Advertisement

ಅಸಮಾಧಾನದಲ್ಲೇ ಪಿಯು ಪತ್ರಿಕೆ ಮೌಲ್ಯಮಾಪನ

05:47 AM May 29, 2020 | Lakshmi GovindaRaj |

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಮೇ 29ರಿಂದ ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದೆ. ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಅಸಮಾಧಾನ ಮತ್ತು  ಆತಂಕದಲ್ಲೇ ಮೌಲ್ಯಮಾಪನದಲ್ಲಿ ಭಾಗವಹಿಸುವ ನಿರ್ಧಾರ ಮಾಡಿದ್ದಾರೆ.

Advertisement

ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಸುವಂತೆ ಈಗಾಗಲೇ ಪಿಯು ಇಲಾಖೆ ನಿರ್ದೇಶಕರಿಗೆ ಹಾಗೂ ಶಿಕ್ಷಣ ಸಚಿವರಿಗೆ ರಾಜ್ಯ ಪಿಯು  ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಮೂರುಬಾರಿ ಮನವಿ ನೀಡಲಾಗಿದ್ದರೂ, ಸರ್ಕಾರ ಸೂಕ್ತ ಮನ್ನಣೆ ನೀಡಿಲ್ಲ ಎಂದು ಸಂಘ ಆರೋಪಿಸಿದೆ. ಉಪನ್ಯಾಸಕರ ಜೀವನದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿ ದ್ದು, ಸಾರಿಗೆ  ವ್ಯವಸ್ಥೆಯನ್ನೂ ಸರಿಯಾಗಿ ಕಲ್ಪಿಸಿಲ್ಲ.

ದೂರದ ಊರುಗಳಿಂದ ಬರುವವರಿಗೆ ಸಮಸ್ಯೆಯಾಗಿದೆ. ಮೌಲ್ಯಮಾಪನ ಕೇಂದ್ರದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ಆರೋಗ್ಯ ವಿಮೆ  ವಿಸ್ತರಿಸಬೇಕು. ಜಿಲ್ಲಾ ಉಪನಿರ್ದೇಶಕರು, ಇಲಾಖೆಯ ಸೂಚನೆ ಹಾಗೂ ಸರ್ಕಾರ ನೀಡಿರುವ ವಿನಾಯತಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಎ.ಎಚ್‌.ನಿಂಗೇಗೌಡ ಆಗ್ರಹಿಸಿದ್ದಾರೆ. ಒತ್ತಡ ತಂತ್ರದ ಮೂಲಕ  ಉಪನ್ಯಾಸಕರಿಂದ ಕಾರ್ಯ  ನಿರ್ವಹಣೆ ಮಾಡಿಸುವುದರಿಂದ ಮೌಲ್ಯಮಾಪನದಲ್ಲಿ ತಪ್ಪು ಆಗುವ ಸಾಧ್ಯತೆಯಿದೆ.

ಇದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂಬುದನ್ನು ಇಲಾಖೆ  ಮನಗಾಣಬೇಕು. ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಸ್ಪಂದಿಸದೇ ಇರುವುದು ದುರದೃಷ್ಟಕರವಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರುವ ಉಪನ್ಯಾಸಕರು ಸ್ವಯಂ ತೀರ್ಮಾನ ತೆಗೆದುಕೊಂಡುವ ಮೌಲ್ಯಮಾಪನದಲ್ಲಿ  ಭಾಗವಹಿಸಬಹುದು ಎಂದು ಸಂಘ ತೀರ್ಮಾನಿಸಿದೆ ಎಂದು ತಿಳಿಸಿದರು.

ಅನುಷ್ಠಾನ ಸಾಧ್ಯವೇ?: ಇಂಗ್ಲಿಷ್‌ ಹೊರತುಪಡಿಸಿ ಬೇರೆಲ್ಲ ವಿಷಯದ ಪರೀಕ್ಷೆ ಮುಗಿದಿದೆ. ಇದ್ಯಾವುದಕ್ಕೂ ವಿಕೇಂದ್ರೀಕೃತ ವ್ಯವಸ್ಥೆ ನೀಡದ ಸರ್ಕಾರ, ಇಂಗ್ಲಿಷ್‌ ವಿಷಯಕ್ಕೆ ವಿಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆ ಮಾಡಲು ಮುಕ್ತ  ಮನಸ್ಸು ಮಾಡಿದ್ದಾರೆ ಎಂದು ಹೇಳಿದರೆ, ಅನುಷ್ಠಾನಕ್ಕೆ ತರಲು ಸಾಧ್ಯವೇ ಎಂದು ಉಪನ್ಯಾಸಕರ ಸಂಘ ಪ್ರಶ್ನಿಸಿದೆ.

Advertisement

ಮೌಲ್ಯಮಾಪಕರ ಸಹಕಾರ ಅಗತ್ಯ: ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯ ಮಾಪನದಲ್ಲಿ ಉಪನ್ಯಾಸಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಬಾಕಿ ಉಳಿದಿರುವ ಇಂಗ್ಲಿಷ್‌ ಪತ್ರಿಕೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ  ವನ್ನು  ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೇ ನಡೆಸಲಾಗುತ್ತದೆ. ಹಾಗೆಯೇ ಮೌಲ್ಯಮಾಪಕರ ಹಿತವನ್ನೂ ಕಾಯಲಾಗುತ್ತದೆ. ಈಗ ಜಿಲ್ಲಾ ಅಥವಾ ತಾಲೂಕು ಕೇಂದ್ರಕ್ಕೆ ಸಾಗಿಸುವ ಬಗ್ಗೆ ಸಮರ್ಪಕ ನಿರ್ವಹಣೆ ಸಾಧ್ಯವೆ ಎಂಬ ಪರಿಶೀಲನಾ ವರದಿ ಸಲ್ಲಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ.

ಬೆಂಗಳೂರು, ಶಿವಮೊಗ್ಗ, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆಯ ಒಟ್ಟು 43 ಕೇಂದ್ರದಲ್ಲಿ ಪಿಸಿಎಂಬಿ ಹಾಗೂ ಇಂಗ್ಲಿಷ್‌ ಹೊರತುಪಡಿಸಿ ಬೇರೆಲ್ಲ ವಿಷಯದ  ಮೌಲ್ಯಮಾಪನ ನಡೆಯುತ್ತಿದೆ. ಮೌಲ್ಯಮಾಪಕರು ಈ ವಿಚಾರದಲ್ಲಿ ಸೂಕ್ತ ಸಹಕಾರ ಅಗತ್ಯವಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next