ಬೆಂಗಳೂರು: ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ 2019-20ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿವೆ. ಮೇ 20ರಿಂದ ಸರ್ಕಾರಿ ಹಾಗೂ ಅನುದಾನಿತ ಪಿಯುಸಿ ಕಾಲೇಜುಗಳು ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಿವೆ.
ಅಲ್ಲದೆ, ಪ್ರಥಮ ಪಿಯುಸಿಗೆ ದಾಖಲಾತಿ ಪ್ರಕ್ರಿಯೆ ಕೂಡ ಈ ವೇಳೆ ನಡೆಯಲಿದೆ. ಶುದ್ಧ ಕುಡಿಯುವ ನೀರಿನ ಕೊರತೆ, ಮೌಲ್ಯಮಾಪಕರಿಗೆ ವೇತನ ನೀಡದೆ ಇರುವುದು ಸೇರಿದಂತೆ ಹಲವು ಸಮಸ್ಯೆಗಳು ಪದವಿಪೂರ್ವ ಇಲಾಖೆಯ ಮುಂದಿದೆ.
ವಿದ್ಯಾರ್ಥಿಗಳು ಪಠ್ಯಪುಸ್ತಕ ಸಮಸ್ಯೆಯನ್ನು ಎದುರಿಸಬೇಕಿದೆ. ತರಗತಿಗಳು ಬೆಳಗ್ಗೆ ಆರಂಭವಾಗಿ ಸಂಜೆಯವರೆಗೂ ನಡೆಯುವುದರಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪವೂ ಹೆಚ್ಚಿದೆ. ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಇಲಾಖೆ, 2019-20ನೇ ಸಾಲಿನ ತರಗತಿಗಳನ್ನು ಆರಂಭಿಸುತ್ತಿದೆ.
ಈಗಾಗಲೇ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 20ರಿಂದಲೇ ತರಗತಿಗಳು ಆರಂಭವಾಗಲಿವೆ. ನಂತರ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆಗಿಂದಾಗ್ಗೆ ಸೇರಿಕೊಳ್ಳುತ್ತಿರುತ್ತಾರೆ.
ದಾಖಲಾತಿ ಆಂದೋಲನ ಕೂಡ ವ್ಯಾಪಕವಾಗಿ ರಾಜ್ಯಾದ್ಯಂತ ನಡೆಯುತ್ತಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶದ ಪಿಯು ಕಾಲೇಜಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಜತೆಗೆ, ಉಪನ್ಯಾಸಕರ ವೇತನ ತಾರತಮ್ಯ, ವರ್ಗಾವಣೆ ಸಮಸ್ಯೆ, ಮುಂಬಡ್ತಿ ಇತ್ಯಾದಿ ಯಾವ ಸಮಸ್ಯೆಯೂ ಬಗೆಹರಿದಿಲ್ಲ.
ಸರ್ಕಾರದ ಅಧಿಕಾರಿಗಳು ಸಭೆ ಕರೆಯುತ್ತಾರೆ. ಆದರೆ, ಯಾವುದೇ ಫಲಿತಾಂಶ ಬರುವುದಿಲ್ಲ. 2008ರ ನಂತರ ಎಕ್ಸ್-ಗ್ರೇಸಿಯಾ ನೀಡಿಲ್ಲ ಎಂದು ಸರ್ಕಾರಿ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.