Advertisement

ಪಿಯು ಪರೀಕ್ಷೆ; 917 ವಿದ್ಯಾರ್ಥಿಗಳು ಗೈರು

05:19 AM Jun 19, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಗುರುವಾರ ನಡೆದ ಪಿಯು ದ್ವಿತೀಯ ವರ್ಷದ ಕೊನೆಯ ಇಂಗ್ಲಿಷ್‌ ಭಾಷೆಯ ಪರೀಕ್ಷೆಗೆ 917 ವಿದ್ಯಾರ್ಥಿಗಳು ಗೈರಾಗಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ 16, ಧಾರವಾಡದಲ್ಲಿ 17, ಕಲಘಟಗಿ ಮತ್ತು ನವಲಗುಂದದಲ್ಲಿ ತಲಾ 2 ಮತ್ತು ಕುಂದಗೋಳದಲ್ಲಿ 1 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ಜಿಲ್ಲೆಯಲ್ಲಿ 20,198 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದು ಪ್ರವೇಶ ಪತ್ರಗಳನ್ನು ಪಡೆದಿದ್ದರು. ಈ ಪೈಕಿ 19,281 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದು, 917 ವಿದ್ಯಾರ್ಥಿಗಳು ಗೈರಾದರು.

ನಿಗದಿತ ಸಮಯದಲ್ಲಿ ಮಾಸ್ಕ್ ಧರಿಸಿಕೊಂಡು ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಮುಗಿದ ನಿರಾಳತೆ ಕಂಡುಬಂದರೆ ಪೋಷಕರು ಕೇಂದ್ರದ ಹೊರಗಡೆ ಮಕ್ಕಳಿಗಾಗಿ ಕಾದು ನಿಂತಿದ್ದ ದೃಶ್ಯಗಳು ಕಂಡುಬಂದವು. ಕೆಲ ಪರೀಕ್ಷಾ ಕೇಂದ್ರಗಳ ಹೊರಗಡೆ ಸಾಮಾಜಿಕ ಅಂತರ ಕಂಡು ಬರಲೇ ಇಲ್ಲ.

ವಾಕರಸಾ ಸಂಸ್ಥೆಯಿಂದ ಉಚಿತವಾಗಿ ವಿದ್ಯಾರ್ಥಿಗಳ ಸಂಚಾರಕ್ಕಾಗಿ 300 ಬಸ್‌ ಗಳನ್ನು ಒದಗಿಸಲಾಗಿತ್ತು. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ಗೊಂದಲ, ಒತ್ತಡಗಳಿಲ್ಲದೆ ಪರೀಕ್ಷೆ ಬರೆದರು. ಪ್ರತಿ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಗಳು ಮತ್ತು ಕರ್ತವ್ಯ ನಿರತ ಸಿಬ್ಬಂದಿಗೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಮಾಸ್ಕ್, ಸ್ಯಾನಿಟೈಸರ್‌ ಪೂರೈಸಲಾಗಿತ್ತು. ಸಾಮಾಜಿಕ ಅಂತರದೊಂದಿಗೆ ಪರೀಕ್ಷೆಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಆರೋಗ್ಯದ ಸ್ಥಿತಿ ದಾಖಲಿಸಿಕೊಳ್ಳಲಾಯಿತು ಎಂದು ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಾರದಾ ಕಿರೇಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next