Advertisement

ಪಿಯು ಅಂಕಪಟ್ಟಿ ಆನ್‌ಲೈನ್‌?:ನಕಲು ತಪ್ಪಿಸಲು ಈ ಕ್ರಮ

06:00 AM Oct 23, 2017 | Team Udayavani |

ಬೆಂಗಳೂರು: ನಕಲಿ ಅಂಕಪಟ್ಟಿ ಹಾವಳಿ ನಿಯಂತ್ರಿಸುವ ಹಾಗೂ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗದ ಮೇಲೆ ನಿಗಾ ವಹಿಸುವ ದೃಷ್ಟಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಆನ್‌ಲೈನ್‌ ಮೂಲಕವೇ ವಿತರಿಸಲು ಬೇಕಾದ ದತ್ತಾಂಶ ಕ್ರೋಢೀಕರಿಸುವ ವ್ಯವಸ್ಥೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿದೆ.

Advertisement

ಈ ವ್ಯವಸ್ಥೆಯಡಿ ದ್ವಿತೀಯ ಪಿಯುಸಿ ಅಂಕಪಟ್ಟಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವುದು ಮಾತ್ರವಲ್ಲದೆ, ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಜೀವನದ ಸಂಪೂರ್ಣ ಮಾಹಿತಿ “ಟ್ರ್ಯಾಕ್ ರೆಕಾರ್ಡ್‌’ ಸಂಗ್ರಹ ಮಾಡುವುದು ಇದರ ಮೂಲ ಉದ್ದೇಶ.

ದತ್ತಾಂತ ಕ್ರೋಢೀಕರಣದಿಂದ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪತ್ರ, ಈ ಹಿಂದೆ ವ್ಯಾಸಂಗ ಮಾಡಿದ ಶಾಲೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಶಾಲೆ ಸೇರಿದಂತೆ ವಿದ್ಯಾರ್ಥಿಯ ಶೈಕ್ಷಣಿಕ ಮತ್ತು ವೈಯಕ್ತಿಕ ಸಮಗ್ರ ಮಾಹಿತಿ ಸಂಗ್ರಹವಾಗಲಿದೆ. ಹೀಗಾಗಿ, ರಾಜ್ಯದಲ್ಲಿ ಯಾವುದೇ ವಿದ್ಯಾರ್ಥಿ ಏನು ಮಾಡುತ್ತಿದ್ದಾನೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ.

ಡ್ರಾಪ್‌ಔಟ್‌ ಪತ್ತೆ ಸುಲಭ: ಈ ವ್ಯವಸ್ಥೆಯಿಂದ ಪ್ರಥಮ ಪಿಯುಸಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ಸೇರಿದ್ದಾರೋ, ಇಲ್ಲವೋ ಎನ್ನುವ ಮಾಹಿತಿ ದಾಖಲಾತಿಯ ಸಂದರ್ಭದಲ್ಲೇ ತಿಳಿಯುತ್ತದೆ. ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆಗೊಂಡಿರುವ ವಿದ್ಯಾರ್ಥಿಯ ಮಾಹಿತಿಯೂ ಸುಲಭವಾಗಿ ಸಿಗಲಿದೆ.

ಜತೆಗೆ ಪಿಯುಸಿ ನಂತರ  ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕಾಲೇಜಿನಿಂದ ಹೊರಗೆ ಉಳಿಯಲು ಕಾರಣ ಏನು ಎಂಬುದನ್ನು ಪೋಷಕರೊಂದಿಗೆ ಮಾತುಕತೆ ನಡೆಸಲು ಸಹಕಾರಿಯಾಗಲಿದೆ. ಪದವಿ ಶಿಕ್ಷಣ ಪ್ರಮಾಣ ಹೆಚ್ಚಿಸುವ ಉದ್ದೇಶವೂ  ಇದರಲ್ಲಿ ಸೇರಿದೆ ಎಂದು ಪಿಯು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಆನ್‌ಲೈನ್‌ ಪೋರ್ಟಲ್‌: ಭವಿಷ್ಯದ ಹಲವು ಯೋಜನೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಭದ್ರತೆ, ಅಂಕಪಟ್ಟಿ ನಕಲು ತಡೆ ಸೇರಿದಂತೆ ವಿವಿಧ ಭದ್ರತಾ ಕ್ರಮಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ದತ್ತಾಂಶ ಕ್ರೋಢೀಕರಿಸುವ ವ್ಯವಸ್ಥೆಯನ್ನು ಆರಂಭಿಸಿದ್ದು, //www.kar.nic.in  ನಲ್ಲಿ ಆನ್‌ಲೈನ್‌ ಪೋರ್ಟಲ್‌ ತೆರೆಯಲಾಗಿದೆ. ಲಾಗಿನ್‌ ಐಡಿಯನ್ನು ನೀಡಲಾಗಿದೆ. ಯೂಸರ್‌ ನೇಮ್‌, ಪಾಸ್‌ವರ್ಡ್‌ ಜತೆಗೆ ಸಿಕ್ರೇಟ್‌ ಕೀ ಕೂಡ ನೀಡಲಾಗಿದೆ. ವಿದ್ಯಾರ್ಥಿಗಳ ಮಾಹಿತಿ ಇಲಾಖೆಗೆ ಹಾಗೂ ಕಾಲೇಜಿಗೆ ಹೊರತುಪಡಿಸಿ ಬೇರೆ ಯಾರಿಗೂ ಸಿಗದ ರೀತಿಯಲ್ಲಿ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

