Advertisement

ಪೊಲೀಸ್‌ ವ್ಯವಸ್ಥೆಗೆ ಸಾರ್ವಜನಿಕ ಬಲ : 563 ಬೀಟ್‌ ರಚನೆ

07:50 AM Aug 03, 2017 | Team Udayavani |

ಮಡಿಕೇರಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಶಾಂತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯನ್ನು ಸಬಲೀಕರಣಗೊಳಿಸುವುದರೊಂದಿಗೆ 563 ಬೀಟ್‌ಗಳನ್ನು ರಚಿಸಲಾಗಿದ್ದು,  23,490 ಸಾರ್ವಜನಿಕ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

Advertisement

ನಗರದ ಕ್ರಿಸ್ಟಲ್‌ ಕೋರ್ಟ್‌ ಸಭಾಂಗಣದಲ್ಲಿ ರವಿವಾರ ಮಡಿಕೇರಿ ಗ್ರಾಮಾಂತರ ಠಾಣಾ ಸುಧಾರಿತ ಗಸ್ತು ವ್ಯವಸ್ಥೆಗಾಗಿ ಆಯೋಜನೆಗೊಂಡ ಗಸ್ತು ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸ್‌ ಇಲಾಖೆಯಲ್ಲಿ ತಾರತಮ್ಯ ಇಲ್ಲದಂತೆ ಎಲ್ಲರಿಗೂ ಗಸ್ತು ಜವಾಬ್ದಾರಿ ನೀಡಲು ವಿಶೇಷವಾಗಿ ಸುಧಾರಿತ ಗಸ್ತು ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಅದರಂತೆ ಎಲ್ಲಾ ಪೊಲೀಸ್‌ ಠಾಣಾ, ವೃತ್ತ ಹಾಗೂ ಉಪ ಅಧೀಕ್ಷಕರ ಮಟ್ಟದಲ್ಲಿ ಜಿಲ್ಲೆಯಲ್ಲಿ 563 ಬೀಟ್‌ಗಳನ್ನು ರಚಿಸಲಾಗಿದ್ದು, ಪೊಲೀಸರೊಂದಿಗೆ 23,490 ಮಂದಿ ಸಾರ್ವಜನಿಕ ಸದಸ್ಯರನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು.

700 ಸಿಮ್‌ ಉಚಿತ
ಪೊಲೀಸ್‌ ಇಲಾಖೆಯನ್ನು ಸಬಲೀಕರಣಗೊಳಿಸಿ ಅಧಿಕಾರ ನೀಡಲು ಉದ್ದೇಶಿಸಿದ್ದು, ಇದರೊಂದಿಗೆ ತತ್‌ಕ್ಷಣವೇ ಮಾಹಿತಿಗಳನ್ನು ರವಾನಿಸಲು ಇಲಾಖೆಯಿಂದ ಪೊಲೀಸರಿಗೆ 700 ಮೊಬೈಲ್‌ ಸಿಮ್‌ಗಳನ್ನು ಉಚಿತವಾಗಿ ನೀಡಿದೆ. ಸುಧಾರಿತ ಗಸ್ತು ವ್ಯವಸ್ಥೆಯಡಿ 30 ಪೊಲೀಸರಿಗೆ ಒಂದೆರಡು ಗ್ರಾಮಗಳನ್ನು ಒಪ್ಪಿಸಲಾಗುತ್ತಿದೆ. ಅದಕ್ಕೊಬ್ಬ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಇವರೊಂದಿಗೆ ಆ ಗ್ರಾಮದ ಒಟ್ಟು 40 ಮಂದಿ ಸಾರ್ವಜನಿಕ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇವರುಗಳು ಆ ಗ್ರಾಮದಲ್ಲಿ ಸಮಾಜಘಾತುಕರ ಚಟುವಟಿಕೆಗಳ, ಶಾಂತಿ ಕದಡುವವರ, ರೌಡಿ ಶೀಟರ್,  ಜಾತಿ-ಜಾತಿಯೊಳಗೆ ಸಂಘರ್ಷವುಂಟು ಮಾಡಲೆತ್ನಿಸುವವರ, ಅನೈತಿಕ ಚಟುವಟಿಕೆ, ಮರಳು ದಂಧೆ ಮತ್ತಿತರ ಕುರಿತು ನಿಗಾ ಇಟ್ಟು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಲಿದ್ದಾರೆ.  ಇದರೊಂದಿಗೆ ಆ ಗ್ರಾಮಗಳಲ್ಲಿ ಪಾಸ್‌ಪೋರ್ಟ್‌, ಕೋವಿ ಲೈಸೆನ್ಸ್‌ ಇನ್ನಿತರ ಸಮಸ್ಯೆಗಳು ಕಂಡು ಬಂದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಿ ಅದನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸುವ ಜವಾಬ್ದಾರಿಯೂ ಇವರ ಮೇಲಿರುತ್ತದೆ ಎಂದು ಎಸ್‌ಪಿ ವಿವರಿಸಿದರು.

