ಪುತ್ತೂರು: ಟ್ಯೂಶನ್‌ಗೆ ಹೋಗಿಲ್ಲ. ಆದರೆ ದಿನಂಪ್ರತಿ 6 ಗಂಟೆ ತಪ್ಪದೇ ಓದುತ್ತಿದ್ದೆ. ಕೃಷಿ ಕುಟುಂಬವಾದರೂ ಮನೆಯಲ್ಲಿ ತಂದೆ ತಾಯಿ ವಿದ್ಯೆಗೆ ಮಹತ್ವ ನೀಡಿ ಪ್ರೋತ್ಸಾಹಿಸಿರುವುದರಿಂದ ಉತ್ತಮ ಅಂಕ ಪಡೆದಿರುವುದಕ್ಕೆ ಸಾಧ್ಯವಾಗಿದೆ.
ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿರುವ ಪುತ್ತೂರು ಸಂತ ಫಿಲೋಮಿನಾ ಪ.ಪೂ. ಕಾಲೇಜು ವಿದ್ಯಾರ್ಥಿ ಸ್ವಸ್ತಿಕ್ ಪಿ. ಅವರು ಖುಷಿ ಹಂಚಿಕೊಂಡ ರೀತಿ ಇದು.
ಕೆಯ್ಯೂರು ಗ್ರಾಮದ ಪಳ್ಳತ್ತಡ್ಕ ನಿವಾಸಿಗಳು, ಕೃಷಿಯನ್ನೇ ನೆಚ್ಚಿಕೊಂಡಿ ರುವ ಕೃಷ್ಣಮೂರ್ತಿ ಮತ್ತು ವಿದ್ಯಾ ದಂಪತಿಯ ಪುತ್ರನಾದ ಸ್ವಸ್ತಿಕ್ ಪಿ. ಕಾಲೇಜಿನಲ್ಲಿ ಕಲಿಸಿದ್ದನ್ನೇ ಅಭ್ಯಾಸ ಮಾಡಿ ಉನ್ನತ ಸಾಧನೆ ಮಾಡಿದ್ದಾರೆ.
ಸಂಸ್ಕೃತ, ಎಕಾನಾಮಿಕ್ಸ್, ಸ್ಟಾಟಿಕ್ಸ್ ಮತ್ತು ಅಕೌಂಟೆನ್ಸಿಯಲ್ಲಿ ತಲಾ 100 ಅಂಕ, ಬ್ಯುಸಿನೆಸ್ ಸ್ಟಡೀಸ್‌ನಲ್ಲಿ 99 ಹಾಗೂ ಇಂಗ್ಲಿಷ್‌ನಲ್ಲಿ 95 ಅಂಕ ಗಳಿಸಿದ್ದಾರೆ.
ಪ್ರತೀ ದಿನ ಆರು ಗಂಟೆ ಓದುತ್ತಿದ್ದೆ. 590ಕ್ಕಿಂತ ಹೆಚ್ಚು ಅಂಕ ನಿರೀಕ್ಷಿಸಿದ್ದೆ. ಅದರಂತೆ 594 ಅಂಕ ಬಂದಿರುವುದು ಖುಷಿಯಾಗಿದೆ. ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸಿದೆ ಎಂದು ಸ್ವಸ್ತಿಕ್ ತಿಳಿಸಿದರು.
ಗ್ರಾಮೀಣ ಪ್ರದೇಶದ
ಮಕ್ಕಳು ಕೂಡ ಏಕಾಗ್ರತೆ ಯಿಂದ ಅಭ್ಯಾಸ ಮಾಡಿ ಓದಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಮಗ ಸಾಧಿಸಿದ್ದಾನೆ. ಇಬ್ಬರು ಮಕ್ಕಳ ಸಾಧನೆ ನೋಡಿ ಹೆಮ್ಮೆಯಾಗಿದೆ.
– ಕೃಷ್ಣಮೂರ್ತಿ ವಿದ್ಯಾ, ಹೆತ್ತವರು