Advertisement

ಪಬ್ಲಿಕ್ ಪರೀಕ್ಷೆ ಎಂದರೆ ಇಷ್ಟೊಂದು ಭಯಂಕರನಾ……?!

12:13 PM Jul 06, 2019 | Nagendra Trasi |

ಪಬ್ಲಿಕ್ ಪರೀಕ್ಷೆ ಎಂದರೆ ಇಷ್ಟೊಂದು ಭಯಂಕರನಾ……?ಯೋಚಿಸಬೇಕಾದ ಪ್ರಶ್ನೆ. ನಮ್ಮ ವಿದ್ಯಾರ್ಥಿ ಜೀವನದತ್ತ ಒಮ್ಮೆ ಹೊರಳಿ ನೋಡಿದಾಗ ‘ಪಬ್ಲಿಕ್ ಪರೀಕ್ಷೆ ಎಂದರೆ ಬೇರೆ ಶಾಲೆಗೆ ಹೋಗಿ ‘ಪರೀಕ್ಷೆ’ ಬರೆಯುವುದು ಎಂಬ ಕಲ್ಪನೆ ಬಿಟ್ಟರೆ, ಶಿಕ್ಷಕರಾಗಲಿ, ಮಕ್ಕಳಾಗಲಿ, ಪೋಷಕರಾಗಲಿ ವಿಶೇಷವಾಗಿ ತಲೆ ಕೆಡಿಸಿಕೊಂಡಿದ್ದೇ ಇಲ್ಲ ಎನ್ನಬಹುದು. ಈಗಿನ ಮಕ್ಕಳನ್ನು ನೋಡಿದರೆ ‘ಅಯ್ಯೋ’ ಎನ್ನಿಸುತ್ತದೆ.

Advertisement

ಆಗಿನ ನಮ್ಮ ರಜೆಯ ಮಜಾ ಇಂದಿನ ಮಕ್ಕಳಿಗೆಲ್ಲಿದೆ? ಎಪ್ರಿಲ್ 10ರಂದು ಶಾಲೆಗೆ ಬೆನ್ನು ಹಾಕಿ ಬಂದರೆ ಮತ್ತೆ ಶಾಲೆಯ ಕಡೆ ಮುಖ ಹಾಕಲು ಕನಿಷ್ಟ ಜೂನ್ 5, 6ನೇ ತಾರೀಕು ಆದರೂ ಆಗಬೇಕು.

ರಜೆ ಸಿಕ್ಕಿತೆಂದರೆ ನಮ್ಮನ್ನು ಹಿಡಿಯೋರೆ ಇಲ್ಲ. ಮನೆಯಿಂದ ಒಂದು ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಮಾವು, ಹುಣಸೆ, ಗೇರು ಮರಗಳಲ್ಲಿ ನಮ್ಮದೇ ರಾಜ್ಯಭಾರ. ಅಮ್ಮಂದಿರಿಗೂ ಮಕ್ಕಳನ್ನು ಶಾಲೆಗೆ ಹೊರಡಿಸುವ ಧಾವಂತದಿಂದ ಒಂದಿಷ್ಟು ಬಿಡುವು. ಅಪ್ಪಂದಿರಿಗೂ ಸಂಸಾರದೊಂದಿಗೆ ನೆಂಟರಿಷ್ಟರ ಮನೆ, ಪಿಕ್ ನಿಕ್ ಗೆ ಯೋಜನೆ ಹಾಕುವ ಯೋಚನೆ. ಆದರೆ ಈಗೆಲ್ಲಿದೆ ಅಂದಿನ ರಜೆಯ ಗಮ್ಮತ್ತು?

