ಬೀದರ: ಮಾರ್ಚ್‌ನಲ್ಲಿ ನಡೆಯುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ಹಾಗೂ
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಡೆಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಜ ಪಾಟೀಲ ಅವರು ಪರೀಕ್ಷಾ ಮುಖ್ಯಸ್ಥರಿಗೆ ತಾಕೀತು ಮಾಡಿದರು.
ನಗರದ ಜ್ಞಾನಸುಧಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಮುಖ್ಯ ಅಧಿಧೀಕ್ಷಕರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಜರಗುವ ಕಟ್ಟುನಿಟ್ಟಿನ ಪರೀಕ್ಷೆಗಳು ಇತರರಿಗೆ ಮಾದರಿಯಾಗಿವೆ. ಪರೀಕ್ಷೆ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ, ಸಮಯ ಪಾಲನೆಯತ್ತ ಗಮನ ಹರಿಸಬೇಕು ಎಂದರು. ಮಕ್ಕಳು, ಪಾಲಕರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು.
ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಇಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳನ್ನು ಸಂಪೂರ್ಣವಾಗಿ ನಿಷೇ ಧಿಸಬೇಕು. ವಿದ್ಯಾರ್ಥಿಗಳಿಗೆ ಅನಾನು ಕೂಲವಾಗದಂತೆ ಆಸನ ವ್ಯವಸ್ಥೆ ಏರ್ಪಡಿಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು.
ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಬಂದ್ ಆಗದಂತೆ ಎಚ್ಚರ ವಹಿಸಬೇಕು. ಅನುದಾನ ರಹಿತ ಕಾಲೇಜುಗಳ ಪರೀಕ್ಷಾ ಕೇಂದ್ರಕ್ಕೆ ಸರ್ಕಾರಿ- ಅನುದಾನಿತ ಕಾಲೇಜು ಪ್ರಾಚಾರ್ಯರು ಮುಖ್ಯಸ್ಥರಾಗಿರುತ್ತಾರೆ. ಒಂದು ಪರೀಕ್ಷಾ ಕೋಠಡಿಯಲ್ಲಿ ಗರಿಷ್ಠ 24ರಿಂದ 30 ವಿದ್ಯಾರ್ಥಿಗಳಿಗೆ ಕೂಡುವ ವ್ಯವಸ್ಥೆ ಇರಬೇಕು. ಪ್ರಶ್ನೆಪತ್ರಿಕೆ ಖರೀದಿ ಹಾಗೂ ಮಾರಾಟ ಮಹಾಪರಾಧವಾಗಿದ್ದು, ತಪ್ಪಿತಸ್ಥರಿಗೆ ಐದು ವರ್ಷ ಜೈಲು ಶಿಕ್ಷೆ ಖಂಡಿತ ಎಂದು ಹೇಳಿದರು.
ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಣಮಂತರಾವ ಮೈಲಾರಿ, ಪ್ರಧಾನ ಕಾರ್ಯದರ್ಶಿ ವಿಠಲದಾಸ ಪ್ಯಾಗೆ ಹಾಗೂ ಪ್ರಾಚಾರ್ಯರಾದ ನಂದಿಹಳ್ಳಿ, ಬಸವರಾಜ ಮಠಪತಿ ಪರೀಕ್ಷಾ ವ್ಯವಸ್ಥೆ ಕುರಿತು ಮಾತನಾಡಿದರು. ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಅಧೀಕ್ಷಕ ಸಂಗನಬಸವ, ಸಿಬ್ಬಂದಿ ಮಲ್ಲಿಕಾರ್ಜುನ ಕಡೋದೆ ಸೇರಿದಂತೆ ಜಿಲ್ಲೆಯ ಪರೀಕ್ಷಾ ಮುಖ್ಯಸ್ಥರು ಇದ್ದರು.