ಹೊಸದಾಗಿ ಆರಂಭವಾದ ಮತ್ತು ಈಗಾಗಲೇ ಇರುವ ಎಲ್ಲಾ ಪಿಯು ಕಾಲೇಜುಗಳಿಗೂ ಈ ಪೋರ್ಟಲ್‌ನಲ್ಲಿ ನೋಂದಾಣಿ ಮಾಡಿಕೊಳ್ಳಲು ಸೂಚಿಸಲಾಗಿದೆ.ಈಗಾಗಲೇ ನೋಂದಾಣಿ ಮಾಡಿಕೊಂಡಿರುವ ಕಾಲೇಜಿನವರು ವಿದ್ಯಾರ್ಥಿಗಳ ನಿಖರ ಮಾಹಿತಿಯನ್ನು ಅಪ್‌ಡೇಟ್‌ ಮಾಡಲು ಆದೇಶ ನೀಡಿದೆ. 2016-17ನೇ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ  ಪಡೆದು, ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಆನ್‌ಲೈನ್‌ ಮಾಹಿತಿ ಸಂಗ್ರಹಣೆ ಬಹುತೇಕ ಪೂರ್ಣಗೊಂಡಿದೆ. ಎಸ್ಸೆಸ್ಸೆಲ್ಸಿ ಆಂಕಪಟ್ಟಿ ಆಧಾರದಲ್ಲೇ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ.

ಒಂದೊಮ್ಮೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿಯೇ ಮಾಹಿತಿ ತಪ್ಪಿದ್ದಲ್ಲಿ, ಅದನ್ನು ಎಸ್ಸೆಸ್ಸೆಲ್ಸಿ ಬೋರ್ಡ್‌ನ ಗಮನಕ್ಕೆ ತಂದು, ಮಾಹಿತಿ ಸರಿಪಡಿಸಿರುವ ಬಗ್ಗೆ ವಿದ್ಯಾರ್ಥಿಯು ದೃಢೀಕೃತ ಪತ್ರ ನೀಡಿದ ನಂತರವೇ ಅಪ್‌ಲೋಡ್‌ ಮಾಡಬೇಕು ಎಂಬ ಖಡಕ್‌ ನಿರ್ದೇಶನವನ್ನು ಪಿಯು ಕಾಲೇಜಿಗೆ ನೀಡಲಾಗಿದೆ.

ಪಿಯುಸಿ ಪಾಸಾದ ವಿದ್ಯಾರ್ಥಿಗಳು ಪದವಿ ಅಥವಾ ವೃತ್ತಿಪರ ಕೋರ್ಸ್‌ಗೆ ಸೇರುವ ಮೊದಲೇ ವಿಳಂಬ ಆಗದಂತೆ ಅಂಕಪಟ್ಟಿ ವಿತರಣೆ ಮಾಡುವ ಯೋಜನೆಯನ್ನು ಹೊಂದಿದೆ. ತುರ್ತು ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಸುಲಭವಾಗಿ ಪಡೆಯಬಹುದಾದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅಂಕಪಟ್ಟಿಯನ್ನು ಆನ್‌ಲೈನ್‌ ಮೂಲಕ ವಿತರಣೆ  ಮಾಡುವುದರಿಂದಾಗ ಬಹುದಾದ ಆಗುಹೋಗುಗಳನ್ನು ತಿಳಿಯಲು ಇಲಾಖೆಯ ಅಧಿಕಾರಿಗಳು ರಾಷ್ಟ್ರ ಮಟ್ಟದ ಭ್ರದತಾ ಸಂಸ್ಥೆಗಳೊಂದಿಗೂ ಸಮಾಲೋಚನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ದತ್ತಾಂಶ ಕ್ರೋಢೀಕರಣ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಿದ್ದೇವೆ.  ಎಲ್ಲವನ್ನು ಆನ್‌ಲೈನ್‌ ಮಾಡುತ್ತಿದ್ದು, ಅಂಕಪಟ್ಟಿಯನ್ನು ಆನ್‌ಲೈನ್‌ ಮೂಲಕ ನೀಡುವ ಯೋಜನೆ ಇದೆ. ಆದರೆ, ಈ ಸಂಬಂಧ ಯಾವುದೇ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ.
-ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next