ಎಪ್ರಿಲ್ 10 ರಿಂದ ಸಿಗಬೇಕಾದ ರಜೆಗಳಲ್ಲಿ ಒಂದಷ್ಟು ಕಡಿತವಾಗಿ ದೊರೆಯುವ ಅತ್ಯಲ್ಪ ಅವಧಿಯಲ್ಲಿ ಬೇಸಿಗೆ ಶಿಬಿರ,ರಂಗಶಿಬಿರ,ಸಂಗೀತ,ಡಾನ್ಸ್ ಕ್ಲಾಸ್ ಇತ್ಯಾದಿ, ಇತ್ಯಾದಿ. ಮಕ್ಕಳೊಂದಿಗೆ ಪೋಷಕರಿಗೂ ಗೃಹಬಂಧನ. ಇನ್ನು S.S.L.C,P.U.C.ಗೆ ಪಾದಾರ್ಪಣೆಗೈದ ವಿದ್ಯಾರ್ಥಿಗಳಿದ್ದರಂತೂ ಅವರ ಪಾಡು ಆ ದೇವರಿಗೇ ಪ್ರೀತಿ….!!

ಒಂಭತ್ತನೇ, ಪ್ರಥಮ PUC ಪರೀಕ್ಷೆ ಮುಗಿದ 3, 4 ದಿನಕ್ಕೆ ಮುಂದಿನ ತರಗತಿಗಳು ಆರಂಭವಾಗುತ್ತವೆ. ವರ್ಷವಿಡೀ ಪಾಠ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮನಸ್ಸಿಗೆ(ಮೆದುಳಿಗೆ) ಒಂದಿಷ್ಟು ವಿಶ್ರಾಂತಿ ದೊರೆತು, ಉತ್ಸಾಹ ತುಂಬಿಕೊಂಡು ಮುಂದಿನ ಕಲಿಕೆಗೆ ಸಿದ್ಧವಾಗಲಿ ಎಂಬ ಮನೋವಿಜ್ಞಾನದಂತೆ ರಜೆಯನ್ನು ಕೊಡಲಾಗುತ್ತಿತ್ತು. ಆದರೆ ಈ ದಿನಗಳಲ್ಲಿ ಈ ಮನಶ್ಯಾಸ್ತ್ರವನ್ನು ಗಾಳಿಗೆ ತೂರಿಬಿಟ್ಟು, ಮಕ್ಕಳ ಮನಸ್ಸನ್ನೂ ಕಡೆಗಣಿಸಿ ರಜೆಯಲ್ಲಿಯೇ ಶಾಲಾರಂಭಿಸಿ, ಕೇವಲ ಅಂಕಗಳಿಕೆಯನ್ನೇ ಮೂಲ ಗುರಿಯಾಗಿಟ್ಟು ಕೊಂಡು ಕೇವಲ ಅಂಕಗಳಿಕೆಯನ್ನೇ ಮೂಲಗುರಿಯಾಗಿಟ್ಟುಕೊಂಡು drill workಮಾಡಿಸಲಾಗುತ್ತದೆ. ತತ್ಪರಿಣಾಮವಾಗಿ ಒಂದಷ್ಟು ವಿರಾಮ, ಮನೋಲ್ಲಾಸದ ಬಳಿಕ ಜೂನ್ 1ರಂದು ಕಾಣಬೇಕಾಗಿದ್ದ ಗರಿಗರಿ ಪುಸ್ತಕದ ಪರಿಮಳ, ಅದನ್ನು ಬಿಡಿಸಿ ನೋಡುವ ಹಂಬಲ, ಹೊಸತನ್ನು ಕಲಿಯಬೇಕೆನ್ನುವ ಕುತೂಹಲ ಜಾಗೃತಗೊಳ್ಳಲು ತರಗತಿಗಳ ನಡುವೆ ಆರಾಮವಿಲ್ಲದೆ ಸಮಯವಕಾಶವೇ ಇಲ್ಲ.

