Advertisement

ಮತಕ್ಷೇತ್ರಕ್ಕೊಂದು ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಾರ್ವಜನಿಕರ ಬೇಡಿಕೆ

03:47 PM Dec 20, 2019 | Team Udayavani |

ಯಾದಗಿರಿ: ಬಡ ಜನರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್‌ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮುಂದಾಗದೆ ಮತಕ್ಷೇತ್ರಕ್ಕೆ ಒಂದರಂತೆ ಕ್ಯಾಂಟೀನ್‌ ಆರಂಭಿಸುವ ಕುರಿತು ಚಿಂತನೆ ನಡೆಸಲಿ ಎನ್ನುವ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಡ

Advertisement

ಸಾಮಾನ್ಯವಾಗಿ ಖಾನಾವಳಿಗಳಲ್ಲಿ ಒಂದು ಊಟಕ್ಕೆ 60-70 ರೂ. ಪಾವತಿಸಬೇಕಾಗುತ್ತದೆ. ಇಲ್ಲಿ ಅನ್ನ ಸಾಂಬಾರ ಆದರೂ 10 ರೂ.ಗೆ ಸಿಗುತ್ತದೆ. ಇದು ಉತ್ತಮ ಯೋಜನೆ. ರಾಜಕೀಯ ಪಕ್ಷಗಳು ಯಾರೇ ಅಧಿಕಾರಕ್ಕೆ ಬರಲಿ. ಬಡವರ ಪರ ಯೋಜನೆಗಳು ಶಾಶ್ವತವಾಗಿ ನಡೆಯುವ ಕುರಿತು ಚಿಂತನೆ ನಡೆಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಯಾದಗಿರಿ ಜಿಲ್ಲೆ ಸುರಪುರ ಶಾಸಕ ನರಸಿಂಹ ನಾಯಕ ಹೆಸರು ಬದಲಾಯಿಸಿ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕರಣ ಮಾಡುವಂತೆ ಪ್ರಾಸ್ತಾವನೆ ಮುಂದಿಟ್ಟಿದ್ದಾರೆ ಎಂದು ಕಂದಾಯ ಖಾತೆ ಸಚಿವ ಆರ್‌.ಅಶೋಕ ಹೇಳಿದ್ದರಿಂದ ರಾಜ್ಯದ ಬಡ ಜನರಿಗೆ ಅನ್ನ ನೀಡುವ ಇಂದಿರಾ ಕ್ಯಾಂಟೀನ್‌ ರಾಜಕೀಯ ಕೆಸರೆರಚಾಟಕ್ಕೆ ಗುರಿಯಾಗಿದೆ.

ಯೋಜನೆ ಜಾರಿಗೊಳಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪರಸ್ಪರ ವಾಗ್ಯುದ್ದಕ್ಕೂ ಕಾರಣವಾಗಿದೆ. ಆದರೇ ಸ್ವತಃ ಸಿಎಂ ಯಡಿಯೂರಪ್ಪ ಅವರೇ ಹೆಸರು ಬದಲಾವಣೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ಇಂದಿರಾ ಕ್ಯಾಂಟೀನ್‌ ಗೊಂದಲ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಬಡ ಜನರಿಗೆ ಅಗ್ಗದ ದರದಲ್ಲಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ನೀಡುವ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ.

ಇದರಿಂದ ನಿತ್ಯ ಬಡವರು, ರೈತರು, ಕೂಲಿ ಕಾರ್ಮಿಕರು ಒಂದು ಹೊತ್ತು ಊಟ ಮಾಡಲು ಸಹಕಾರಿಯಾಗಿದೆ ಎನುತ್ತಾರೆ ಜನರು. ಈ ಹಿಂದೆ ಸರ್ಕಾರ ತಾಲೂಕಿಗೊಂದು ಕ್ಯಾಂಟೀನ್‌ ಆರಂಭಿಸುವುದಾಗಿ ಘೋಷಿಸಿತ್ತು. ಆದರೆ, ಯಾದಗಿರಿ ಜಿಲ್ಲಾ ಕೇಂದ್ರವೊಂದರಲ್ಲೇ ಕ್ಯಾಂಟೀನ್‌ ಆರಂಭವಾಗಿದೆ. ಶಹಾಪುರದಲ್ಲಿ ಖಾಸಗಿ ಕ್ಯಾಂಟೀನ್‌ ಇದೆ. ಸುರಪುರ ಮತ್ತು ಗುರುಮಠಕಲ್‌ ಭಾಗದಲ್ಲಿಯೂ ಬಡವರ ಅನುಕೂಲಕ್ಕೆ ಕ್ಯಾಂಟೀನ್‌ ಆರಂಭಿಸಬೇಕಿದೆ ಎನ್ನುವ ಒತ್ತಾಯ ಸಾರ್ವಜನಿಕರದ್ದಾಗಿದೆ. ಜಿಲ್ಲಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭವಾಗಿ 17 ತಿಂಗಳಾಗಿದೆ. ಇಲ್ಲಿ ನಿತ್ಯ ಬೆಳಗ್ಗೆ 5 ರೂ.ನೀಡಿ 500 ಜನರು ಉಪಹಾರ ಮತ್ತು 10 ರೂ. ಪಾವತಿಸಿ 1 ಸಾವಿರಕ್ಕೂ ಹೆಚ್ಚು ಜನರು ಉಪಯೋಗ ಪಡೆಯುತ್ತಿದ್ದಾರೆ. ಇದಕ್ಕೆ ಸ್ಥಳೀಯ ಸಂಸ್ಥೆ ಸಹಕಾರವೂ ಇದೆ.

Advertisement

ಮೊದಲ ಬಾರಿ ಕ್ಯಾಂಟೀನ್‌ನಲ್ಲಿ ಊಟಕ್ಕೆ ಬಂದಿದ್ದು, 10 ರೂ.ಗೆ ಅನ್ನ ಸಾಂಬಾರ ಸಿಗುತ್ತಿದೆ. ಪರವಾಗಿಲ್ಲ, ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಹೊರಗಡೆ ಪ್ಲೇಟ್‌ ಭಜ್ಜಿಗೆ 20 ರೂ.ನೀಡಬೇಕಾಗುತ್ತದೆ. ಇಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗುತ್ತದೆ. –ಸಾಬಣ್ಣ ಯಂಪಾಡ

  ಇದು ಉತ್ತಮ ಯೋಜನೆ ಜನರಿಗೆ ಉಪಯುಕ್ತವಾಗಿದೆ. ಹೆಸರು ಬದಲಾವಣೆ ಮಾಡುವ ವಿಚಾರ ಜನರಿಗೆ ಸಂಬಂಧವಿಲ್ಲ. ಊಟ ನಿಲ್ಲದೇ ನಿತ್ಯ ಬಡ ಜನರಿಗೆ ಆಹಾರ ದೊರೆಯುಂತಾಗಲಿ. ಇದು ಮಾತ್ರ ನಿಲ್ಲಬಾರದು .-ಮನೋಜ ಆಲೂರು

 

-ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next