ಬೆಂಗಳೂರು : ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಮುದ್ರಿಸುವಂತೆ ಪಿಯು ಇಲಾಖೆ ನಿರ್ದೇಶಕರಿಗೆ ಸೂಚಿಸಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಾವು ಆನ್‌ಲೈನ್‌ನಲ್ಲಿ ನೀಡಿರುವ ಮಾಹಿತಿಯಂತೆ ಯಾವುದಾದರೂ ಒಂದು ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಹಿಂದೆ ಸುತ್ತೋಲೆ ಹೊರಡಿಸಿತ್ತು. ಹಾಗೆಯೇ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಮಾಧ್ಯಮದಲ್ಲೇ ಪರೀಕ್ಷೆ ಬರೆಯಬೇಕು. ಇಲ್ಲವಾದರೆ, ಅಂಥ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದಿಲ್ಲ ಎಂಬ ಖಡಕ್ ಸೂಚನೆಯನ್ನು ಇಲಾಖೆಯಿಂದ ನೀಡಲಾಗಿತ್ತು.
ಶೈಕ್ಷಣಿಕ ವರ್ಷ ಆರಂಭವಾಗಿ ಐದಾರು ತಿಂಗಳ ನಂತರ ಪರೀಕ್ಷೆ ಬರೆಯಲು ಒಂದು ಮಾಧ್ಯಮ ಕಡ್ಡಾಯ ಮಾಡಿರುವ ಇಲಾಖೆಯ ಕ್ರಮಕ್ಕೆ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ಅನ್ಯಾಯವಾಗಲಿದೆ ಎಂಬ ಆಕ್ರೋಶ ಎದ್ದಿತ್ತು.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ನಿಮಯ ಸಡಿಕೆ ನೀಡಬೇಕು ಎಂದು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಉಪನ್ಯಾಸಕರ ಸಂಘದಿಂದ ಪಿಯು ಬೋರ್ಡ್‌ಗೆ ಮನವಿಯನ್ನು ಸಲ್ಲಿಸಲಾಗಿತ್ತು. ಅದೇ ರೀತಿ ವಿಧಾನ ಪರಿಷತ್ ಸದಸ್ಯರೂ ಕೂಡ ಸರ್ಕಾರಕ್ಕೆ ಮನವಿ ಮಾಡಿದ್ದರು.
ವಿದ್ಯಾರ್ಥಿಗಳ ಒತ್ತಾಸೆಯಂತೆ ಪ್ರಸಕ್ತ ಸಾಲಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲೂ ಪ್ರಶ್ನೆ ಪತ್ರಿಕೆ ಮುದ್ರಿಸಿ, ವಿದ್ಯಾರ್ಥಿಗಳಿಗೆ ನೀಡಬೇಕು ಮತ್ತು ಅವರ ಇಚ್ಛೆಯ ಮಾಧ್ಯದಮಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಹಿಂದಿನ ವರ್ಷದಂತೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಪಿಯು ನಿರ್ದೇಶಕರಿಗೆ ಸಚಿವ ತನ್ವೀರ್ ಸೇs… ಆದೇಶಿಸಿದ್ದಾರೆ.