Advertisement

ಪಿಯುಸಿ ಫ‌ಲಿತಾಂಶ ಗುಣಾತ್ಮಕ ಮನಸ್ಥಿತಿ ಮುಖ್ಯ

03:15 AM Jul 15, 2020 | Hari Prasad |

ಜುಲೈ 18ರ ಹೊತ್ತಿಗೆ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳ ಫ‌ಲಿತಾಂಶ ನಾಲ್ಕು ದಿನ ಮುಂಚೆಯೇ ಹೊರಬಿದ್ದಿದೆ.

Advertisement

ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿರುವ ಪಿಯುಸಿ ಫ‌ಲಿತಾಂಶವು ಈ ಬಾರಿ ಕೋವಿಡ್‌-19 ಬಿಕ್ಕಟ್ಟಿನ ನಡುವೆಯೇ ಬಂದಿದೆ.

ಗಮನಾರ್ಹ ಸಂಗತಿಯೆಂದರೆ, ಕಳೆದ ಬಾರಿಗಿಂತ ಈ ವರ್ಷ ಫ‌ಲಿತಾಂಶದಲ್ಲಿ ಹೆಚ್ಚಳ ಕಂಡುಬಂದಿರುವುದು. ಮತ್ತೆ ಎಂದಿನಂತೆ ಬಾಲಕಿಯರೇ ಪಿಯುಸಿಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಉಡುಪಿ ಈ ಬಾರಿಯೂ ಪ್ರಥಮ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಮತ್ತು ಕೊಡಗು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ಗಮನಾರ್ಹವಾಗಿ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರು ಆರು ಪ್ರಮುಖ ರ್‍ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆನ್ನುವುದು ಶ್ಲಾಘನೀಯ ವಿಚಾರ.

ಇನ್ನೊಂದೆಡೆ ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನಗಳಲ್ಲಿರುವುದು ಬೇಸರದ ವಿಷಯ. ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಾದ ಅಗತ್ಯವನ್ನು ಇದು ಸಾರುತ್ತಿದೆ.

Advertisement

ಇದೇ ವೇಳೆಯಲ್ಲೇ, ಅನೇಕ ವಿದ್ಯಾರ್ಥಿಗಳು ಯಾವುದೋ ಕಾರಣಕ್ಕೆ ನಪಾಸಾಗಿದ್ದಾರೆ ಅಥವಾ ಅವರು ನಿರೀಕ್ಷಿಸಿದಷ್ಟು ಫ‌ಲಿತಾಂಶ ಸಿಗದಿರಬಹುದು. ಆದರೆ, ಈ ವಿಚಾರದಲ್ಲಿ ಅಧೀರರಾಗಬೇಕಾದ ಅಗತ್ಯವಿಲ್ಲ. ಪರೀಕ್ಷೆಯಲ್ಲಿ ನಪಾಸಾದಾಕ್ಷಣ ಎಲ್ಲಾ ಮುಗಿದುಹೋಯಿತು ಎಂದು ಚಿಂತಿಸುವುದರಲ್ಲಿ ಅರ್ಥವೇ ಇಲ್ಲ. ಮತ್ತೆ ಮರುಪರೀಕ್ಷೆಯ ಅವಕಾಶವಿದ್ದೇ ಇರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನೆನಪಿಡಬೇಕಾದ ಸಂಗತಿಯೆಂದರೆ, ಬದುಕು ಎಲ್ಲರಿಗೂ ಬೆಳೆಯುವ, ಬೆಳಗುವ ಅವಕಾಶಗಳನ್ನು ಖಂಡಿತ ಕಲ್ಪಿಸುತ್ತದೆ. ನಪಾಸಾದಾಕ್ಷಣ ಏನೋ ದೊಡ್ಡ ತಪ್ಪಾಗಿಬಿಟ್ಟಿದೆ ಎಂಬ ಭಾವನೆ, ಕೀಳರಿಮೆ ಖಂಡಿತ ಬೇಡ. ಜೀವನದಲ್ಲಿ ಎದುರಾಗುವ ಅಡ್ಡಿಗಳು ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿಸುವುದಕ್ಕೇ ಬಂದಿರುತ್ತವೆ ಎನ್ನುವುದನ್ನು ಮರೆಯದಿರಿ.

ನಿಮ್ಮೆಲ್ಲರ ಮುಂದೆ ಮತ್ತೆ ಅವಕಾಶವಿದ್ದು, ಈ ಬಾರಿ ಗುಣಾತ್ಮಕ ಮನಃಸ್ಥಿತಿಯೊಂದಿಗೆ ಸಜ್ಜಾಗಿ. ಆಪ್ತರೊಂದಿಗೆ ಮಾತನಾಡಿ, ಮನಸ್ಸನ್ನು ಹಗುರಾಗಿಸಿಕೊಳ್ಳಿ. ಪೋಷಕರೂ ಸಹ ತಮ್ಮ ಮಕ್ಕಳ ಮೇಲೆ ಈ ಫ‌ಲಿತಾಂಶಗಳಿಂದಾಗಿ ಋಣಾತ್ಮಕ ಪರಿಣಾಮ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯ.

ಇನ್ನು, ಫ‌ಲಿತಾಂಶ ಬಂದಾಯಿತು, ಮುಂದೇನು? ಎಂದು ಕೆಲವು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿರುವ ವರದಿಗಳು ಬರುತ್ತಿವೆ. ಕೋವಿಡ್‌-19 ಬಿಕ್ಕಟ್ಟು ಮುಂದುವರಿದಿರುವುದರಿಂದ, ಅವರಲ್ಲಿ ಇಂಥ ಪ್ರಶ್ನೆ ಎದುರಾಗಿರುವುದು ಸಹಜವೇ.

ಆದರೆ, ಶಿಕ್ಷಣ ಇಲಾಖೆ ಆ ಬಗ್ಗೆ ಚಿಂತನೆ ನಡೆಸುತ್ತಿರುವ ಕಾರಣ, ನಿಮಗೆ ಆ ಬಗ್ಗೆ ಅನಗತ್ಯ ಚಿಂತೆ ಬೇಡ. ಎಲ್ಲವೂ ಸರಿಯಾಗುತ್ತದೆ. ಈ ಬಗ್ಗೆ ಹೆಚ್ಚು ನಿಮ್ಮಲ್ಲಿರಲಿ.

ಮುಂದಿನ ಪಯಣಕ್ಕೆ ಎಲ್ಲರಿಗೂ ಆಲ್‌ ದಿ ಬೆಸ್ಟ್‌!

Advertisement

Udayavani is now on Telegram. Click here to join our channel and stay updated with the latest news.

Next