Advertisement

ಬೇಸಗೆ ರಜೆಯಲ್ಲಿ ಶಾಲಾ ತರಗತಿ ನಡೆಸಿದರೆ ಕಠಿನ ಕ್ರಮ

07:00 AM Apr 05, 2018 | |

ಕಾಸರಗೋಡು: ಬೇಸಗೆ ರಜೆ ಸಮಯವಾದ ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ  ಶಾಲಾ ರಜೆ ತರಗತಿಗಳನ್ನು ನಿಷೇಧಿಸಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಅಧಿಸೂಚನೆ ಹೊರಡಿಸಿದ್ದಾರೆ. ಅದರಂತೆ ಮಾರ್ಚ್‌ 31ಕ್ಕೆ ಮುಚ್ಚುಗಡೆಯಾಗಿರುವ ಶಾಲೆಗಳು ಜೂನ್‌ ತಿಂಗಳ ಮೊದಲ ವಾರದಲ್ಲಿ ತೆರೆದು ಕಾರ್ಯಾಚರಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Advertisement

ಶಾಲೆಗಳು ರಜೆ ತರಗತಿಗಳನ್ನು ನಡೆಸುವ ಕುರಿತು ರಾಜ್ಯ ಸರಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ  ಈ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ ವರ್ಷದ ರಜೆ ಅವಧಿಯಲ್ಲಿ  ಇದೇ ರೀತಿಯಲ್ಲಿ  ತರಗತಿ ನಡೆಸಿದ ಶಾಲೆಗಳ ಬಗ್ಗೆ  ಕ್ರಮ ಕೈಗೊಳ್ಳುವಂತೆ ಕೇರಳ ಬಾಲ ಹಕ್ಕು ಆಯೋಗಕ್ಕೆ ದೂರು ಲಭಿಸಿದ ಹಿನ್ನೆಲೆಯಲ್ಲಿ  ಪುನರ್‌ ಆದೇಶ ಹೊರಡಿಸಲು ನಿರ್ದೇಶಿಸಲಾಗಿತ್ತು.

ವಿದ್ಯಾರ್ಥಿಗಳ ಶಾರೀರಿಕ – ಮಾನಸಿಕ ಸುಸ್ಥಿರತೆಗೆ ರಜಾದಿನಗಳು ಅತಿ ಅಗತ್ಯವಾಗಿರುವುದಾಗಿ ಅನೇಕ ಆಧುನಿಕ ಮನಃಶಾಸ್ತ್ರ  ಅಧ್ಯಯನಗಳಿಂದ ತಿಳಿದುಬಂದಿದೆ. ರಜಾದಿನಗಳಲ್ಲಿ ತರಗತಿಗಳನ್ನು ನಡೆಸಲು ನಿರ್ಬಂಧ  ಹೇರುವ ಮೂಲಕ ಅದು ವಿದ್ಯಾರ್ಥಿಗಳ ಶಾರೀರಿಕ ಮತ್ತು  ಮಾನಸಿಕವಾದ ಬೆಳವಣಿಗೆ ಮೇಲೆ ಆಘಾತ ಉಂಟು ಮಾಡುವುದನ್ನು ತಡೆದಿದೆ.

ಮಾತ್ರವಲ್ಲದೆ ಎಪ್ರಿಲ್‌ – ಮೇ ತಿಂಗಳಲ್ಲಿ  ತಲೆದೋರುವ ಬಿಸಿಲು, ಜಲಕ್ಷಾಮವೂ ನಮ್ಮ  ಮಕ್ಕಳಲ್ಲಿ  ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ  ಸಿಬಿಎಸ್‌ಇ, ಐಸಿಎಸ್‌ಇ ಮುಂತಾದ ಅಂಗೀಕೃತ, ಖಾಸಗಿ ಶಾಲೆಗಳ ಕಿರಿಯ ಮತ್ತು  ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿನ ಬೇಸಗೆ ರಜೆ ಅವಧಿಯಲ್ಲಿ ಯಾವುದೇ ತರಗತಿ ನಡೆಸದಂತೆ ಕ್ರಮ ಜರಗಿಸಲು ಸಂಬಂಧಪಟ್ಟ  ಎಲ್ಲ  ಶಾಲೆಗಳ ಮುಖ್ಯ ಶಿಕ್ಷಕರಿಗೆ, ಶಾಲಾ ಪ್ರಬಂಧಕರಿಗೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಅಧಿಸೂಚನೆ ಕಳುಹಿಸಿದ್ದಾರೆ. ಕೇರಳ ಶಿಕ್ಷಣ ನಿಯಮ, ಇಲಾಖೆಯ ನಿರ್ದೇಶನದ ವಿರುದ್ಧವಾಗಿ ಬೇಸಗೆ ರಜಾ ಸಮಯದಲ್ಲಿ  ತರಗತಿ ನಡೆಸುವ ಶಾಲೆಗಳ ಅಧಿಕೃತರು, ಮುಖ್ಯ ಶಿಕ್ಷಕರು, ಅಧ್ಯಾಪಕರ ವಿರುದ್ಧ  ಕಠಿನ ಶಿಕ್ಷಾ  ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ  ಸ್ಪಷ್ಟಪಡಿಸಲಾಗಿದೆ.

