ಕೋಲಾರ: ಜಿಲ್ಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ಹೊಸದಾಗಿ ಕುಳಿತಿದ್ದ 13377 ವಿದ್ಯಾರ್ಥಿಗಳ ಪೈಕಿ 9019 ಮಂದಿ ತೇರ್ಗಡೆಯಾಗಿದ್ದು, ಶೇ.67.42 ಫಲಿ ತಾಂಶದೊಂದಿಗೆ ಜಿಲ್ಲೆ 16ನೇ ಸ್ಥಾನಕ್ಕೇರಿದೆ.
ಕಳೆದ ಬಾರಿ 18ನೇ ಸ್ಥಾನದಲ್ಲಿದ್ದ ಜಿಲ್ಲೆಯಲ್ಲಿ ಖಾಸಗಿ, ಪುನಾರಾವರ್ತಿತ ಹಾಗೂ ಹೊಸ ನೋಂದಣಿ ಸೇರಿ 8061 ಬಾಲಕರು, 8298 ಬಾಲಕಿಯರು ಸೇರಿ ಒಟ್ಟು 16359 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ 9847 ಮಂದಿ ತೇರ್ಗಡೆಯಾಗಿದ್ದಾರೆ.
ಬಾಲಕಿಯರೇ ಮೇಲುಗೈ: ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದ 8061 ಬಾಲಕರ ಪೈಕಿ 4387 ಮಂದಿ ತೇರ್ಗಡೆಯಾಗಿ ಶೇ.54.42 ಫಲಿತಾಂಶ ಬಂದಿದೆ. ಆದರೆ, ಪರೀಕ್ಷೆಗೆ ನೋಂದಾಯಿಸಿದ್ದ 8298 ಬಾಲಕಿ ಯರ ಪೈಕಿ 5460 ಬಾಲಕಿಯರು ತೇರ್ಗಡೆಯಾಗಿ ಶೇ.65.18 ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜಿನ ರೇವಂತ್ 589 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದು, ನಗರದ ಸಹ್ಯಾದ್ರಿ ಕಾಲೇಜಿನ ಕೆ.ನಂದನ್ 587 ಹಾಗೂ ಎಂ.ಶಶಾಂಕ್ 586 ಅಂಕ ಗಳೊಂದಿಗೆ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗ: ನಗರದ ಎಸ್‌ಡಿಸಿ ಕಾಲೇಜಿನ ತುಷಾರ ಎನ್.ಶೆಟ್ಟಿ 593 ಅಂಕಗಳೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದು, ಮಹಿಳಾ ಸಮಾಜ ಕಾಲೇಜಿನ ಉಜ್ರಾಬೇಗಂ 588 ಅಂಕ, ದ್ವಿತೀಯ ಹಾಗೂ ಸಹ್ಯಾದ್ರಿ ಕಾಲೇಜಿನ ಎನ್.ದೀಪ್ತಿ 586 ಅಂಕ, ನಂತರದ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗ: ನಗರದ ಬಾಲಕಿಯರ ಕಾಲೇಜಿನ ಎ.ವಿ.ಅಂಜಲಿ 568 ಅಂಕಗಳೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ, ಮಾಲೂರು ಪಿಯು ಕಾಲೇಜಿನ ಸಿ. ಮಲ್ಲಿಕಾರ್ಜುನ 549 ಅಂಕ, ದ್ವಿತೀಯ ಹಾಗೂ ಆವಣಿ ಪಿಯು ಕಾಲೇಜಿನ ಶಿವಶಂಕರ್ ವರಪ್ರಸಾದ್ 545 ಅಂಕ, ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನದಲ್ಲಿ ಶೇ.82 ಫಲಿತಾಂಶ ಲಭ್ಯ: ವಿಜ್ಞಾನ ವಿಭಾಗದಿಂದ 4390 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಅವರಲ್ಲಿ 3601 ಮಂದಿ ತೇರ್ಗಡೆ ಆಗಿ, ಶೇ.82.63 ಫಲಿತಾಂಶ ಬಂದಿದೆ.
ಕಲಾ ವಿಭಾಗದಲ್ಲಿ 1861 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 681 ಮಂದಿ ತೇರ್ಗಡೆ ಆಗಿ, ಶೇ.36.59 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ 7126 ಹೊಸ ವಿದ್ಯಾರ್ಥಿ ಗಳ ಪೈಕಿ 4737 ಮಂದಿ ತೇರ್ಗಡೆ ಆಗಿ, ಶೇ.66.47 ಫಲಿತಾಂಶ ಲಭ್ಯವಾಗಿದೆ ಎಂದು ಪಿಯು ಉಪ ನಿರ್ದೇಶಕಿ ಗೀತಾ ತಿಳಿಸಿದ್ದಾರೆ.
ಚಿನ್ಮಯ ಕಾಲೇಜಿಗೆ ಶೇ.100 ಫಲಿತಾಂಶ: ಖಾಸಗಿ ಅನುದಾನ ರಹಿತ ಕಾಲೇಜುಗಳ ಪಟ್ಟಿಯಲ್ಲಿ ಚಿನ್ಮಯ ಕಾಲೇಜು ಶೇ.100, ಸಹ್ಯಾದ್ರಿ ಕಾಲೇಜು, ಶೇ.99, ಎಸ್‌ಡಿಸಿ ಪಿಯು ಕಾಲೇಜು ಶೇ.98 ಫಲಿತಾಂಶ ದೊಂದಿಗೆ ಕ್ರಮವಾಗಿ 1,2,3,ನೇ ಸ್ಥಾನ ಪಡೆದಿವೆ. ಅನುದಾನಿತ ಕಾಲೇಜುಗಳಲ್ಲಿ ಬೈರಕೂರು ನೆಹರು ಕೆನಡಿ ಪಿಯು ಕಾಲೇಜು ಶೇ.83, ಕೋಲಾರದ ಆಲ್ ಅಮೀನ್ ಕಾಲೇಜು ಶೇ.80, ಮುಳಬಾಗಿಲಿನಶಾರದಾ ಪಿಯು ಕಾಲೇಜು ಶೇ.76 ಫಲಿತಾಂಶ ದೊಂದಿಗೆ ಕ್ರಮ ವಾಗಿ 1,2,3,ನೇ ಸ್ಥಾನ ಪಡೆದಿವೆ.
ಸರ್ಕಾರಿ ಕಾಲೇಜುಗಳಲ್ಲಿ ಕೆಜಿಎಫ್ನ ಸುಂದರಪಾಳ್ಯ ಸರ್ಕಾರಿ ಕಾಲೇಜು ಶೇ.90, ಕೋಲಾರದ ಮದನಹಳ್ಳಿ ಪಿಯು ಕಾಲೇಜು ಶೇ.75, ದ್ವಿತೀಯ ಹಾಗೂ ಮಾಸ್ತಿ ಸರ್ಕಾರಿ ಪಿಯು ಕಾಲೇಜು ಶೇ.70.4 ಫಲಿತಾಂಶ ಪಡೆದು, ಕ್ರಮವಾಗಿ 1,2,3,ನೇ ಸ್ಥಾನ ಪಡೆದಿವೆ.