Advertisement

ಶಾಲಾರಂಭದ ಬಳಿಕ 10 15 ದಿನಗಳ ಕಾಲ ನಡೆಯುವ ಸೇತುಬಂಧ ಕಾರ್ಯಕ್ರಮದ ಅವಧಿಯಲ್ಲೂ ಹೊಸತನ್ನು ತಿಳಿಯುವ ಉತ್ಸಾಹಕ್ಕೆ ತಣ್ಣೀರೆರಚಲಾಗುತ್ತದೆ. ‘ಸೇತುಬಂಧ’ ಆಯಾ ಸಾಮರ್ಥ್ಯದೊಂದಿಗೆ ಸೇತುವಾಗಿ ಬಂಧಿಸಲ್ಪಡಬೇಕೇ ಹೊರತು ಎಲ್ಲವನ್ನು ಜೂನ್ ಆರಂಭದಲ್ಲೇ ಪೂರೈಸುವುದಲ್ಲ. ಶಾಲಾರಂಭವಾಗಿ ಒಂದೆರಡು ದಿನಗಳಲ್ಲಿ ಹೊಸಪಾಠಗಳನ್ನು ತೆರೆದರೆ ಮಕ್ಕಳು ಖುಷಿಖುಷಿಯಾಗಿ ಭಾಗವಹಿಸುವುದನ್ನು ನಾನು ಕಂಡುಕೊಂಡಿದ್ದೇನೆ.

ಇನ್ನು ಮಗ ಅಥವಾ ಮಗಳು ಎಸ್.ಎಸ್.ಎಲ್.ಸಿ.ಗೆ ಕಾಲಿಟ್ಟರೆಂದರೆ ಪೋಷಕರ ಎದೆಯಲ್ಲಿ ಸಣ್ಣದೊಂದು ನಡುಕ. ಈ ಒಂದು ವರ್ಷ ಹೆತ್ತವರು ಹಲವು ತ್ಯಾಗಗಳಿಗೆ ಸಿದ್ಧರಾಗುತ್ತಾರೆ. ಮೊದಲಿಗೆ ಟಿ.ವಿ. ಸಂನ್ಯಾಸತ್ವಸ್ಪೆಷಲ್ ಟ್ಯೂಷನ್ ಕಾಸಿನ, ಹುಡುಕಾಟ, ಮನೆಯಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಕ್ರಮಗಳ ಮುಂದೂಡಿಕೆ, ಮನೆಗೆ ಬರುವ ನೆಂಟರಿಷ್ಟರಿಗೆ ನಿಷೇಧ ಹೇರಿಕೆ, ಮಕ್ಕಳು ಮನೆಯ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರೆ ಅದರಿಂದ ಮುಕ್ತಿ, ಕರಾಟೆ, ಸಂಗೀತ ಇತ್ಯಾದಿ ತರಗತಿಗಳಿಗೆ ಹೋಗುತ್ತಿದ್ದರೆ ಅಲ್ಪವಿರಾಮ ಹಾಕಿ ಕೇವಲ ‘ಓದು’ ಎಂಬ ಗೂಟಕ್ಕೆ ಕಟ್ಟಿ ಹಾಕಲಾಗುತ್ತದೆ.

ಕಂಡ ಕಂಡ ದೇವಸ್ಥಾನಕ್ಕೆ ಅಪ್ಪ ಅಮ್ಮಂದಿರ ಅಲೆದಾಟ, ಹರಕೆಸಲ್ಲಿಕೆ, ಪರೋಪಕಾರದಲ್ಲಿ ನಿರತರಾಗುವುದು, ಕಚೇರಿಗಳಲ್ಲೂ ಹಿಂದೆಂದಿಗಿಂತಲೂ ಶ್ರದ್ಧೆಯ ದುಡಿತ, ಬಂಧು ಬಳಗದವರ ಮನೆಗೆ ಭೇಟಿ ನೀಡುವುದಕ್ಕೂ ತಾತ್ಕಾಲಿಕ ವಿರಾಮ, ಇಂತಹ ವಿಶೇಷ ವರ್ತನೆಗಳನ್ನು ಕಂಡದ್ದುಂಟು. ತಾವು ಮಾಡಿದ ಉತ್ತಮ ಕಾರ್ಯದ ಫಲಿತಾಂಶ ಅಂಕಗಳ ರೂಪದಲ್ಲಿ ತಮ್ಮ ಮಕ್ಕಳಿಗೆ ದೊರೆತೀತು ಎಂಬ ದೂರದ ಸೆಳೆತ.

