ಕಲಬುರಗಿ: ಜಿಲ್ಲಾದ್ಯಂತ 21,308 ಮಕ್ಕಳು ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯನ್ನು ಸುಸೂತ್ರವಾಗಿ ಬರೆದಿದ್ದು, ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿತು.
ಲಾಕ್‌ಡೌನ್ ಮುಂದೂಡಲ್ಪಟ್ಟಿದ್ದ ಇಂಗ್ಲಿಷ್ ಪರೀಕ್ಷೆ ಜಿಲ್ಲೆಯ 47 ಪರೀಕ್ಷಾ ಕೇಂದ್ರಗಳಲ್ಲೂ ಬಹುತೇಕ ಸುಗಮವಾಗಿ ಜರುಗಿತು. ಹೊರ ರಾಜ್ಯದಿಂದ ಬಂದ ಐವರು ಮತ್ತು ಹೊರ ಜಿಲ್ಲೆಗಳ 449 ವಿದ್ಯಾರ್ಥಿಗಳು ಸೇರಿ ಒಟ್ಟು 23,058 ಮಕ್ಕಳು ಪರೀಕ್ಷೆ ಬರೆಯಬೇಕಿತ್ತು. ಇದರಲ್ಲಿ 21,308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಹೊರ ಜಿಲ್ಲೆಯ ಮೂವರು ಸೇರಿ 1,750 ವಿದ್ಯಾರ್ಥಿಗಳು ಗೈರಾದರು. ಉತ್ತರ ಪ್ರದೇಶದ ಗೋರಖಪುರದಿಂದ ಆಗಮಿಸಿದ ವಿದ್ಯಾರ್ಥಿ ನಗರದ ನ್ಯಾಷನಲ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರೆ, ಮಹಾರಾಷ್ಟ್ರದ ಪುಣೆ, ಉದಯಗಿರಿ ಮತ್ತು ಅಕ್ಕಲಕೋಟೆಯಿಂದ ಬಂದ ವಿದ್ಯಾರ್ಥಿಗಳು ಬೇರೆ-ಬೇರೆ ಕೇಂದ್ರಗಳಲ್ಲಿ ಪರೀಕ್ಷೆಗೆ ಕುಳಿತಿದ್ದರು. ಹೊರ ರಾಜ್ಯ ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆಯೇ ಬಂದರು: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಅವಧಿಗೂ ಮುನ್ನ ಪರೀಕ್ಷಾ ಕೇಂದ್ರಗಳ ಎದುರು ಬಂದು ನೆರೆದಿದ್ದರು. ಸ್ನೇಹಿತರು, ಪಾಲಕರು ಒಟ್ಟಾಗಿ ಸೇರಿದ್ದರಿಂದ ಕೆಲ ಕೇಂದ್ರಗಳ ಮುಂದೆ ಅಂತರ ಪಾಲನೆ ಇರಲಿಲ್ಲ. ವಿದ್ಯಾರ್ಥಿಗಳು ಪರಸ್ಪರ ಕುಶಲೋಪರಿ ನಡೆಸಿದ ದೃಶ್ಯಗಳು ಕಂಡು ಬಂದವು. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಜರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಯಿತು. ಬೆಳಗ್ಗೆ 8.15ರಿಂದಲೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಬಿಡಲಾಯಿತು. ಪರೀಕ್ಷೆಗೆ ಒಳಗಡೆ ಹೋಗುವಾಗ ಅಂತರ ಪಾಲಿಸಿಕೊಂಡು ಹೆಜ್ಜೆ ಹಾಕಿದರು. ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೂ ಪರೀಕ್ಷೆ ನಡೆಯಿತು. ಕಾರಣಾಂತರಗಳಿಂದ ಐದತ್ತು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು.
ಅಫಜಲಪುರ: ಕೋವಿಡ್ ದಿಂದಾಗಿ ಕಳೆದ ತಿಂಗಳು ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ತಾಲೂಕಿನ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆಯಿತು. ತಾಲೂಕಿನ ಕರ್ಜಗಿ ಪರೀಕ್ಷಾ ಕೇಂದ್ರದಲ್ಲಿ 416 ವಿದ್ಯಾರ್ಥಿಗಳ ಪೈಕಿ 341 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ 75 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪಟ್ಟಣದ ಮಹಾಂತಮ್ಮ ಪಾಟೀಲ್ ಪಿಯು ಕಾಲೇಜಿನಲ್ಲಿ 295 ವಿದ್ಯಾರ್ಥಿಗಳ ಪೈಕಿ 263 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 32 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಸರ್ಕಾರಿ ಪಿಯು ಕಾಲೇಜಿನಲ್ಲಿ 436 ವಿದ್ಯಾರ್ಥಿಗಳ ಪೈಕಿ 383 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 53 ವಿದ್ಯಾರ್ಥಿಗಳು ಗೈರಾಗಿದ್ದಾರೆ, ಎಲ್ಲ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಮೂರು ಪರೀಕ್ಷಾ ಕೇಂದ್ರಗಳ ಮುಖ್ಯ ಅಧ್ಯಕ್ಷರು ಹಾಗೂ ಪ್ರಾಚಾರ್ಯರಾದ ಚಂದ್ರಕಾಂತ ಬುರಕಲ್, ಐ.ಜಿ ಅಂಜುಟಗಿ ಹಾಗೂ ಪರಮೇಶ್ವರ ಧನ್ನಿ ತಿಳಿಸಿದ್ದಾರೆ.
ಆಳಂದ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿನ ಒಟ್ಟು ಐದು ಪರೀಕ್ಷಾ ಕೇಂದ್ರಗಳಲ್ಲಿ ಸುಮಾರು 1600 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದರು. ಪಟ್ಟಣದಲ್ಲಿನ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪಪೂ ಕಾಲೇಜು, ಮಾದನಹಿಪ್ಪರಗಾ ಜೂನಿಯರ್ ಕಾಲೇಜು ಹಾಗೂ ಪಟ್ಟಣದಲ್ಲಿನ ಖಾಸಗಿ ಆರ್‌ಎಂಎಲ್ ಕಾಲೇಜು ಹಾಗೂ ಎಸ್‌ಆರ್‌ಜಿ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳಿಗೆ ಯಾವುದೇ ಭಯ ಭೀತಿ ಇಲ್ಲದೆ ತೆರಳಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪರೀಕ್ಷೆ ಬರೆದು ನೆಮ್ಮದಿ ನಿಟ್ಟುಸಿರು ಬಿಟ್ಟರು. ಆರ್.ಎಂ.ಎಲ್ ಕಾಲೇಜಿನಲ್ಲಿ ಆರ್‌ಬಿಎಸ್‌ಕೆ ತಂಡದ ಡಾ| ವಿನಾಯಕ ತಾಟಿ ನೇತೃತ್ವದಲ್ಲಿ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ, ಆರೋಗ್ಯ ಸಿಬ್ಬಂದಿ ಶ್ರೀಶೈಲ ಸೇರಿ ಪೊಲೀಸ್ ಇಲಾಖೆಯ ಸಿಬ್ಬಂದಿ, ಕಾಲೇಜಿನ ಪ್ರಾಚಾರ್ಯರು ಸೇರಿ ಕೋವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಿದರು.