Advertisement

ಇಬ್ಬರು ವಿದ್ಯಾರ್ಥಿಗಳಲ್ಲಿ ದೇಹದ ಉಷ್ಣತೆ ಹೆಚ್ಚು: ಕೆಲಕಾಲ ಆತಂಕ

06:10 AM Jun 19, 2020 | Suhan S |

ಗದಗ: ಪಿಯು ಇಂಗ್ಲಿಷ್‌ ವಿಷಯದ ಪರೀಕ್ಷೆ ಬರೆಯಲು ಜೆಟಿ ಕಾಲೇಜಿಗೆ ಬಂದ ಇಬ್ಬರು ವಿದ್ಯಾರ್ಥಿಗಳಲ್ಲಿ ದೇಹದ ಉಷ್ಣತೆ ಹೆಚ್ಚು ಕಂಡು ಬಂದಿದ್ದರಿಂದ ಕೆಲಕಾಲ ಆತಂಕ ಮೂಡಿಸಿತು.

Advertisement

ನಗರದ ಹಾತಲಗೇರಿ ನಾಕಾದಲ್ಲಿರುವ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಗೆ ಹಾಜರಾಗಿದ್ದವರ ಪೈಕಿ ಇಬ್ಬರು ವಿದ್ಯಾರ್ಥಿಗಳಲ್ಲಿ ನಿಗದಿಗಿಂತ ಗರಿಷ್ಠ ಉಷ್ಣಾಂಶ ಕಂಡು ಬಂದಿತ್ತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪರೀಕ್ಷಾ ಕೇಂದ್ರಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. ಸದ್ಯ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ, ನಿರ್ಭಯವಾಗಿ ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳ ಮನವೊಲಿಸಿದರು.

ಈ ವಿದ್ಯಾರ್ಥಿಗಳು ಧಾರವಾಡ ಜಿಲ್ಲೆ ಅಣ್ಣಿಗೇರಿ ಕಾಲೇಜಿನವರಾಗಿದ್ದು, ಗದಗ ಜೆಟಿ ಕಾಲೇಜು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಪರೀಕ್ಷೆ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಸರಿಯಾಗಿ ಊಟ, ನಿದ್ರೆ ಮಾಡಿರದೇ ಜ್ವರ ಕಾಣಿಸಿಕೊಂಡಿರಬಹುದು. ಸದ್ಯಕ್ಕೆ ಪರೀಕ್ಷೆ ಎದುರಿಸಿ, ನಂತರ ಮನೆಯಲ್ಲಿ ಸ್ವಯಂ ಕ್ವಾರಂಟೈನ್‌ ನಲ್ಲಿರಬೇಕು. ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಭೇಟಿ ನೀಡುವಂತೆ ಸೂಚಿಸಿದ್ದಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದರು.

ಸಾಮಾಜಿಕ ಅಂತರ ಇರಲಿಲ್ಲ: ಜಿಲ್ಲೆಯಲ್ಲಿ ಗುರುವಾರ ನಡೆದ ಪಿಯು ಇಂಗ್ಲಿಷ್‌ ವಿಷಯದ ಪರೀಕ್ಷೆ ವೇಳೆ ಕೆಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕೆಂಬ ಆದೇಶವನ್ನು ಗಾಳಿಗೆ ತೂರಿದ್ದರೆ, ಇಲ್ಲಿನ ಮುನ್ಸಿಪಲ್‌ ಕಾಲೇಜು, ವಿಡಿಎಸ್‌ಟಿ ಹಾಗೂ ಜೆಟಿ ಕಾಲೇಜಿಗೆ ಆಗಮಿಸಿದ್ದ ಪರೀಕ್ಷಾರ್ಥಿಗಳ ಪೈಕಿ ಕೆಲವರು ಮಾಸ್ಕ್ ಇಲ್ಲದೇ ಪರದಾಡುವಂತಾಯಿತು. ಅಂತಹ ವಿದ್ಯಾರ್ಥಿಗಳಿಗೆ ಆಯಾ ಪರೀಕ್ಷಾ ಕೇಂದ್ರಗಳಿಂದಲೇ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next