Advertisement

ಶೇ.75 ರಷ್ಟು ವಸತಿ ಶಾಲೆಗಳ ಪಿಯುಸಿ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ : ಡಿಸಿಎಂ ಕಾರಜೋಳ

07:53 PM Jul 14, 2020 | sudhir |

ಬೆಂಗಳೂರು: ಕೋವಿಡ್ ಸೊಂಕಿನ‌ ನಡುವೆಯೂ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಅತ್ಯುತ್ತಮವಾಗಿ ಬಂದಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಶೇ.75.3 ರಷ್ಟು ಪಿಯುಸಿ ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ ಮತ್ತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.

Advertisement

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ 66 ವಸತಿ ಶಾಲೆಗಳ 2963 ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆದಿದ್ದರು. ಅವರಲ್ಲಿ ಶೇ.86 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 422 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.1809 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ, 289 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ. 76.4 ರಷ್ಟು ಫಲಿತಾಂಶ ಬಂದಿತ್ತು. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತೇನೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಧೈರ್ಯಗೆಡದೇ, ಇಲಾಖೆಯು ತಮ್ಮೊಂದಿಗೆ ಇದ್ದು, ಆನ್ ಲೈನ್ ತರಬೇತಿ‌ ನೀಡುವ ಮೂಲಕ ಪೂರಕ ಪರೀಕ್ಷೆಗೆ ತಯಾರಿ ಮಾಡಲಿದೆ. ಮರಳಿ ಶ್ರಮಿಸುವ ಮೂಲಕ ಯಶಸ್ವಿಯಾಗಬೇಕು ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲೂ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯು ಮುಂಜಾಗ್ರತಾ ಕ್ರಮಕೈಗೊಂಡು ಶಿಕ್ಷಕರು, ವಿದ್ಯಾರ್ಥಿಗಳು ಸೂಕ್ತ ನಿರ್ದೇಶನಗಳನ್ನು ಪಾಲಿಸುವಂತೆ ಕ್ರಮಕೈಗೊಂಡು‌ ಪಿಯುಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದಿದ್ದಾರೆ. ಮೌಲ್ಯಮಾಪನವನ್ನು ಶೀಘ್ರವಾಗಿ ಪ್ರಕಟಿಸಿದ್ದಾರೆ. ಶಿಕ್ಷಣ ಸಚಿವರು ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸುರಕ್ಷೆತೆಯ ಬಗ್ಗೆ ಕಾಳಜಿ ವಹಿಸಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ಡಿಸಿಎಂ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಕುಮಾರ ನಾಯಕ್ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಘವೇಂದ್ರ ಅವರ ನಿರಂತರ ಮೇಲ್ವಿಚಾರಣೆ, ಸೂಕ್ತ ನಿರ್ದೇಶನಗಳಿಂದ ವಸತಿ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸುಲಲಿತ ಹಾಗೂ ಸುರಕ್ಷಿತವಾಗಿ ಪರೀಕ್ಷೆ ಬರೆದು ಅತ್ಯುತ್ತಮವಾದ ಫಲಿತಾಂಶ ಪಡೆದಿದ್ದಾರೆ. ಅವಿರತವಾಗಿ ಶ್ರಮಿಸಿದ ಈ ಇಬ್ಬರು ಹಿರಿಯ ಅಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಿಗೂ ಅಭಿನಂದಿಸುವುದಾಗಿ ಡಿಸಿಎಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next