ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಮೂಲ ಪ್ರತಿಯನ್ನು ಆನ್‌ಲೈನ್‌ನಲ್ಲೇ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಡಿಜಿಟಲ್ ಲಾಕರ್ ಬಳಸಿಕೊಂಡು ಆನ್‌ಲೈನ್ ಮೂಲಕವೇ ಅಂಕಪಟ್ಟಿ ಪಡೆಯಬಹುದಾದ ವ್ಯವಸ್ಥೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಕಲ್ಪಿಸಿದೆ.
ಕೇಂದ್ರ ಸರ್ಕಾರದ ಡಿಜಿಲಾಕರ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ನೀಡಲಾಗುವುದು. ಎಲ್ಲ ರೀತಿಯ ಭದ್ರತೆಯನ್ನು ಒದಗಿಸಲಾಗಿದೆ. ಇಲ್ಲಿ ನಕಲು ಮಾಡಲು ಸಾಧ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2018ರ ಮಾರ್ಚ್‌ನಿಂದ 2019ರ ಮಾರ್ಚ್ ಅವಧಿಯಲ್ಲಿ ದ್ವಿತೀಯ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ಗೆ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ಬಳಸಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಲಾಗಿನ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆ ಅಳವಡಿಸಬೇಕು.
ಮೊಬೈಲ್‌ಗೆ ಒನ್ ಟೈಮ್ ಪಾಸ್‌ವರ್ಡ್(ಒಟಿಪಿ) ಬರುತ್ತದೆ. ನಂತರ ವಿದ್ಯಾರ್ಥಿ ತನ್ನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿ ಡಿಜಿಲಾಕರ್‌ನಿಂದ ಅಂಕಪಟ್ಟಿ ಪಡೆಯಬಹುದು. ಆಧಾರ್ ಸಂಖ್ಯೆಯನ್ನು ಡಿಜಿಲಾಕರ್‌ನೊಂದಿಗೆ ಜೋಡಿಸಿದ ನಂತರವಷ್ಟೇ ಅಂಕಪಟ್ಟಿ ಸಿಗಲಿದೆ.
ಒಬ್ಬರ ಅಂಕಪಟ್ಟಿಯನ್ನು ಇನ್ನೊಬ್ಬರು ಡೌನ್‌ಲೋಡ್ ಮಾಡಿಕೊಳ್ಳದಂತೆ ಹಾಗೂ ನಕಲು ಮಾಡಲು ಸಾಧ್ಯವಾಗದಂತೆ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿ ತನ್ನ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹಾಕಿದರೆ ಮಾತ್ರ ಡಿಜಿಲಾಕರ್‌ನಲ್ಲಿರುವ ಅಂಕಪಟ್ಟಿ ಸಿಗುತ್ತದೆ. ಮಾಹಿತಿಗಾಗಿ ಪಿಯು ಇಲಾಖೆಯ ವೆಬ್‌ಸೈಟ್ //pue.kar.nic.in/ ಅಥವಾ https://digilocker.gov.in/ ನೋಡಬಹುದಾಗಿದೆ.