Advertisement

ಪಿಯು,ಎಸೆಸೆಲ್ಸಿ ಮಂಡಳಿ ವಿಲೀನ?

01:46 AM May 23, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರವಿದ್ದಾಗ ರೂಪಿಸಿದ್ದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿಪೂರ್ವ ಶಿಕ್ಷಣ ಮಂಡಳಿಗಳ ವಿಲೀನ ಪ್ರಸ್ತಾವನೆಗೆ ಈಗ ಬಿಜೆಪಿ ಸರಕಾರದಿಂದ ಮರುಜೀವ ಲಭಿಸಿದೆ.

Advertisement

ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವ ಸುರೇಶ್‌ ಕುಮಾರ್‌ ಈ ವಿಚಾರವನ್ನು ಮಂಡಿಸಿದ್ದಾರೆ.

ರಾಜ್ಯದ ಪ್ರೌಢ ಮತ್ತು ಪಿಯುಸಿ ಪರೀಕ್ಷಾ ವ್ಯವಸ್ಥೆಗಳನ್ನು ಇನ್ನಷ್ಟು ಸಶಕ್ತವಾಗಿಸುವ ಉದ್ದೇಶದಿಂದ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಮಂಡಳಿಗಳನ್ನು ವಿಲೀನ  ಗೊಳಿಸಿ ಒಂದೇ ಪರೀಕ್ಷಾ ಮಂಡಳಿಯನ್ನು ಅಸ್ತಿತ್ವಕ್ಕೆ ತರಲು ಉದ್ದೇ ಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಸಿಎಂ ಗಮನಕ್ಕೆ ತಂದಿದ್ದಾರೆ.

ವೆಚ್ಚ ಕಡಿಮೆ ಮಾಡುವ ತಂತ್ರ
ಪ್ರತೀ ವರ್ಷ ಸುಮಾರು 8 ಲಕ್ಷ ವಿದ್ಯಾರ್ಥಿ ಗಳಿಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸೆಸೆಲ್ಸಿ ಪರೀಕ್ಷೆ ನಡೆಸುತ್ತದೆ. ಸುಮಾರು 6 ಲಕ್ಷ ವಿದ್ಯಾರ್ಥಿಗಳಿಗೆ ಪ.ಪೂ. ಶಿಕ್ಷಣ ಇಲಾಖೆ ಪರೀಕ್ಷೆ ನಡೆಸುತ್ತದೆ. ಎರಡೂ ಪ್ರತ್ಯೇಕ ಪರೀಕ್ಷೆಗಳ ಜತೆಗೆ ಎಲ್ಲ ವ್ಯವಸ್ಥೆಗಳನ್ನು ಪ್ರತ್ಯೇಕ ವಾಗಿ ಮಾಡಲಾಗುತ್ತದೆ. ಇದಕ್ಕೆ ಕೋಟ್ಯಂ ತರ ರೂ. ವ್ಯಯವಾಗುತ್ತದೆ. ಪ್ರಶ್ನೆಪತ್ರಿಕೆ ಭದ್ರತೆ, ಪರೀಕ್ಷಾ ಸುರಕ್ಷೆ, ಮೌಲ್ಯಮಾಪನ, ಫಲಿ ತಾಂಶ ಎಲ್ಲವೂ ಬೇರೆ ಬೇರೆಯಾಗಿ ನಡೆಯುವುದ ರಿಂದ ವೆಚ್ಚವೂ ಅಧಿಕ.

