Advertisement

ಪಿಯು ಅಸಮಾನ ಮಾದರಿ ಪ್ರಶ್ನೆಪತ್ರಿಕೆ! ಸಮಾನ ಮಾದರಿಗಾಗಿ ಪ್ರಾಚಾರ್ಯರ ಆಗ್ರಹ

12:13 AM Dec 30, 2022 | Team Udayavani |

ಮಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆಯಲ್ಲಿ “ಸಮಾನ ಮಾದರಿ ಪ್ರಶ್ನೆ’ ನೀತಿಯನ್ನು ಅನ್ವಯಿಸದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

Advertisement

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಉತ್ತೀರ್ಣತೆ ಹಾಗೂ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೇ. 20ರಿಂದ 25 ಅಂಕಗಳ ವಸ್ತುನಿಷ್ಠ (ಆಬೆjಕ್ಟಿವ್‌) ಪ್ರಶ್ನೆಗಳನ್ನು ನೀಡಿ ಎಲ್ಲ ವಿಷಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪ್ರಕಟಿಸಿದೆ. ಇದು ಒಳ್ಳೆಯ ಕ್ರಮವೆಂಬ ಅಭಿಪ್ರಾಯ ಕೇಳಿಬಂದಿದ್ದರೂ ಎಲ್ಲ ವಿಷಯಗಳಿಗೆ ಸಮಾನ ಮಾದರಿ ಪ್ರಶ್ನೆ ನೀತಿ ಯಾಕೆ ಅನ್ವಯಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಕೆಲವೊಂದು ವಿಷಯಗಳ ವಸ್ತುನಿಷ್ಠ ಪ್ರಶ್ನೆಗಳಲ್ಲಿ 5 ಬಹುಆಯ್ಕೆ ಪ್ರಶ್ನೆಗಳು (ಎಂಸಿಕ್ಯೂ), 5 ಬಿಟ್ಟಪದ ತುಂಬಿಸಿ ಪ್ರಶ್ನೆಗಳು, 5 ಹೊಂದಿಸಿ ಬರೆಯಿರಿ ಪ್ರಶ್ನೆಗಳು, 5 ಒಂದು ವಾಕ್ಯದ ಪ್ರಶ್ನೆಗಳನ್ನು ನೀಡಲಾಗಿದೆ. ಇನ್ನು ಕೆಲವು ವಿಷಯಗಳಲ್ಲಿ 10 ಬಹುಆಯ್ಕೆ ಪ್ರಶ್ನೆಗಳು, 5 ಬಿಟ್ಟಪದ ತುಂಬಿಸಿ ಪ್ರಶ್ನೆಗಳು ಹಾಗೂ 5 ಹೊಂದಿಸಿ ಬರೆಯಿರಿ ಪ್ರಶ್ನೆಗಳನ್ನು ನೀಡಲಾಗಿದೆ.

ಆದರೆ ವಸ್ತು ನಿಷ್ಠ ಪ್ರಶ್ನೆಗಳಲ್ಲಿ ಕೆಲವೊಂದು ವಿಷಯದಲ್ಲಿ ಶೇ. 20 ಅಂಕಗಳನ್ನು, ಇನ್ನು ಕೆಲವದ್ದರಲ್ಲಿ ಶೇ. 25 ಅಂಕಗಳನ್ನುನೀಡಲಾಗಿದೆ. ಇದು ಸರಿಯಲ್ಲ. ಎಲ್ಲ ಭಾಷೆ ಹಾಗೂ ಐಚ್ಛಿಕ ವಿಷಯಗಳಲ್ಲಿ (ಆಂತರಿಕ ಅಂಕಗಳಿರದ, ಇರುವ, ಪ್ರಾಯೋಗಿಕ ಪರೀಕ್ಷೆಯಿಲ್ಲದ, ಪರೀಕ್ಷೆ ಇರುವ) ಸಮಾನ ಶೇಕಡಾವಾರು ವಸ್ತುನಿಷ್ಠ ಪ್ರಶ್ನೆಗಳನ್ನು ನೀಡಬೇಕು ಎಂಬುದು ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಸಮಾನ ಮಾದರಿ ಪ್ರಶ್ನೆ ಪತ್ರಿಕೆ ಒದಗಿಸುವಂತೆ ಮಂಡಳಿಯ ಕದ ತಟ್ಟಿದೆ.

ವರ್ಷದ ಕೊನೆಯಲ್ಲಿ ಬದಲಾವಣೆ ಸಲ್ಲದು
ಪ್ರಶ್ನೆ ಪತ್ರಿಕೆ ಮಾದರಿಯನ್ನು ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಬದಲಾವಣೆ ಮಾಡುವುದರಿಂದ ವಿಜ್ಞಾನೇತರ ವಿಷಯಗಳ ವಿದ್ಯಾರ್ಥಿಗಳಿಗೆ ವಸ್ತುನಿಷ್ಠ ಪ್ರಶ್ನೆಗಳಿಗೆ ಪೂರ್ವ ತಯಾರಿಯಿಲ್ಲದೆ ಉತ್ತರಿಸುವುದು ಕಷ್ಟ ಸಾಧ್ಯ. ಹಾಗಾಗಿ ಈ ವಿಷಯಗಳಲ್ಲಿ ಇದಕ್ಕೆ ಅನುಗುಣವಾಗಿ “ಪ್ರಶ್ನಾಕೋಶ’ವನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿ ಅದರಿಂದಲೇ ಮುಂಬರುವ ವಾರ್ಷಿಕ ಪರೀಕ್ಷೆಗಳಿಗೆ ವಸ್ತುನಿಷ್ಠ ಪ್ರಶ್ನೆಗಳನ್ನು ನೀಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂಬುದು ಪ್ರಾಚಾರ್ಯರ ಅಭಿಪ್ರಾಯ.

Advertisement

ವಿದ್ಯಾರ್ಥಿಗಳ ಉತ್ತೀರ್ಣತೆ ಹಾಗೂ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪ್ರಕಟಿಸಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಹೆಜ್ಜೆ. ಆದರೆ ಕೆಲವು ವಿಷಯಗಳಲ್ಲಿ ಶೇ. 20 ಅಂಕಗಳನ್ನು, ಇನ್ನು ಕೆಲವು ವಿಷಯಗಳಲ್ಲಿ ಶೇ. 25 ವಸ್ತುನಿಷ್ಠ ಪ್ರಶ್ನೆಗಳನ್ನು ನೀಡಿರುವುದು ಸೂಕ್ತವಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಬದಲಾವಣೆ ನಿರೀಕ್ಷಿಸಿ ಬೆಂಗಳೂರಿನ ಮಂಡಳಿಗೆ ಪತ್ರ ಬರೆಯಲಾಗಿದೆ.
– ಗಂಗಾಧರ ಆಳ್ವ, ಅಧ್ಯಕ್ಷರು,ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next