Advertisement
ಪ್ರಸಕ್ತ ಸಾಲಿನ (2022-23)ನೇ ಸಾಲಿನ ಪದವಿ ಪೂರ್ವ ಪರೀಕ್ಷೆ ಗಳನ್ನು ನೂತನ ಮಂಡಳಿ ಮೂಲಕ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಪರೀಕ್ಷಾ ಕಾರ್ಯ ನಿರ್ವಹಣೆಯಲ್ಲಿ ಅನುಭವ ಇರುವ ಅಧಿಕಾರಿ ಹಾಗೂ ಸಿಬಂದಿಯನ್ನು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಪದವಿ ಪೂರ್ವ ಪರೀಕ್ಷಾ ಕಾರ್ಯ ಪೂರ್ಣ ಗೊಳ್ಳುವವರೆಗೆ ನಿಯೋಜನೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಹೊಸ ಪರೀಕ್ಷಾ ಮಂಡಳಿ ನಡೆಸುವ ಪದವಿ ಪೂರ್ವ ಶಿಕ್ಷಣ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಈ ಬಾರಿ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳಿವೆ. ಒಂದು ಪ್ರಶ್ನೆಗೆ ನಾಲ್ಕು ಆಯ್ಕೆ ಇರಲಿದ್ದು, ವಿದ್ಯಾರ್ಥಿಗಳು ಸುಲಭವಾಗಿ ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಿ 20 ಅಂಕ ಗಳಿಸಲು ಸಹಕಾರಿಯಾಗಲಿದೆ. ಇದು ಫಲಿತಾಂಶವನ್ನೂ ಹೆಚ್ಚಿಸಲಿದೆ ಎಂಬುದು ಇಲಾಖೆಯ ನಿರೀಕ್ಷೆ.
Related Articles
ಎಸೆಸೆಲ್ಸಿ ಮಂಡಳಿ ಹಾಗೂ ಪಿಯು ಇಲಾಖೆ ವಿಲೀನ ಪ್ರಕ್ರಿಯೆಗೆ ಪ.ಪೂ. ಇಲಾಖೆಯಲ್ಲಿ ಪರ-ವಿರೋಧ ವ್ಯಕ್ತವಾಗುತ್ತಿದೆ.ವಿಲೀನದಿಂದ ಮಂಡಳಿ ವ್ಯಾಪ್ತಿಯ 9, 10ನೇ ತರಗತಿಗಳಿಗೆ ಹಿರಿಯ ಉಪನ್ಯಾಸಕರು ಪಾಠ ಮಾಡಲು ಹೋಗಬೇಕಾಗಬಹುದು. ಇದು ಹಿಂಭಡ್ತಿ ಎನ್ನಿಸಬಹುದು. ಜತೆಗೆ, ಬಹು ಆಯ್ಕೆ ಪ್ರಶ್ನೆಯಿಂದ ತೇರ್ಗಡೆ ಆಗುವವರ ಸಂಖ್ಯೆ ಹೆಚ್ಚಬಹುದು. ಆದರೆ ಶಿಕ್ಷಣದ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂಬುದು ವಿಲೀನವನ್ನು ವಿರೋಧಿಸುವವರ ವಾದ. ಮಂಡಳಿ ವಿಲೀನದಿಂದ ಪ.ಪೂ. ವಿಭಾಗಕ್ಕೂ ಪ್ರತ್ಯೇಕ ಆಡಳಿತ, ಶಿಕ್ಷಣಕ್ಕೆ ನಿರ್ವಹಣ ವಿಭಾಗ ದೊರೆತು ಸಿಬಂದಿ ಸಂಖ್ಯೆ ಹೆಚ್ಚಾಗಲಿದೆ. ಪ್ರೌಢಶಾಲಾ ಶಿಕ್ಷಕರ ಜತೆಗೆ ಪಿಯು ಅಧಿಕಾರಿ, ಸಿಬಂದಿಗೂ ಮುಂಭಡ್ತಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಪಿಯು ಮೂಲ ಸೌಲಭ್ಯ ಹೆಚ್ಚಾಗಲಿದೆ. 9-10ನೇ ತರಗತಿಗಳಿಗೂ ಉಪನ್ಯಾಸಕರು ಬೋಧಿಸುವುದರಿಂದ ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂಬುದು ವಿಲೀನವನ್ನು ಬೆಂಬಲಿಸುವವರ ವಾದ.
Advertisement
– ಎಚ್.ಕೆ. ನಟರಾಜ