ಬೆಂಗಳೂರು: ತಾನು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದುದನ್ನು ವಿರೋಧಿಸಿ ಬುದ್ಧಿಮಾತು ಹೇಳಿದ ತಂದೆಯನ್ನು ಬೆದರಿಸಲು ಆತ್ಮಹತ್ಯೆ ನಾಟಕವಾಡಲು ಯತ್ನಿಸಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮೈಸೂರು ರಸ್ತೆಯ ಬಾಪೂಜಿ ನಗರದಲ್ಲಿ ನಡೆದಿದೆ.
ರಮೇಶ್ ಎಂಬುವರ ಪುತ್ರಿ ಕೀರ್ತನಾ (19) ಮೃತ ದುರ್ದೈವಿ. ಕಾಲೇಜಿನಿಂದ ಬುಧವಾರ ತಡವಾಗಿ ಮನೆ ಬಂದ ಕೀರ್ತನಾಳಿಗೆ ಆಕೆಯ ಪೋಷಕರು ಬೈದಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿನಿಯು ತಮ್ಮ ಮನೆ ಸಮೀಪದಲ್ಲಿದ್ದ ಅಜ್ಜಿ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ತಮ್ಮ ಮನೆ ಪಕ್ಕದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕೀರ್ತನಾ ಇತ್ತೀಚೆಗೆ ಪ್ರತಿದಿನ ಕಾಲೇಜಿನಿಂದ ತಡವಾಗಿ ಮನೆಗೆ ಬರುತ್ತಿದ್ದಳು. ಇದಕ್ಕೆ ಆಕ್ಷೇಪಿಸಿದ್ದ ಆಕೆಯ ಪೋಷಕರು ಬುದ್ಧಿಮಾತು ಹೇಳಿದರೂ ಪ್ರಯೋಜನವಾಗಿರಲಿಲ್ಲ.
ಪುತ್ರಿಯ ವರ್ತನೆಯಿಂದ ಅನುಮಾನಗೊಂಡ ಕೀರ್ತನಾಳ ತಂದೆ ರಮೇಶ್, ಆಕೆಯ ಸಹಪಾಠಿಗಳು ಸೇರಿದಂತೆ ಕೆಲವರಲ್ಲಿ ವಿಚಾರಿಸಿದಾಗ ಮಗಳ ಪ್ರೇಮ ಸಂಗತಿ ಗೊತ್ತಾಗಿದೆ. ಇದರಿಂದ ಕೋಪಗೊಂಡ ಅವರು, ಮಗಳಿಗೆ ಕಾಲೇಜಿನಿಂದ ತಡವಾಗಿ ಬರಬಾರದು ಎಂದು ತಾಕೀತು ಮಾಡಿದ್ದರು. ಅದೇ ರೀತಿ ಬುಧವಾರ ಸಹ ಮಗಳಿಗೆ ಅವರು ಬೈದಿದ್ದಾರೆ.
ಇದರಿಂದ ಬೇಸರಗೊಂಡ ಆಕೆ, ಸನಿಹದಲ್ಲೇ ಅಜ್ಜಿ ಮನೆಗೆ ಹೋಗಿ ಪೋಷಕರನ್ನು ಬೆದರಿಸಲು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೆಲ ಹೊತ್ತಿನ ಬಳಿಕ ಮಗಳ ಸಂತೈಸಲು ರಮೇಶ್ ಅವರು ಅಲ್ಲಿಗೆ ಬಂದಾಗ ಕೀರ್ತನಾ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿ ದ್ದಳು.
ಕೂಡಲೇ ಆಕೆಯನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅಕೆ ಕೊನೆಯುಸಿರೆಳೆದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.