ಅಲ್ಲದೆ ಬೇಸಗೆ ರಜೆ ಸಂದರ್ಭದಲ್ಲಿ  ತರಗತಿ ನಡೆಸುವ ಮೂಲಕ ತರಗತಿಗೆ ಬರುವ ಸಮಯದಲ್ಲಿ  ಬಿಸಿಲಿನಿಂದ ಅಸ್ವಸ್ಥತೆ ಸಹಿತ ಯಾವುದಾದರೂ ಘಟನೆ ನಡೆದರೆ ಶಾಲಾ ಅಧಿಕೃತರು, ಮುಖ್ಯ ಶಿಕ್ಷಕರು, ಅಧ್ಯಾಪಕರು ವೃತ್ತಿ ಪರವಾಗಿ ಜವಾಬ್ದಾರಿಯನ್ನು  ಹೊರಬೇಕು ಎಂದು ತಿಳಿಸಲಾಗಿದೆ. ಈ ಮಧ್ಯೆ ಖಾಸಗಿ ಟ್ಯೂಷನ್‌ ಸೆಂಟರ್‌ಗಳು ರಜಾಕಾಲದಲ್ಲಿ  ತರಗತಿ ನಡೆಸುತ್ತಿವೆ. ಆದರೆ ಈ ಆದೇಶ ಟ್ಯೂಷನ್‌ ಸೆಂಟರ್‌ಗಳಿಗೆ ಬಾಧಕವಲ್ಲ  ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಅಧಿಸೂಚನೆಯಲ್ಲಿನ ನಿರ್ದೇಶನ ಗಳನ್ನು  ನಿಖರವಾಗಿ ಪಾಲಿಸುವಂತೆ ಶಿಕ್ಷಣ ಅಧಿಕಾರಿಗಳು ಎಚ್ಚರ ವಹಿಸಬೇಕು. ಅದನ್ನು ಉಲ್ಲಂಘಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಸಹಾಯಕ ನಿರ್ದೇಶಕ ಜೆಸ್ಸಿ ಜೋಸೆಫ್‌ ನೋಟೀಸ್‌ನಲ್ಲಿ  ತಿಳಿಸಿದ್ದಾರೆ.

Advertisement

ರ‌ಜಾ ಶಿಬಿರಕ್ಕೆ ಅನುಮತಿ ಅಗತ್ಯ 
ಬೇಸಗೆ ರಜೆಯಲ್ಲಿ  ಮಕ್ಕಳಿಗೆ ಶಾಲೆಗಳಲ್ಲಿ ಶಿಬಿರಗಳನ್ನು  ನಡೆಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ಅದರಂತೆ ರಜೆಯಲ್ಲಿ  ಗರಿಷ್ಠ  ಏಳು ದಿನಗಳ ಕಾಲ ಮಾತ್ರ ಎಂಬ ನಿಬಂಧನೆಯಲ್ಲಿ  ಆಯಾ ಉಪಜಿಲ್ಲಾ  ಶಿಕ್ಷಣಾಧಿಕಾರಿ ಮತ್ತು  ಜಿಲ್ಲಾ  ಶಿಕ್ಷಣಾಧಿಕಾರಿ ಯಿಂದ ಮುಂಗಡ ಅನುಮತಿಯನ್ನು  ಪಡೆದ ಬಳಿಕವಷ್ಟೇ ಶಿಬಿರಗಳನ್ನು  ನಡೆಸ ಬಹುದು. ಅನುಮತಿ ಪಡೆದ ಅನಂತರ ನಡೆಸುವ ಶಿಬಿರಗಳಿಗೆ ಅಧಿಕಾರಿಗಳು ನೇರವಾಗಿ ಭೇಟಿ ನೀಡಿ ಶಿಬಿರದಲ್ಲಿ  ಭಾಗವಹಿಸುವ ಮಕ್ಕಳಿಗೆ ಅಗತ್ಯದ ನೀರು, ಆಹಾರ, ಶೌಚಾಲಯ ಸಹಿತ ವಿವಿಧ ಮೂಲಭೂತ ಸೌಲಭ್ಯಗಳನ್ನು  ಒದಗಿಸಲಾಗಿದೆಯೇ ಎಂಬುದನ್ನು  ಖಾತರಿಪಡಿಸಬೇಕು. ಇಂತಹ ಶಿಬಿರಗಳನ್ನು  ನಡೆಸುವ ಸಂದರ್ಭದಲ್ಲಿ  ವಿದ್ಯಾರ್ಥಿಗಳಿಗೆ ಬಿಸಿಲಿನ ಆಘಾತ ಉಂಟಾಗದಂತೆ ಎಚ್ಚರ ವಹಿಸಲು ಶಾಲಾ ಅಧಿಕಾರಿಗಳು ಮತ್ತು  ಶಿಬಿರದ ಆಯೋಜಕರು ಗಮನಹರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next