Advertisement

ಕನ್ನಡ ಮಾಧ್ಯಮದಲ್ಲಿ ಪಿಯು ವಿಜ್ಞಾನ ಪುಸ್ತಕ

06:00 AM Apr 07, 2018 | |

ಬೆಂಗಳೂರು: ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಪಿಯುನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಲು ಇನ್ಮುಂದೆ ಯಾವುದೇ ಆತಂಕ ಪಡಬೇಕಾಗಿಲ್ಲ. ನಿರ್ಭೀತಿಯಿಂದ ವಿಜ್ಞಾನ ವಿಭಾಗ ಸೇರಿಕೊಂಡು, ಮಾತೃಭಾಷೆಯಲ್ಲೇ
ಅಧ್ಯಯನ ಮಾಡಬಹುದು. ಕಾರಣ, ಮುಂದಿನ ಶೈಕ್ಷಣಿಕ ವರ್ಷದಿಂದ (2018-19) ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜ್ಞಾನ ವಿಭಾಗದ ಎನ್‌ಸಿಆರ್‌ಟಿ ಪಠ್ಯಪುಸ್ತಕವನ್ನು ಇಂಗ್ಲಿಷ್‌ ಮಾಧ್ಯಮದ ಜತೆಗೆ ಕನ್ನಡ ಮಾಧ್ಯಮದಲ್ಲೂ ಮುದ್ರಿಸಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕಾಗಿ ಅಥವಾ ಕಠಿಣ ವಿಷಯಗಳನ್ನು ಮಾತೃ ಭಾಷೆಯಲ್ಲಿ ಅರ್ಥೈಸಿಕೊಳ್ಳಲು ಕನ್ನಡ ಮಾಧ್ಯಮದ ವಿಜ್ಞಾನ
ಪಠ್ಯಪುಸ್ತಕ ಉಪಯೋಗವಾಗಲಿದೆ.

Advertisement

ವಿಜ್ಞಾನ ಬಹುತೇಕ ಪುಸ್ತಕಗಳು ಆಂಗ್ಲ ಮಾಧ್ಯಮದಲ್ಲೇ ಇದ್ದು, ಕನ್ನಡದಲ್ಲಿ ಇರುವುದು ಅತಿ ವಿರಳ. ಮುಂದಿನ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಜ್ಞಾನ ವಿಷಯದ ಪುಸ್ತಕಗಳು ಈಗಾಗಲೇ ಮುದ್ರಣ ಹಂತದಲ್ಲಿದೆ. ಆಂಗ್ಲ ಮಾಧ್ಯಮದ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕನ್ನಡ ಮಾಧ್ಯಮದ ವಿಜ್ಞಾನ ಪುಸ್ತಕ ಮುಂದಿನ 15 ದಿನದಲ್ಲಿ ವಿದ್ಯಾರ್ಥಿ
ಗಳಿಗೆ ಲಭ್ಯವಾಗಲಿದೆ ಎಂದು ಇಲಾಖೆಯ ಅಧಿಕಾರಿ ಗಳು “ಉದಯವಾಣಿ’ಗೆ ಖಚಿತಪಡಿಸಿದ್ದಾರೆ. 

ಪ್ರಸ್ತುತ ರಾಜ್ಯದ ಯಾವುದೇ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಕನ್ನಡದಲ್ಲಿ ಮಾಧ್ಯಮದಲ್ಲಿ ಕಲಿಸುವ ವ್ಯವಸ್ಥೆ ಇಲ್ಲ. ವಿಜ್ಞಾನ ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳು ಅಂಗ್ಲ ಮಾಧ್ಯಮದಲ್ಲೇ ಅಧ್ಯಯನ ಮಾಡಬೇಕಿತ್ತು. ಇದೀಗ ಕನ್ನಡ ಮಾಧ್ಯಮದ ವಿಜ್ಞಾನ ಪುಸ್ತಕ ಹೊರ ಬರುತ್ತಿರುವುದರಿಂದ ಬಹುತೇಕ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿದೆ. 

2013-14ರಿಂದಲೇ ಈ ಪ್ರಕ್ರಿಯೆ ಆರಂಭವಾಗಿತ್ತು. ವಿಜ್ಞಾನ ಪುಸ್ತಕಗಳನ್ನು ಕನ್ನಡ ಮಾಧ್ಯಮಕ್ಕೆ ಭಾಷಾಂತರಿಸುವ ಕಾರ್ಯವನ್ನು ರಾಜ್ಯದ ವಿಶ್ವವಿದ್ಯಾಲಯವೊಂದಕ್ಕೆ ನೀಡಲಾಗಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ಭಾಷಾಂತರ ಕಾರ್ಯ ಪೂರ್ಣಗೊಂಡಿರಲಿಲ್ಲ. ಆದರೆ, ಮುಂದಿನ ವರ್ಷದಿಂದ ರಾಜ್ಯದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿಜ್ಞಾನ ವಿಷಯಕ್ಕೆ ಆಕರ್ಷಿಸುವ ದೃಷ್ಟಿಯಿಂದ ವಿವಿಧ ಕಾಲೇಜುಗಳಲ್ಲಿರುವ ವಿಜ್ಞಾನ ಪ್ರಾಧ್ಯಾಪಕರ, ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಮೇಲೆ ಉತ್ತಮ ಹಿಡಿತ ಇರುವ ಪ್ರಾಧ್ಯಾಪಕರ ಸಹಕಾರದೊಂದಿಗೆ ಭಾಷಾಂತರ ಕಾರ್ಯ ಮಾಡಿಸಲಾಗಿದೆ. ಭಾಷಾಂತರ ಕಾರ್ಯ ಈಗಾಗಲೇ
ಪೂರ್ಣಗೊಂಡಿದ್ದು, ಮುದ್ರಣಕ್ಕೆ ಹೋಗಿದೆ.

ಕಾಲೇಜಿನಲ್ಲೇ ಲಭ್ಯ
ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕವನ್ನು ಪದವಿ ಪೂರ್ವ ಇಲಾಖೆಯಿಂದ ನೇರವಾಗಿ ಕಾಲೇಜುಗಳಿಗೆ ಕಳುಹಿಸಿಕೊಡಲಿದೆ.
ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯ ದಲ್ಲಿ ಇದರ ಅಧ್ಯಯನ ಮಾಡಬಹುದಾಗಿದೆ. ಪ್ರಥಮ ಹಾಗೂ ದ್ವಿತೀಯ ಪಿಯು 
ಭೌತಶಾ, ರಸಾಯಶಾಸ್ತ್ರ, ಗಣಿತ, ಜೀವಶಾಸ್ತ್ರ (ಪಿಸಿಎಂಬಿ) ವಿಷಯದ ಪಠ್ಯಪುಸ್ತಗಳು ಕನ್ನಡ ಮಾಧ್ಯಮದಲ್ಲಿ
ಲಭ್ಯವಿರಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next