ಈ ಹಿನ್ನೆಲೆಯಲ್ಲಿ ಎರಡೂ ಮಂಡಳಿ ವಿಲೀನಗೊಳಿಸಿ ವೆಚ್ಚ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಕೆಇಎಯೂ ಸೇರಲಿದೆಯೇ?
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪ್ರತ್ಯೇಕ ಪ್ರಾಧಿಕಾರವಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಈ ಹಿಂದೆ ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ ಮೊದಲಾದ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತಿತ್ತು. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್‌ ಪ್ರತ್ಯೇಕವಾಗಿ ನಡೆಸುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಕೃಷಿ, ಪಶುವೈದ್ಯ ವಿಜ್ಞಾನ, ಬಿ-ಫಾರ್ಮಾ, ಬಿ-ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ನಡೆಸುತ್ತಿದೆ. ಇಲ್ಲಿ ಹಣದ ಹರಿವು ಹೆಚ್ಚಿರುವುದರಿಂದ ಅದರ ನಿಯಂತ್ರಣಕ್ಕಾಗಿ ಎಸೆಸೆಲ್ಸಿ- ಪಿಯು ಮಂಡಳಿ ವಿಲೀನ ಸಂದರ್ಭದಲ್ಲಿ ಇದನ್ನೂ ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಏಕರೂಪ ಪರಿಕ್ಷಾ ವ್ಯವಸ್ಥೆ
ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಸ್ವರೂಪದಲ್ಲಿ ಸಾಕಷ್ಟು ಭಿನ್ನತೆಗಳು ಇವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ವ್ಯಾಪ್ತಿಯೊಳಗೆ ಈ ಎರಡೂ ಮಂಡಳಿಗಳು ಬರುತ್ತವೆ. ಎಸೆಸೆಲ್ಸಿ ಬೋರ್ಡ್‌ ಸಾಕಷ್ಟು ಸಮರ್ಥವಾಗಿದೆ ಮತ್ತು ಜಿಲ್ಲಾ ಮಟ್ಟದಲ್ಲಿ ಸದೃಢವಾಗಿದೆ. ಆದರೆ ಪಿಯು ಮಂಡಳಿಯು ಜಿಲ್ಲಾಮಟ್ಟದಲ್ಲಿ ಸಮರ್ಥವಾಗಿಲ್ಲ. ಸಿಬಂದಿ ಕೊರತೆ ಹೆಚ್ಚಿದೆ. ಹೀಗಾಗಿ ಏಕರೂಪ ಪರೀಕ್ಷಾ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಈ ಎರಡು ಮಂಡಳಿಗಳ ವಿಲೀನಕ್ಕೆ ಸರಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ವಿಲೀನದ ಸಾಧಕ-ಬಾಧಕಗಳ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಈಗಾಗಲೇ ಸಚಿವರು ಸೂಚನೆ ನೀಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ವಿಸ್ತೃತ ಪ್ರಸ್ತಾವನೆ ಸರಕಾರದ ಕೈಸೇರುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಸರಕಾರದ ಪ್ರಸ್ತಾವವಿದು
ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ರೂಪಿಸಿತ್ತು. ಇದೇ ಮಾದರಿಯಲ್ಲಿ 2017ರಲ್ಲಿ ಆಗಿನ ಶಿಕ್ಷಣ ಸಚಿವ ತನ್ವೀರ್‌ ಸೇಠ್ ಪರೀಕ್ಷಾ ಮಂಡಳಿ ವಿಲೀನದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು.

ಎಸೆಸೆಲ್ಸಿ ಬೋರ್ಡ್‌ ಜತೆಗೆ ಪಿಯುಸಿ ಪರೀಕ್ಷೆ ನಡೆಸುವ ವಿಭಾಗವನ್ನು ಮಾತ್ರ ವಿಲೀನಗೊಳಿಸಿ, ಆಡಳಿತಾತ್ಮಕ ವ್ಯವಸ್ಥೆಯನ್ನು ಪಿಯು ಇಲಾಖೆ ಮುಂದುವರಿಸುತ್ತದೆ. ಇದರಿಂದ ಹಣಕಾಸಿನ ವಿಚಾರದಲ್ಲೂ ಹೊರೆ ಯಾಗುವುದಿಲ್ಲ. ಎರಡು ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಿದೆ.
-ಸುರೇಶ್‌ ಕುಮಾರ್‌,
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next