ಇನ್ನು ಅಧ್ಯಾಪಕರ ಪಾಡಂತೂ ಹೇಳತೀರದು. ಒಂದೆಡೆ ಇಲಾಖೆಯ ಒತ್ತಡ, ಇನ್ನೊಂದೆಡೆ ಪೋಷಕರ ನಿರೀಕ್ಷೆ. ಶಾಲಾಭಿವೃದ್ಧಿ ಸಮಿತಿಯವರ ಒತ್ತಾಯದ ನಡುವೆ ತನ್ನ ಆರೋಗ್ಯವನ್ನೂ ಕಡೆಗಣಿಸಿ ಕರ್ತವ್ಯ ನಿರತನಾಗುತ್ತಾನೆ. ಆರೋಗ್ಯ ಹದೆಗೆಟ್ಟಿದರೂ “portion cover” ಮಾಡಬೇಕೆಂದು ರಜೆ ತೆಗೆದುಕೊಳ್ಳುವುದೇ ಇಲ್ಲ. ಒಂದು period ಮುಗಿಯುವ ಮೊದಲೇ ತರಗತಿ ಬಾಗಿಲಲ್ಲಿ ಕಾದು ನಿಲ್ಲುವ ಪರಿಸ್ಥಿತಿ, period ಗಾಗಿ ಕಾದಾಟ. ಜೂನ್ನಿಂದಲೇ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ತರಗತಿ ನಡೆಸಿ,ದಶಂಬರ್ ಒಳಗೆ portion ಪೂರ್ಣಗೊಳಿಸಬೇಕಾಗುತ್ತದೆ. ಪಾಠದ ನಡುವೆ ನೀತಿ ಬೋಧಕ ಕತೆಗಳು, ಜೀವನ ಪಾಠಗಳನ್ನು ಹೇಳಲೂ ಹಿಂದೇಟು ಹಾಕಬೇಕಾಗುತ್ತದೆ.

ಯಾಕೆಂದರೆ ವಿಷಯಾಂತರವಾಗಿ period ಹಾಳಾಗಬಹುದೆಂಬ ಭಯ. ಹಾಗಾಗಿ ಶಿಕ್ಷಕರು syllabus ಮುಗಿಸಲು ತಮ್ಮ ಅವಧಿಯನ್ನು 5 ನಿಮಿಷ extend ಮಾಡುತ್ತಾ ಮಕ್ಕಳ ವಿರಾಮದ ಅವಧಿಯನ್ನು ಕಸಿದುಕೊಳ್ಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ದೇಹಬಾಧೆ ತೀರಿಸಿಕೊಳ್ಳಲು ಪರದಾಡುವ ಸ್ಥಿತಿ. ಇನ್ನು ತರಬೇತಿಗಳು ಬಂದರೆ ಬಿಪಿ ಏರಿಕೆ, ಪರೀಕ್ಷಾ ಕಾಲದಲ್ಲಿ ಹಮ್ಮಿಕೊಳ್ಳುವಂತೆ ವಿಜ್ಞಾಪನೆ ರಾತ್ರಿ ಶಾಲೆ ನಡೆಸಿ ಓದಿಸಿ ಎಂಬ ಅಂಬೋಣ. ಅಬ್ಬಬ್ಬಾ S.S.L.C ಎಂದರೆ ಇಷ್ಟೊಂದು ಭಯಂಕರನಾ……..?!

