಗಳು, ಹರ್ಷೋದ್ಗಾರ, ಏನೋ ಕಾತರ… ಇದು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮೂಡಿದ್ದ ವಾತಾವರಣ. ಐಎಎಫ್ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಹಸ್ತಾಂತರ ಹಿನ್ನೆಲೆಯಲ್ಲಿ ಶುಕ್ರವಾರ ಅವರ ನಿವಾಸ ಮತ್ತು ಇತರ ಸ್ಥಳಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಟುಂಬಸ್ಥರು ಮತ್ತು ಸಾರ್ವನಿಕರು ಆನಂದ ವ್ಯಕ್ತಪಡಿಸಿದರು. ಚೆನ್ನೈ ನಗರದಿಂದ 25 ಕಿಮೀ ದೂರದಲ್ಲಿರುವ ಜಲವಾಯು ವಿಹಾರದಲ್ಲಿರುವ ನಿವಾಸಿಗಳು “ಭಾರತ್‌ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಲಾಹೋರ್‌ನಿಂದ ಅಟ್ಟಾರಿ ಗಡಿಭಾಗಕ್ಕೆ ಅಭಿನಂದನ್‌ ಹೊರಟಿದ್ದಾರೆ ಎಂಬ ವಿಚಾರ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಎಲ್ಲರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಐಎಎಫ್ನಿಂದ ನಿವೃತ್ತರಾಗಿರುವ ಚಂದರ್‌ ಎಂಬುವರು “ಇದೊಂದು ಸಂತಸದ ಕ್ಷಣ’ ಎಂದು ಹೇಳಿಕೊಂಡಿದ್ದಾರೆ. ಕಳೆದ ಎರಡು ದಿನಗಳನ್ನು ನಾವು ಆತಂಕ ಮತ್ತು ಕಾತರದಿಂದ ಕಳೆದೆವು ಎಂದು ಹೇಳಿಕೊಂಡಿದ್ದಾರೆ. 

ಅಭಿನಂದನ್‌ ಹೆತ್ತವರಿಗೆ ಚಪ್ಪಾಳೆಯ ಗೌರವ
ಗುರುವಾರ ರಾತ್ರಿ ಇಡೀ ಚೆನ್ನೈ ನಗರ ಸದ್ದಿಲ್ಲದೆ ನಿದ್ರೆಗೆ ಜಾರುವ ಮೂಡ್‌ನ‌ಲ್ಲಿದ್ದರೆ, ಅತ್ತ ಚೆನ್ನೈ ವಿಮಾನ ನಿಲ್ದಾಣದಲ್ಲಿ ದಿಲ್ಲಿ ಕಡೆಗೆ ಹೊರಟಿದ್ದ ವಿಮಾನವೊಂದರಲ್ಲಿ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ಪಾಕಿಸ್ಥಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಶುಕ್ರವಾರ ಬಿಡುಗಡೆ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ ಅವರ ಅಪ್ಪ-ಅಮ್ಮ , ಗುರುವಾರ ರಾತ್ರಿಯೇ ವಿಮಾನದಲ್ಲಿ ದಿಲ್ಲಿ ಕಡೆಗೆ ಪ್ರಯಾಣ ಬೆಳೆಸಿದರು. 

ಏರ್‌ ಮಾರ್ಷಲ್‌ (ನಿವೃತ್ತ) ಎಸ್‌. ವರ್ಧಮಾನ್‌ ಹಾಗೂ ಅವರ ಪತ್ನಿ ಡಾ| ಶೋಭಾ ವರ್ಧಮಾನ್‌ ಅವರು ವಿಮಾನದೊಳಕ್ಕೆ ಬರುತ್ತಿದ್ದಂತೆ ವಿಮಾನದಲ್ಲಿದ್ದ ಅಷ್ಟೂ ಪ್ರಯಾಣಿಕರು ಎದ್ದು ನಿಂತು ಚಪ್ಪಾಳೆಗಳೊಂದಿಗೆ ಅಭಿನಂದನ್‌ ಹೆತ್ತವರನ್ನು ಸ್ವಾಗತಿಸಿದರು. ದಂಪತಿಯು ತಮ್ಮ ಆಸನಗಳತ್ತ ಸಾಗುತ್ತಿರುವಾಗ ಅವರ ಜತೆಗೆ ಹಲವಾರು ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ದಿಲ್ಲಿಯಲ್ಲಿ ಬಂದಿಳಿದ ನಂತರ, ಈ ಇಬ್ಬರೂ, ಚಂಡೀಗಡ‌ದತ್ತ ಪ್ರಯಾಣ ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next