Advertisement

ಪಿಯು ಫೇಲ್‌ ಆಗಿ ಪಾಸಾದವರಿಗೆ ದಂಡಾಸ್ತ್ರ!

04:08 PM Jul 13, 2018 | |

ಚನ್ನಗಿರಿ: ಪಿಯು ಪಾಸ್‌ ಮಾಡಿ ಪದವಿ ಪ್ರಮಾಣ ಪತ್ರ ಪಡೆದು ಹುದ್ದೆ ಹಿಡಿಯಬೇಕೆಂಬ ಹಲವು ವಿದ್ಯಾರ್ಥಿಗಳಿಗೆ ದಾವಣಗೆರೆ ವಿಶ್ವವಿದ್ಯಾಲಯ ಶಾಕ್‌ ನೀಡಿದೆ. ಪಿಯುನಲ್ಲಿ ನಪಾಸಾಗಿ ಬಳಿಕ ಉತ್ತೀರ್ಣರಾಗಿ ಪದವಿ ಪ್ರವೇಶಾತಿಗೆ
ಹೋದರೆ ದಾವಿಯ ಪೂರ್ವಾನುಮತಿ ಪತ್ರ ಕಡ್ಡಾಯಗೊಳಿಸಲಾಗಿದ್ದು, ಈ ಪತ್ರ ಪಡೆಯಲು ದಂಡ ತೆರಬೇಕಿದೆ!

Advertisement

ಇಂಥ ನಿಯಮಾವಳಿಯನ್ನು ದಾವಣಗೆರೆ ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಿದ್ದು, ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಶಿಕ್ಷಣವೂ ಉಳ್ಳವರ ಸ್ವತ್ತಾಗಲಿದೆ ಎಂಬುದಕ್ಕೆ ತಾಜಾ ಉದಾಹರಣೆ ಇದಾಗಿದೆ. ಪಿಯುಸಿ, ತತ್ಸಮಾನ ಕೋರ್ಸ್‌, ಡಿಪ್ಲೊಮಾ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡಿ ಪದವಿ ಪಡೆಯಬೇಕೆಂಬ ಬಡ ವಿದ್ಯಾರ್ಥಿಗಳ ಕನಸಿಗೆ ದಾವಿವಿ ಜಾರಿಗೆ ತಂದಿರುವ ನಿಯಾಮವಳಿ ಕೊಡಲಿ ಪೆಟ್ಟು ನೀಡುತ್ತಿದೆ. 

ನಪಾಸಾದವರು, ಕಳೆದ ವರ್ಷ ಹಲವಾರು ಕಾರಣಗಳಿಂದ ಕಾಲೇಜಿಗೆ ದಾಖಲಾಗದವರು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಹೋಗಿ ದ್ವಿತೀಯ ಪಿಯು ಅಂಕ ಪಟ್ಟಿ ತೋರಿಸಬೇಕು. ಬಳಿಕ ವಿವಿ ಸಿಬ್ಬಂದಿ ವಿವಿ ಎಸ್‌ಬಿಐ ಅಕೌಂಟ್‌ಗೆ ದಂಡ ರೂಪದ ಹಣವನ್ನು ಡಿಡಿಯಲ್ಲಿ ಪಾವತಿಸಬೇಕು. ಬಳಿಕ ಅದನ್ನು ತಂದು ತೋರಿಸಿದರೆ ದಾವಣಗೆರೆ ವಿಶ್ವ ವಿದ್ಯಾಲಯದ ಪೂರ್ವಾನುಮತಿ ಪತ್ರ ನೀಡಲಾಗುತ್ತದೆ. ಇದನ್ನು ತಂದು ತೋರಿಸಿದ ಬಳಿಕ ಕಾಲೇಜಿನಲ್ಲಿ ಪ್ರವೇಶಾತಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಹಣ ಇದ್ದವರು ದೂರದೂರುಗಳಿಂದ ಬಂದು ಹಣ ಪಾವತಿಸಿ ಅನುಮತಿ ಪತ್ರ ಪಡೆಯುತ್ತಾರೆ. ಆದರೆ ಹಣ ಇಲ್ಲದ ಬಡ ವಿದ್ಯಾರ್ಥಿಗಳು ಆರ್ಥಿಕ ಹೊರೆಯಿಂದಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚು. ದಂಡ ಪಾವತಿಸಿ ಅನುಮತಿ ಪಡೆಯುವುದು ಬಡ ವಿದ್ಯಾರ್ಥಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

180ಕ್ಕಿಂತಲೂ ಹೆಚ್ಚು ಕಾಲೇಜುಗಳು: ವಿವಿ ವ್ಯಾಪ್ತಿಯಲ್ಲಿ ಸುಮಾರು 180ಕ್ಕಿಂತಲೂ ಖಾಸಗಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ನಪಾಸಾದ ವಿದ್ಯಾರ್ಥಿಗಳು ಪದವಿ ಪ್ರವೇಶಾಕ್ಕಾಗಿ ದಂಡ ಶುಲ್ಕ ಸಹಿತ ಅನುಮತಿ ಪಡೆಯಲು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ದೌಡಾಯಿಸುವಂತಹ ಪರಿಸ್ಥಿತಿ ಎದುರಾಗಿದೆ. 

ಈಗಾಗಲೇ ಮೇ 14ರಿಂದ ಪದವಿ ಪ್ರವೇಶಕ್ಕಾಗಿ ಪ್ರಕಟಣೆ ಹೊರಡಿಸಿದ್ದು, ಜು.16 ಕೊನೆಯ ದಿನ. ಇದರಿಂದ ದಂಡ ಶುಲ್ಕ ಕಟ್ಟಿ ಪ್ರವೇಶ ಪಡೆಯದೆ ಮತ್ತಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುವ ಸನ್ನಿವೇಶ ಸೃಷ್ಟಿಯಾಗಿದೆ.

