ರಾಯಚೂರು: ಮಾ.4ರಿಂದ 23ರವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ದುರುಗೇಶ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ, ಕುಡಿವ ನೀರು, ಶೌಚಗೃಹ ವ್ಯವಸ್ಥೆ, ಸುಸಜ್ಜಿತ ಪೀಠೊಪಕರಣಗಳನ್ನು ಒದಗಿಸಬೇಕು. ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಎಂದರು.
ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಬಳಕೆ, ಪರೀಕ್ಷಾರ್ಥಿಗಳು ನಕಲು ಮಾಡುವುದು, ನಕಲು ಮಾಡಲು ಸಹಾಯ ಮಾಡುವುದು, ಪ್ರಮುಖವಾಗಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ಪರೀಕ್ಷಾ ಅವಧಿಯಲ್ಲಿ ಯಾವುದೇ ವದಂತಿಗಳು ಹರಡಲು ಅವಕಾಶ ನೀಡಬಾರದು. ಸೂಸುತ್ರವಾಗಿ ಪರೀಕ್ಷೆ =ನಡೆಯಲು ಅನುಕೂಲವಾಗುವಂತೆ ವಿವಿಧ ಸಮಿತಿ ರಚಿಸಲಾಗಿದೆ. ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಡಿವೈಎಸ್‌ಪಿ ಶೀಲವಂತ ಜಿಲ್ಲೆಯ ಎಲ್ಲ ತಹಶೀಲ್ದಾರರು, ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳಿದ್ದರು.
36 ಪರೀಕ್ಷಾ ಕೇಂದ್ರಗಳು: ದ್ವಿತೀಯ ಪಿಯು ಪರೀಕ್ಷೆಗಳಿಗಾಗಿ ಜಿಲ್ಲೆಯಲ್ಲಿ 36 ಪರೀಕ್ಷಾ ಕೇಂದ್ರಗಳಿದ್ದು, ರಾಯಚೂರು ತಾಲೂಕಿನಲ್ಲಿ ಸಾಮಾನ್ಯ 9, ಸೂಕ್ಷ್ಮ 3 ಸೇರಿ 12 ಕೇಂದ್ರಗಳಿವೆ. ಸಿಂಧನೂರು ತಾಲೂಕಿನಲ್ಲಿ ಸಾಮಾನ್ಯ 4, ಸೂಕ್ಷ್ಮ 4 ಸೇರಿ 8 ಕೇಂದ್ರಗಳು. ಮಾನ್ವಿ ತಾಲೂಕಿನಲ್ಲಿ ಸಾಮಾನ್ಯ 1, ಸೂಕ್ಷ್ಮ4 ಸೇರಿ 5 ಕೇಂದ್ರಗಳು. ಲಿಂಗಸುಗೂರು ತಾಲೂಕಿನಲ್ಲಿ ಸಾಮಾನ್ಯ 1, ಸೂಕ್ಷ್ಮ 7 ಸೇರಿ ಒಟ್ಟು 8 ಕೇಂದ್ರಗಳು. ದೇವದುರ್ಗ ತಾಲೂಕಿನಲ್ಲಿ ಸಾಮಾನ್ಯ 1, ಸೂಕ್ಷ್ಮ 2 ಸೇರಿ 3 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 20,382 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವರು. ಪ್ರತಿ ಕೊಠಡಿಯೊಳಗೆ ಕಡ್ಡಾಯವಾಗಿ ಗೋಡೆ ಗಡಿಯಾರ ಇರಬೇಕು, ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶ ನಿಷೇಧಿತ ಪ್ರದೇಶವಾಗಿದ್ದು, ಯಾವುದೇ ಜೆರಾಕ್ಸ್ ಸೆಂಟರ್‌ಗಳು ಇರಬಾರದು. ಸಾಮಾನ್ಯ ಪರೀಕ್ಷಾ ಕೇಂದ್ರಗಳಿಗೆ 2ರಿಂದ 4 ಪೊಲೀಸರು ಹಾಗೂ ಸೂಕ್ಷ ಪರೀಕ್ಷಾ ಕೇಂದ್ರಗಳಿಗೆ 4ರಿಂದ 6 ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸುತ್ತಿದ್ದು, ಕಡ್ಡಾಯವಾಗಿ ಒಬ್ಬ ಮಹಿಳಾ ಪೇದೆಯನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.