ಜೇಮ್ಸ್‌ ಬಾಂಡ್‌ಗಳಲ್ಲ
ಸೇವೆ ಹಾಗೂ ಕರ್ತವ್ಯ ಖಾಕಿಯ ಸಂಕೇತವಾಗಿದೆ. ಪೊಲೀಸರು ಅಂದ ಮಾತ್ರಕ್ಕೆ ಅವರೇನು ಜೇಮ್ಸ್‌ ಬಾಂಡ್‌ ಅಲ್ಲ, ಪೊಲೀಸರು ಮತ್ತು ಸಾರ್ವಜನಿಕರು ಸಮಾಜದ ಕೊಂಡಿಯಾಗಿ ಸೇವೆ ಸಲ್ಲಿಸಬೇಕಾಗುತ್ತದೆ ಎಂದ ಅವರು, ಪೊಲೀಸರು, ಸಾರ್ವಜನಿಕ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್‌ ಉನ್ನತಾಧಿಕಾರಿ, ಡಿವೈಎಸ್ಪಿ, ವೃತ್ತ ನಿರೀಕ್ಷಕರು ಇದ್ದು ಸಹಕರಿಸುತ್ತಾರೆ. ಸಭೆ ನಡೆಸಿ ಚರ್ಚಿಸುತ್ತಾರೆ, ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಾಗುತ್ತದೆ ಎಂದು ಎಸ್‌ಪಿ ರಾಜೇಂದ್ರಪ್ರಸಾದ್‌ ಮಾಹಿತಿ ನೀಡಿದರು.

Advertisement

ಮಡಿಕೇರಿಯ ನೂತನ ಡಿವೈಎಸ್ಪಿಯಾಗಿ ಅಧಿಕಾರಿ ಸ್ವೀಕರಿಸಿದ ಕೆ.ಎಸ್‌. ಸುಂದರ ರಾಜ್‌ ಅವರು  ಸ್ವಾಗತಿಸಿ ಅನಂತರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸ್ತುತ ಅನೇಕ ಸವಾಲುಗಳನ್ನು ಸಮಾಜ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪೊಲೀಸರು ಜನಸ್ನೇಹಿ ಯಾಗಿರಬೇಕಾದುದು ಅಗತ್ಯ. ಹೀಗಾದಾಗ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದಕ್ಕಾಗಿ ಪ್ರತಿ ಗ್ರಾಮದಲ್ಲಿ 40 ಮಂದಿ ಸಾರ್ವಜನಿಕ ಸದಸ್ಯರನ್ನು ನೇಮಿಸಿ ಅವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಇವರು ಸಮಾಜದಲ್ಲಿ ಶಾಂತಿ ಸುವ್ಯಸ್ಥೆಗಳನ್ನು ಕಾಪಾಡುವ ನಿಟ್ಟಿನಲ್ಲಿ   ಸಾರ್ವಜನಿಕ ಪೊಲೀಸರಾಗಿದ್ದುಕೊಂಡು ಗ್ರಾಮಗಳಲ್ಲಿ ನಡೆಯುವ ಕೆಲವೊಂದು ಘಟನೆ, ಕೃತ್ಯ, ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿ ಕ್ರಮಕ್ಕೆ ಅಥವಾ ಬಗೆಹರಿಸಲು ಸಹಕರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಕೆ. ನಿಡುಗಣೆ ಗ್ರಾ. ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಉದ್ಘಾಟಿಸಿದರು. ನಗರ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್‌ ಉಪಸ್ಥಿತರಿದ್ದರು.

ಹೋಮ್‌ ಸ್ಟೇಗಳಿಂದ ಶಾಂತಿ ಭಂಗ
ಇನ್ನು ಕೆಲವರು ಹೋಮ್‌ ಸ್ಟೇಗಳಿಂದ ಶಾಂತಿಗೆ ಭಂಗ ಉಂಟಾಗುತ್ತಿದೆ. ನಗರದಲ್ಲಿರುವ ಹೋಮ್‌ಸ್ಟೇ ಎಂಬುದನ್ನು ರದ್ದುಗೊಳಿಸಿ ನಗರದಿಂದ ಕೆಲವು ಕಿ.ಮೀ. ದೂರಕ್ಕೆ ಸೀಮಿತಗೊಳಿಸಬೇಕು. ಹೋಮ್‌ ಸ್ಟೇಗಳಿಗೆ ಪ್ರವಾಸಿಗರನ್ನು ಕರೆಯುವ ಭರಾಟೆಯಲ್ಲಿ ಸ್ಥಳೀಯರಿಗೆ ಕಿರುಕುಳ ನೀಡುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next