Advertisement

ಡಿಡಿ ಪಾವತಿಸಿದ ಬಳಿಕವೇ ಅನುಮತಿ: ಪದವಿ ಪ್ರವೇಶಕ್ಕಾಗಿ ಪ್ರತಿ ಫೇಲ್‌ ಆದ ವಿದ್ಯಾರ್ಥಿಗಳಿಂದ ಹಾಗೂ ಪಾಸ್‌ ಆಗಿ ಆರ್ಥಿಕ ಸಮಸ್ಯೆಯಿಂದ ಮನೆಯಲ್ಲಿದ್ದವರು ಕೂಡ 580 ರೂ. ದಂಡ ಪಾವತಿಸಿ ಅನುಮತಿ ಪಡೆಯಬೇಕಿದೆ. 2017-18ನೇ ಶೈಕ್ಷಣಿಕ ಸಾಲಿನಲ್ಲಿ ಪಾಸಾದ ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ಗಳಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಕಾಲೇಜು ಹಂತದಲ್ಲಿ ಪದವಿ ಕೋರ್ಸ್‌ಗಳಿಗೆ ಪ್ರವೇಶ ನೀಡಬಹುದಾಗಿದೆ. ಅದಕ್ಕಿಂತ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ, ತತ್ಸಮಾನ ಕೋರ್ಸ್‌ಗಳಲ್ಲಿ ಪಾಸಾದ ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳಿಗೆ ದಂಡ ಪಾವತಿಸಿದ ಬಳಿಕವೇ ಅನುಮತಿ ಪತ್ರ ನೀಡುವ ಪದ್ಧತಿಯನ್ನು ಪ್ರಸಕ್ತ ವರ್ಷದಿಂದ ಜಾರಿಗೆ ತರಲಾಗಿದೆ. 

ನಪಾಸಾದವರಿಗೆ ದಂಡ ಪಾವತಿಸಿದರೆ ಅನುಮತಿ ನೀಡಬೇಕೆಂಬ ನಿಯಮ 10 ವರ್ಷದಿಂದ  ವಿಶ್ವವಿದ್ಯಾಲಯಗಳಲ್ಲಿ ಜಾರಿಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದೇವೆ. ದ್ವಿತೀಯ ಪಿಯು ಅಥವಾ ಇನ್ನಿತರೆ ಯಾವುದೇ ಕೋರ್ಸ್‌ಗಳಲ್ಲಿ ಫೇಲ್‌ ಆಗಿ ಬಳಿಕ ಉತ್ತೀರ್ಣರಾಗಿದ್ದವರು ಪದವಿ ಪ್ರವೇಶಕ್ಕೆ ದಾವಣಗೆರೆ ವಿವಿಯಿಂದ ಅನುಮತಿ ಪಡೆಯುವುದು ಕಡ್ಡಾಯ.
 ಪ್ರೊ| ಶರಣಪ್ಪ ವಿ. ಹಲಸೆ, ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ

ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದ ಕಳೆದ ವರ್ಷದಲ್ಲಿ ಪದವಿ ಪ್ರವೇಶ ಪಡೆಯಲಾಗಿರಲಿಲ್ಲ. ಈ ಬಾರಿ ಪ್ರವೇಶ ಪಡೆಯಲು ಹೋದರೆ ದಾವಣಗೆರೆ ವಿವಿಯಿಂದ ದಂಡ ಪಾವತಿಸಿ ಅನುಮತಿ ಪತ್ರ ಪಡೆದು ತಂದು ಕೊಟ್ಟರೆ ಮಾತ್ರ ಪ್ರವೇಶ ನೀಡುವುದಾಗಿ ಚನ್ನಗಿರಿ ಕಾಲೇಜಿನಲ್ಲಿ ಹೇಳಿದ್ದರು. ಅದೇ ರೀತಿಯಲ್ಲಿ ವಿವಿಯಲ್ಲಿ 580 ರೂ. ದಂಡ ಪಾವತಿಸಿ ಅನುಮತಿ ಪತ್ರ ಪಡೆದಿದ್ದೇನೆ. 
  ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿ

ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ದಂಡ ರಹಿತ ಪ್ರವೇಶ ನೀಡಬೇಕು ವಿದ್ಯಾರ್ಥಿಗಳ ಹಿತಕ್ಕಾಗಿ  ಅನುಕೂಲವಾಗವ ರೀತಿಯಲ್ಲಿ ವಿಸಿ ನಿರ್ಧಾರ ತೆಗೆದುಕೊಳ್ಳಬೇಕು ಒಂದು ವೇಳೆ ವಿದ್ಯಾರ್ಥಿಗಳಿಗೆ  ಅನಾನುಕೂಲವಾದರೆ ಮುಂದಿನ ದಿನಗಳಲ್ಲಿ ಎಬಿವಿಪಿಯಿಂದ ವಿದ್ಯಾರ್ಥಿಗಳ ಪರವಾಗಿ ನಿಲ್ಲುತ್ತೇವೆ.
  ಪ್ರದೀಪ್‌ ಚನ್ನಗಿರಿ, ಎಬಿವಿಪಿ ದಾವಣಗೆರೆ ವಿಭಾಗ ಸಂಘಟನಾ ಕಾರ್ಯದರ್ಶಿ

„ಸಿ.ಎಸ್‌. ಶಶೀಂದ್ರ

Advertisement

Udayavani is now on Telegram. Click here to join our channel and stay updated with the latest news.

Next