ಮಕ್ಕಳು ಅಂಕ ಗಳಿಕೆಯ ಯಂತ್ರವಾಗಬೇಕೇ? ಉನ್ನತ ಶ್ರೇಣಿಯ ಅಂಕ ಪಡೆದವರೆಲ್ಲಾ ಉನ್ನತಮಟ್ಟದ ಜೀವನ ನಡಸುತ್ತಿದ್ದಾರೆಯೇ? ಅಂಕ ಗಳಿಸದವರು,ಅನುತ್ತೀರ್ಣರಾದವರು ಉತ್ತಮ ಜೀವನ ನಡೆಸುತ್ತಿಲ್ಲವೇ? ಎಲ್ಲರೂ ಒಂದೇ ತರಹ ಇರಲು ಸಾಧ್ಯವೇ? ಮಕ್ಕಳು ಕೇವಲ ನಿಸ್ತೇಜ ಓದುಗರಾಗಬೇಕೇ? ಅವರ ಭಾವನೆ ಸ್ಫುರಣಗೊಳ್ಳಲು ಅವಕಾಶಬೇಡವೇ? ಆ ಮೃದು ಮಧುರ ಮನಸ್ಸು ಅರಳುವುದು ಬೇಡವೇ?  “ಅಂಕ” ದ ಅಂಕಣದಲ್ಲಿ ಅದುಮಿಟ್ಟ ಮನದ ಭಾವಗಳು ಮುದುಡುತಿವೆ. ಮಕ್ಕಳು ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರೀತಿಯ ಪೋಷಕರೆ, ಒತ್ತಡ ಹೇರುತಿರುವ ವ್ಯವಸ್ಥೆಯೇ, ದಯವಿಟ್ಟು ಮಕ್ಕಳ ಮನಸ್ಸರಿತು ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿ. ಇಂದು ಜಗತ್ತಿಗೆ ಬೇಕಾಗಿರುವುದು ಕೇವಲ ಡಾಕ್ಟರ್, ಇಂಜಿನಿಯರ್, ಲಾಯರ್, ಐಎಎಸ್ ಅಧಿಕಾರಿಗಳು ಮಾತ್ರವಲ್ಲ. ಅನ್ನ ನೀಡುವ ಕೃಷಿಕ, ವ್ಯಾಪಾರಿ, ಚಕಚಕನೆ ಮರ ಏರಬಲ್ಲ ಕಾರ್ಮಿಕ, ಪ್ಲಂಬರ್, ಮೆಕಾನಿಕ್, ಪರಿಸರ ಸಂರಕ್ಷಕ, ಬಾಣಸಿಗ, ದೈಹಿಕ ಶ್ರಮಿಕ. ಹೀಗೆ ಎಲ್ಲರೂ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಪ್ರತಿಯೊಬ್ಬರಿಗೂ ಸಮಾನ ಸ್ಥಾನಮಾನ ಸಲ್ಲಬೇಕು. ದೈಹಿಕ ಶ್ರಮಕ್ಕೂ ಮರ್ಯಾದೆ ಸಂದಾಯವಾದರೆ ಮಾತ್ರ ಈ ಭೂಮಿ ಉಳಿದೀತು. ಮಕ್ಕಳ ಸಾಮರ್ಥ್ಯ, ಅಭಿರುಚಿ ಗುರುತಿಸಿ ಬಲತ್ಕಾರದ ಮಾಘ ಸ್ನಾನಕ್ಕೆ ಈಡು ಮಾಡದೆ, ಅವರನ್ನು ಅವರಿದ್ದಂತೆ ಸ್ವೀಕರಿಸಿ ಬೆಳೆಸಿದರೆ ಆರೋಗ್ಯವಂತ ಪ್ರಜೆಗಳಾಗಿ ರೂಪುಗೊಂಡಾರು. ದೇಶವೂ ವಿಭಿನ್ನ ಪ್ರತಿಭೆಯ ವ್ಯಕ್ತಿ ವೃತ್ತಿ ನಿರತರಿಂದ ಸುಭಿಕ್ಷವಾದೀತು.

ಮಲ್ಲಿಕಾ.ಐ

ಕನ್ನಡ ಶಿಕ್ಷಕಿ

ಸರಕಾರಿ ಪ್ರೌಢಶಾಲೆ ವಳಾಲು, ಬಜತ್ತೂರು, ಪುತ್ತೂರು. ದ.ಕ.

Advertisement

Udayavani is now on Telegram. Click here to join our channel and stay updated with the latest news.

Next